Advertisement

ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್‌ಗೆ ಗೆಲುವು: ಸೋತರೂ ಪ್ಲೇ ಆಫ್ ನಲ್ಲುಳಿದ ಆರ್‌ಸಿಬಿ

11:30 PM Nov 02, 2020 | mahesh |

ಅಬುಧಾಬಿ: ಸೋತರೂ ಪ್ಲೇ ಆಫ್ ನಲ್ಲಿ ಸ್ಥಾನ ಉಳಿಸಿಕೊಂಡ ಬೆಂಗಳೂರು, ಗೆದ್ದು 2ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್‌! ಇದು ಸೋಮವಾರದ ಐಪಿಎಲ್‌ ಪಂದ್ಯದ ಒಂದು ಸಾಲಿನ ಮ್ಯಾಚ್‌ ರಿಪೋರ್ಟ್‌. ಬೆಂಗಳೂರು ನೀಡಿದ್ದ 152 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಮುಟ್ಟಿದ ಡೆಲ್ಲಿ ಕ್ಯಾಪಿಟಲ್‌ ಪ್ಲೇಆಫ್ನಲ್ಲಿ 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು. 2ನೇ ಸ್ಥಾನದಲ್ಲಿದ್ದ ಬೆಂಗಳೂರು 3ನೇ ಸ್ಥಾನಕ್ಕೆ ಕುಸಿತ ಕಂಡಿತು.

Advertisement

ಸದ್ಯ ಪ್ಲೇಆಫ್ ನಲ್ಲಿ 3 ತಂಡಗಳ ಸ್ಥಾನ ಗಟ್ಟಿಯಾಗಿದ್ದು, 4ನೇ ತಂಡವಾಗಿ ಸನ್‌ ರೈಸರ್ಸ್‌ ಹೈದರಾಬಾದ್‌ ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ನಡುವೆ ಫೈಟ್‌ ಇದೆ. ಅಂದರೆ, ಮಂಗಳವಾರ ಮುಂಬೈ ಮತ್ತು ಸನ್‌ರೈಸರ್ಸ್‌ ನಡುವೆ ಕಡೇ ಲೀಗ್‌ ಪಂದ್ಯವಿದ್ದು, ಈ ಪಂದ್ಯದಲ್ಲೇನಾದರೂ ಹೈದರಾಬಾದ್‌ ಗೆದ್ದರೆ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ. ಕೋಲ್ಕತಾ ಕೂಟದಿಂದ ಹೊರಬೀಳಲಿದೆ. ಒಂದು ವೇಳೆ ಹೈದರಾಬಾದ್‌ ಸೋತರೆ, ಪ್ಲೇಆಫ್ನಲ್ಲಿ ಈಗಿರುವ ನಾಲ್ಕು ತಂಡಗಳೇ ಉಳಿಯಲಿವೆ.

ಮಿಂಚಿದ ರಹಾನೆ, ಧವನ್‌
ಬೆಂಗಳೂರು ನೀಡಿದ್ದ ಗುರಿ ಮುಟ್ಟುವಲ್ಲಿ ಅಜಿಂಕ್ಯ ರಹಾನೆ ಮತ್ತು ಶಿಖರ್‌ ಧವನ್‌ ಪಾತ್ರ ನಿರ್ಣಾಯಕವಾಯಿತು. ಆರಂಭಿಕನಾಗಿ ಬಂದ ಧವನ್‌ 41 ಎಸೆತಗಳಲ್ಲಿ 54 ರನ್‌ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಪೃಥ್ವಿ ಶಾ ಈ ಪಂದ್ಯದಲ್ಲೂ ವೈಫ‌ಲ್ಯ ಅನುಭವಿಸಿದರು. ಶಾ ಔಟಾದ ನಂತರ ಬಂದ ಅಜಿಂಕ್ಯ ರಹಾನೆ 46 ಎಸೆತಗಳಲ್ಲಿ 60 ರನ್‌ ಗಳಿಸಿದರು. ಹಾಗೆಯೇ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕಡೆಗೆ ಪಂತ್‌ ಮತ್ತು ಸ್ಟಾನಿಸ್‌ ಪಂದ್ಯ ಗೆಲ್ಲಿಸಿಕೊಟ್ಟರು. ಬೆಂಗಳೂರು ಪರ 4 ಓವರ್‌ಗಳಲ್ಲಿ 26 ರನ್‌ ನೀಡಿ 2 ವಿಕೆಟ್‌ ಪಡೆದ ಶಹಾºಸ್‌ ಅಹ್ಮದ್‌ ಯಶಸ್ವೀ ಬೌಲರ್‌ ಎನ್ನಿಸಿದರು.

ಬೆಂಗಳೂರು ಸಾಧಾರಣ ಮೊತ್ತ
ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ರಾಯಲ್‌ ಚಾಲೆಂಜರ್ಸ್‌ ಆಫ್ ಬೆಂಗಳೂರು ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 7 ವಿಕೆಟಿಗೆ 152 ರನ್‌ ಪೇರಿಸಿತು. ಪಡಿಕ್ಕಲ್‌ ಅವರ 5ನೇ ಅರ್ಧ ಶತಕ, ಎಬಿಡಿ ಅವರ ಬಿರುಸಿನ ಬ್ಯಾಟಿಂಗ್‌, ಡೆಲ್ಲಿಯ ಬಿಗಿ ಬೌಲಿಂಗ್‌ ಮೊದಲ ಸರದಿಯ ಹೈಲೈಟ್‌ ಆಗಿತ್ತು.

ಆರಂಭಕಾರ ಜೋಶ್‌ ಫಿಲಿಪ್‌ (12) ಅವರನ್ನು ಆರ್‌ಸಿಬಿ ಬಹಳ ಬೇಗ ಕಳೆದುಕೊಂಡಿತು. ದ್ವಿತೀಯ ವಿಕೆಟಿಗೆ ಜತೆಗೂಡಿದ ದೇವದತ್ತ ಪಡಿಕ್ಕಲ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ತಂಡವನ್ನು ಆಧರಿಸುವ ಕೆಲಸದಲ್ಲಿ ತೊಡಗಿದರು. ಆದರೆ ರನ್‌ ಗತಿಯಲ್ಲಿ ಪ್ರಗತಿಯಾಗಲಿಲ್ಲ. ಈ ನಡುವೆ ಪಡಿಕ್ಕಲ್‌ ನೂತನ ಮೈಲಿಗಲ್ಲೊಂದನ್ನು ನೆಟ್ಟರು. 25 ರನ್‌ ಗಳಿಸಿದ ವೇಳೆ, ಪದಾರ್ಪಣ ಐಪಿಎಲ್‌ ಋತುವಿನಲ್ಲೇ ಅತ್ಯಧಿಕ ರನ್‌ ಬಾರಿಸಿದ ಭಾರತದ “ಅನ್‌ ಕ್ಯಾಪ್ಡ್ ಪ್ಲೇಯರ್‌’ ಎನಿಸಿದರು. ಶ್ರೇಯಸ್‌ ಅಯ್ಯರ್‌ 2015ರಲ್ಲಿ ನಿರ್ಮಿಸಿದ 439 ರನ್ನುಗಳ ದಾಖಲೆಯನ್ನು ಅವರು ಮುರಿದರು. ಬಳಿಕ 5ನೇ ಅರ್ಧ ಶತಕದೊಂದಿಗೆ ಮೆರೆದರು. ಮೊದಲ ಋತುವಿನಲ್ಲೇ ಅತ್ಯಧಿಕ ಫಿಫ್ಟಿ ಬಾರಿಸಿದ ಭಾರತದ ಅನ್‌ಕ್ಯಾಪ್ಡ್ ಪ್ಲೇಯರ್‌ ಎಂಬ ಹಿರಿಮೆಗೂ ಪಾತ್ರರಾದರು. ಶಿಖರ್‌ ಧವನ್‌ (2008) ಮತ್ತು ಶ್ರೇಯಸ್‌ ಅಯ್ಯರ್‌ (2015) ಅವರ 4 ಅರ್ಧ ಶತಕಗಳ ದಾಖಲೆ ಪತನಗೊಂಡಿತು.

Advertisement

ಪವರ್‌ ಪ್ಲೇ ಅವಧಿಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 40 ರನ್‌ ಮಾಡಿತು. ಅರ್ಧ ಹಾದಿ ಕ್ರಮಿಸುವ ವೇಳೆ ಈ ಮೊತ್ತ 60ಕ್ಕೆ ಏರಿತು. 13ನೇ ಓವರ್‌ನಲ್ಲಿ ಆರ್‌. ಅಶ್ವಿ‌ನ್‌ ನಾಯಕ ಕೊಹ್ಲಿ ಅವರ ವಿಕೆಟ್‌ ಉರುಳಿಸಿದರು. ಆರ್‌ಸಿಬಿ ಕಪ್ತಾನನ ಹೊಡೆತ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಕ್ಯಾಚ್‌ ಆಯಿತು. ಕೊಹ್ಲಿ ಗಳಿಕೆ 24 ಎಸೆತಗಳಿಂದ 29 ರನ್‌ (2 ಬೌಂಡರಿ, 1 ಸಿಕ್ಸರ್‌). ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 57 ರನ್‌ ಒಟ್ಟುಗೂಡಿತು.

15ನೇ ಓವರಿನಲ್ಲಿ ಪಡಿಕ್ಕಲ್‌ ಅವರ ಅರ್ಧ ಶತಕ ಮತ್ತು ತಂಡದ 100 ರನ್‌ ಒಟ್ಟಿಗೇ ದಾಖಲಾಯಿತು. ಆದರೆ 16ನೇ ಓವರಿನಲ್ಲಿ ನೋರ್ಜೆ ಆರ್‌ಸಿಬಿಗೆ ಅವಳಿ ಆಘಾತವಿಕ್ಕಿದರು. ಪಡಿಕ್ಕಲ್‌ ಮತ್ತು ಕ್ರಿಸ್‌ ಮಾರಿಸ್‌ ಅವರನ್ನು ಒಟ್ಟಿಗೇ ಪೆವಿಲಿಯನ್ನಿಗೆ ಅಟ್ಟಿದರು. ಪಡಿಕ್ಕಲ್‌ 41 ಎಸೆತಗಳಿಂದ 50 ರನ್‌ ಬಾರಿಸಿದರೆ (5 ಬೌಂಡರಿ), ಮಾರಿಸ್‌ ಖಾತೆ ತೆರೆಯಲು ವಿಫ‌ಲರಾದರು. ಆರ್‌ಸಿಬಿಯ ದೊಡ್ಡ ಸ್ಕೋರಿಗೆ ಬ್ರೇಕ್‌ ಬಿತ್ತು.
ಎಬಿಡಿ 21 ಎಸೆತಗಳಿಂದ 35 ರನ್‌ ಹೊಡೆದರು (1 ಬೌಂಡರಿ, 2 ಸಿಕ್ಸರ್‌). ಡೆಲ್ಲಿ ಪರ ನೋರ್ಜೆ 3, ರಬಾಡ 2 ವಿಕೆಟ್‌ ಕಿತ್ತು ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next