Advertisement

ಚೆನ್ನೈ-ಡೆಲ್ಲಿ: ಫೈನಲ್ ಹಾದಿಯಲ್ಲಿ…

03:09 AM May 10, 2019 | Sriram |

ವಿಶಾಖಪಟ್ಟಣ: ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೂ ‘ಡೇರ್‌ಡೆವಿಲ್ಸ್’ ರೀತಿಯಲ್ಲಿ ಆಡತೊಡಗಿದೆ. ಪರಿಣಾಮ, ಐಪಿಎಲ್ ಪ್ಲೇ ಆಫ್/ನಾಕೌಟ್ ಸುತ್ತಿನಲ್ಲಿ ಮೊದಲ ಗೆಲುವಿನ ಸಂಭ್ರಮ. ಇನ್ನೊಮ್ಮೆ ಗೆದ್ದು ಬೀಗಿದರೆ ಡೆಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆಯಲಿದೆ. ಡೆಲ್ಲಿಯಿಂದ ಇತಿಹಾಸ ಸಾಧ್ಯವೇ ಎಂಬ ಪ್ರಶ್ನೆಗೆ ಶುಕ್ರವಾರ ರಾತ್ರಿ ಉತ್ತರ ಲಭಿಸಲಿದೆ.

Advertisement

ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಅಯ್ಯರ್‌ ಪಡೆಗೆ ಎದುರಾಗಿರುವ ತಂಡ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಅದು ಮುಂಬೈ ಇಂಡಿಯನ್ಸ್‌ಗೆ 6 ವಿಕೆಟ್‌ಗಳಿಂದ ಶರಣಾಗಿತ್ತು. ಹೀಗಾಗಿ ಧೋನಿ ಪಡೆಯ ಮೇಲೆ ಸಹಜವಾಗಿಯೇ ವಿಪರೀತ ಒತ್ತಡವಿದೆ.

ಬ್ಯಾಟಿಂಗ್‌ ಬರಗಾಲದಲ್ಲಿ ಚೆನ್ನೈ
ಮುಂಬೈ ವಿರುದ್ಧ ಅನುಭವಿಸಿದ ಬ್ಯಾಟಿಂಗ್‌ ವೈಫ‌ಲ್ಯ ಧೋನಿ ಚಿಂತೆಗೆ ಕಾರಣವಾಗಿತ್ತು. ಡೆಲ್ಲಿ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಚೆನ್ನೈ ಬ್ಯಾಟಿಂಗ್‌ ಬರಗಾಲದಿಂದ ಮುಕ್ತವಾಗಬೇಕಿದೆ. ಆರಂಭಿಕರಲ್ಲಿ ಡು ಪ್ಲೆಸಿಸ್‌ ಮೇಲೆ ನಂಬಿಕೆ ಇಡಬಹುದು. ಆದರೆ ವಾಟ್ಸನ್‌ ಅವರಲ್ಲಿ ಮೊದಲಿನ ಚಾರ್ಮ್ ಇಲ್ಲ. ಎ. 23ರಂದು ಹೈದರಾಬಾದ್‌ ವಿರುದ್ಧ 53 ಎಸೆತಗಳಿಂದ 96 ರನ್‌ ಬಾರಿಸಿದ ಬಳಿಕ ವಾಟ್ಸನ್‌ ಬ್ಯಾಟ್ ಅಷ್ಟೇನೂ ಮಾತಾಡಿಲ್ಲ.

ಚೆನ್ನೈ ಮಧ್ಯಮ ಕ್ರಮಾಂಕವೂ ಗಟ್ಟಿಯಲ್ಲ. ರೈನಾ, ವಿಜಯ್‌ ಬಗ್ಗೆ ಅನುಮಾನ ಇದ್ದೇ ಇದೆ. ಬ್ರಾವೊ ಈ ಬಾರಿ ಮ್ಯಾಚ್ ವಿನ್ನರ್‌ ಆಗಿಲ್ಲ. ಹೀಗಾಗಿ ರಾಯುಡು, ಧೋನಿಯೇ ನೆರವಿಗೆ ನಿಲ್ಲಬೇಕಾಗುತ್ತದೆ. ಆದರೆ ಚೆನ್ನೈ ಬೌಲಿಂಗ್‌ ಪರ್ವಾಗಿಲ್ಲ. ತಾಹಿರ್‌, ಹರ್ಭಜನ್‌, ದೀಪಕ್‌ ಚಹರ್‌, ಜಡೇಜ ಮೇಲೆ ನಂಬಿಕೆ ಇಡಬಹುದು.

ಹಾದಿಯನ್ನು ದುರ್ಗಮಗೊಳಿಸುವ ಡೆಲ್ಲಿ
ಡೆಲ್ಲಿ ತಂಡದ ಮುಖ್ಯ ಸಮಸ್ಯೆಯೆಂದರೆ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಕೊನೆ ಕೊನೆಗೆ ಪರದಾಡುವುದು. ಇನ್ನೇನು ಗೆಲುವು ಕೈಗೆಟುಕಿತು ಎನ್ನುವಾಗಲೇ ಡೆಲ್ಲಿಯ ಚಿತ್ರಣ ದಿಢೀರನೇ ಬದಲಾಗುತ್ತದೆ. ಈ ಹಂತದಲ್ಲಿ ಅದು ಸೋತದ್ದೂ ಇದೆ. ಇದರಲ್ಲಿ ಸ್ವಯಂಕೃ ತಾಪರಾಧದ ಪಾಲೇ ಅಧಿಕ. ಬುಧವಾರ ರಾತ್ರಿಯ ಎಲಿಮಿನೇಟರ್‌ ಪಂದ್ಯವೇ ಇದಕ್ಕೆ ಸಾಕ್ಷಿ. ಈ ಸಮಸ್ಯೆಯಿಂದ ಮುಕ್ತಗೊಂಡರೆ ಡೆಲ್ಲಿ ಹಾದಿ ಸುಗಮಗೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement

ಡೆಲ್ಲಿಯ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿದೆ. ಧವನ್‌, ಶಾ, ಅಯ್ಯರ್‌, ಪಂತ್‌, ಇನ್‌ಗ್ರಾಮ್‌, ಮುನ್ರೊ ಜವಾಬ್ದಾರಿಯುತ ಆಟವಾಡುವ ವಿಶ್ವಾಸವಿದೆ. ಬೌಲಿಂಗ್‌ನಲ್ಲಿ ಬೌಲ್r, ಇಶಾಂತ್‌, ಪಟೇಲ್, ಮಿಶ್ರಾ, ಪೌಲ್ ಸೇರಿಕೊಂಡು ಚೆನ್ನೈಗೆ ಕಡಿವಾಣ ಹಾಕಬೇಕಿದೆ. ರುದರ್‌ಫೋರ್ಡ್‌ ಆಲ್ರೌಂಡ್‌ ಪಾತ್ರ ನಿರ್ವಹಿಸಬಲ್ಲರು.

ಡೆಲ್ಲಿ ವಿರುದ್ಧ ಚೆನ್ನೈ ಮೇಲುಗೈ
ಲೀಗ್‌ ಹಂತದ ಇತ್ತಂಡಗಳ ಮುಖಾಮುಖೀ ಗಮನಿಸಿದಾಗ ಈ ಪಂದ್ಯದಲ್ಲಿ ಚೆನ್ನೈಯನ್ನು ಫೇವರಿಟ್ ಆಗಿ ಗುರುತಿಸಬೇಕಾಗುತ್ತದೆ. ಕಾರಣ, ಅದು ಎರಡೂ ಪಂದ್ಯಗಳಲ್ಲಿ ಡೆಲ್ಲಿಯನ್ನು ಕೆಡವಿದೆ. ಕೋಟ್ಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ 6 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿತ್ತು. ಬಳಿಕ ಮೇ ಒಂದರಂದು ಚೆನ್ನೈಯಲ್ಲಿ ಆಡಲಾದ ಮರು ಪಂದ್ಯದಲ್ಲೂ ಧೋನಿ ಪಡೆ ನಿಚ್ಚಳ ಮೇಲುಗೈ ಸಾಧಿಸಿ 80 ರನ್‌ ಜಯಭೇರಿ ಮೊಳಗಿಸಿತ್ತು. ಗೆಲುವಿಗೆ 180 ರನ್‌ ಮಾಡಬೇಕಿದ್ದ ಡೆಲ್ಲಿ 99 ರನ್ನಿಗೆ ಕುಸಿದ ಆ ದೃಶ್ಯಾವಳಿ ಇನ್ನೂ ಕಣ್ಣಮುಂದಿದೆ. ಈ ಸೋಲಿನಿಂದಾಗಿ ಡೆಲ್ಲಿಗೆ ಅಗ್ರಸ್ಥಾನ ತಪ್ಪಿತ್ತು. ಚೆನ್ನೈ ಫೈನಲ್ಗೆ ನೆಗೆಯಬೇಕಾದರೆ ಡೆಲ್ಲಿ ವಿರುದ್ಧ ಹ್ಯಾಟ್ರಿಕ್‌ ಗೆಲುವು ದಾಖಲಿಸಬೇಕಾದುದು ಅನಿವಾರ್ಯ. 3 ಬಾರಿಯ ಚಾಂಪಿಯನ್‌, 4 ಬಾರಿಯ ರನ್ನರ್ ಅಪ್‌ ಆಗಿರುವ ಚೆನ್ನೈಗೆ ‘ಬೌನ್ಸ್‌ ಬ್ಯಾಕ್‌’ ಅಸಾಧ್ಯವೇನಲ್ಲ.

Advertisement

Udayavani is now on Telegram. Click here to join our channel and stay updated with the latest news.

Next