Advertisement

ಆರ್‌ಸಿಬಿ-ಮುಂಬೈ: ಸೋತವರ ಸೆಣಸಾಟ

03:27 AM Mar 28, 2019 | Sriram |

ಬೆಂಗಳೂರು: ಐಪಿಎಲ್‌ನ ನತದೃಷ್ಟ ತಂಡ ರಾಯಲ್‌ ಚಾಲೆಂಜರ್ ಬೆಂಗಳೂರು ಗುರುವಾರ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ 3 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಲಿಳಿಯಲಿದೆ. ಇದು ಪ್ರಸಕ್ತ ಋತುವಿನಲ್ಲಿ ಎರಡೂ ತಂಡಗಳಿಗೆ ಎರಡನೇ ಪಂದ್ಯ. ಇತ್ತಂಡಗಳು ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿವೆ. ಹೀಗಾಗಿ ಒಂದು ತಂಡಕ್ಕೆ ಇಲ್ಲಿ ಗೆಲುವಿನ ಖಾತೆ ತೆರೆಯುವ ಅವಕಾಶವಿದೆ. ಇದು ಯಾರಿಗೆ ಎಂಬುದು ಕುತೂಹಲದ ಸಂಗತಿ.

Advertisement

12ನೇ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಕೊಹ್ಲಿ ತಂಡ ಚೆನ್ನೈಯಲ್ಲಿ ಧೋನಿ ಪಡೆ ವಿರುದ್ಧ ಜುಜುಬಿ 70 ರನ್ನಿಗೆ ಕುಸಿದು ಹೀನಾಯ ಸೋಲನುಭವಿಸಿತ್ತು. ಇನ್ನೊಂದೆಡೆ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೇ ಮುಂಬೈ ತಂಡ ರಿಷಬ್‌ ಪಂತ್‌ ನೀಡಿದ ಪಂಥಾಹ್ವಾನ ಸ್ವೀಕರಿಸಲು ವಿಫ‌ಲವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಗಿತ್ತು. ಎರಡೂ ತಂಡಗಳ ನಾಯಕರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದರು. ಇವರಿಬ್ಬರು ಸಿಡಿಯುವು ದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ತಂಡದ ಜಯದಲ್ಲಿ ಇವರ ಸ್ಫೋಟಕ ಬ್ಯಾಟಿಂಗ್‌ ನಿರ್ಣಾಯಕ ಪಾತ್ರ ವಹಿಸುವುದೇ ಇದಕ್ಕೆ ಕಾರಣ.

ಲಸಿತ ಮಾಲಿಂಗ ಆಗಮನ
ಮುಂಬೈ ತಂಡ ಎರಡು ಕಾರಣಗಳಿಂದಾಗಿ ತುಂಬು ಆತ್ಮವಿಶ್ವಾಸದಲ್ಲಿದೆ. ಒಂದು, ಶ್ರೀಲಂಕಾದ ಪ್ರಧಾನ ವೇಗಿ ಲಸಿತ ಮಾಲಿಂಗ ಈ ಪಂದ್ಯಕ್ಕೆ ಲಭ್ಯವಾಗುತ್ತಿರುವುದು. ಎರಡು, ಮೊದಲ ಪಂದ್ಯದ ವೇಳೆ ಭುಜದ ನೋವಿಗೊಳಗಾಗಿದ್ದ ಜಸ್‌ಪ್ರೀತ್‌ ಬುಮ್ರಾ ಸಂಪೂರ್ಣವಾಗಿ ಗುಣಮುಖವಾಗಿರುವುದು. ಹೀಗಾಗಿ ಮುಂಬೈ ವೇಗದ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ. ಚಿನ್ನಸ್ವಾಮಿ ಟ್ರ್ಯಾಕ್‌ ಸೀಮ್‌ ಬೌಲಿಂಗಿಗೆ ನೆರವು ನೀಡಿದ್ದೇ ಆದರೆ ಆರ್‌ಸಿಬಿಗೆ ಇದು ಭಾರೀ ಸವಾಲಾಗಿ ಕಾಡಬಹುದು. ತೃತೀಯ ವೇಗಿ ಮಿಚೆಲ್‌ ಮೆಕ್ಲೆನಗನ್‌ ಕೂಡ ಲಯದಲ್ಲಿದ್ದಾರೆ.

ಲಸಿತ ಮಾಲಿಂಗ ಮೊದಲ 6 ಪಂದ್ಯ ಗಳಿಂದ ಹೊರಗುಳಿಯುವುದಾಗಿ ಸುದ್ದಿಯಾ ಗಿತ್ತು. ಆದರೆ ದೇಶಿ ಏಕದಿನ ಕ್ರಿಕೆಟ್‌ “ಸೂಪರ್‌ ಪ್ರೊವಿನ್ಶಿಯಲ್‌’ ಸರಣಿ ಯಲ್ಲಿ ಆಡಬೇಕಿದ್ದ ಮಾಲಿಂಗ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ವಿನಾಯಿತಿ ನೀಡಿದ್ದು, ಮಂಗಳವಾರವೇ ಬಿಡುಗಡೆ ಮಾಡಿದೆ. ಈ ಸರಣಿ ಎ. 4ರಿಂದ 11ರ ತನಕ ನಡೆಯಲಿದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 37ರ ಅನುಭವಿ ಯುವರಾಜ್‌ ಸಿಂಗ್‌ ಗತಕಾಲದ ಬ್ಯಾಟಿಂಗ್‌ ವೈಭವವನ್ನು ಪ್ರದರ್ಶಿಸಿ ಸುದ್ದಿಯಾಗಿದ್ದರು. ಅವರ “ಕ್ಲಾಸಿಕ್‌ ಹಾಫ್ ಸೆಂಚುರಿ’ ಮುಂಬೈ ಸರದಿಯ ಆಕರ್ಷಣೆಯಾಗಿತ್ತು. ಯುವಿ ಆರ್‌ಸಿಬಿ ವಿರುದ್ಧವೂ ಅಪಾಯಕಾರಿಯಾಗಿ ಪರಿಣಮಿಸಬಹುದು. ಪಾಂಡ್ಯ ಬ್ರದರ್ಗೂ ಅನ್ವಯಿಸುವ ಮಾತಿದು.

Advertisement

ಸ್ಫೋಟಕ ಬ್ಯಾಟಿಂಗ್‌ ಸರದಿ
ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಕೊಹ್ಲಿ, ಎಬಿಡಿ, ಹೆಟ್‌ಮೈರ್‌ ಅವರ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಬಣ್ಣಿಸಬೇಕಿಲ್ಲ. ಪಾರ್ಥಿವ್‌ ಪಟೇಲ್‌, ಮೊಯಿನ್‌ ಅಲಿ ಕೂಡ ಬೀಸು ಹೊಡೆತಗಳಿಗೆ ಮುಂದಾಗುವವರೇ. ಆದರೆ ಇವರೆಲ್ಲರೂ ಸಾಮೂಹಿಕ ವೈಫ‌ಲ್ಯ ಅನುಭವಿಸಬಲ್ಲರು ಎಂಬುದಕ್ಕೆ ಚೆನ್ನೈ ಎದುರಿನ ಪಂದ್ಯ ಸಾಕ್ಷಿಯಾಗಿದೆ. ಇದು ತವರಲ್ಲೂ ಪುನರಾವರ್ತನೆ ಆಗಬಾರದು. ಇವರಲ್ಲಿ ಒಬ್ಬರು ಸಿಡಿದರೂ ತಂಡ ಬೃಹತ್‌ ಮೊತ್ತ ಪೇರಿಸುವುದರಲ್ಲಿ ಅನುಮಾನವಿಲ್ಲ. ಆರ್‌ಸಿಬಿ ಬೌಲಿಂಗ್‌ ವಿಭಾಗ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಉಮೇಶ್‌ ಯಾದವ್‌, ನವದೀಪ್‌ ಸೈನಿ, ಮೊಯಿನ್‌ ಅಲಿ, ಮೊಹಮ್ಮದ್‌ ಸಿರಾಜ್‌, ಟಿಮ್‌ ಸೌಥಿ ಉಳಿದ ಪ್ರಮುಖ ಬೌಲರ್‌ಗಳು.

Advertisement

Udayavani is now on Telegram. Click here to join our channel and stay updated with the latest news.

Next