Advertisement

ಗೆದ್ದದ್ದು ಚೆನ್ನೈ ಅಲ್ಲ, ಡು ಪ್ಲೆಸಿಸ್‌!

06:00 AM May 24, 2018 | |

ಮುಂಬಯಿ: ಒಂದೇ ವಾಕ್ಯದಲ್ಲಿ ಬಣ್ಣಿಸುವುದಾದರೆ, ಮಂಗಳವಾರ ರಾತ್ರಿಯ ಮೊದಲ ಕ್ವಾಲಿಫೈಯರ್‌ ಪಂದ್ಯ ಗೆದ್ದದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ಅಲ್ಲ, ಅದು ಫಾ ಡು ಪ್ಲೆಸಿಸ್‌! ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಈ ಐಪಿಎಲ್‌ನಲ್ಲಿ ಡು ಪ್ಲೆಸಿಸ್‌ ಆಡಿದ್ದು 4 ಇನ್ನಿಂಗ್ಸ್‌ ಮಾತ್ರ. ಗಳಿಸಿದ್ದು ಕೇವಲ 85 ರನ್‌. ಆದರೆ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಚೆನ್ನೈ ಕುಸಿಯುತ್ತ ಹೋದಾಗ ಒಂದೆಡೆ ಗಟ್ಟಿಯಾಗಿ ಬೇರು ಬಿಟ್ಟು ನಿಂತ ಡು ಪ್ಲೆಸಿಸ್‌ ಅಜೇಯ 67 ರನ್‌ ಬಾರಿಸಿ ನಂಬಲಾಗದ ಗೆಲುವನ್ನು ತಂದಿತ್ತರು. ಅವರ ಬ್ಯಾಟಿಂಗ್‌ ಸಾಹಸ ಈಗ ಕ್ರಿಕೆಟ್‌ ಪ್ರಿಯರ ಮನೆಮಾತು!

Advertisement

ನನ್ನದೇ ಆಟದ ಅವಲೋಕನ
“ಹೌದು, ನಾನು ಈ ಕೂಟದಲ್ಲಿ ಹೆಚ್ಚು ಪಂದ್ಯವಾಡಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ನನ್ನದೇ ಹಿಂದಿನ ಕೆಲವು ಬ್ಯಾಟಿಂಗ್‌ ದೃಶ್ಯಾವಳಿಯನ್ನು ಅವಲೋಕಿಸುತ್ತ ಕುಳಿತೆ. ಇದು ನನ್ನಲ್ಲಿ ಮಾನಸಿಕ ಶಕ್ತಿ, ಆತ್ಮವಿಶ್ವಾಸ ತುಂಬಿತು. ಇದರ ಪರಿಣಾಮವೇ ಈ ಮ್ಯಾಚ್‌ ವಿನ್ನಿಂಗ್‌ ಎನ್ನಲಡ್ಡಿಯಿಲ್ಲ…’ ಎಂದಿದ್ದಾರೆ ಫಾ ಡು ಪ್ಲೆಸಿಸ್‌.

“ಕೆಲವೊಮ್ಮೆ ಗುರಿ ತಲುಪಲಾಗದು ಎಂಬಂಥ ಪರಿಸ್ಥಿತಿ ಇರುತ್ತದೆ. ಆಗ ಕ್ರೀಸಿಗೆ ಅಂಟಿಕೊಳ್ಳುವುದು ಮುಖ್ಯ. ನಾನು ಮಾಡಿದ್ದೂ ಇದನ್ನೇ. ಯಾವಾಗ ಶಾದೂìಲ್‌ ಠಾಕೂರ್‌ ಬಂದು ಬಡಬಡನೆ ಬೌಂಡರಿ ಬಾರಿಸತೊಡಗಿದರೋ ಆಗ ಪಂದ್ಯ ಹಿಡಿತಕ್ಕೆ ಬಂತು. ಎರಡೇ ವಿಕೆಟ್‌ ಕೈಲಿದ್ದುದರಿಂದ ಇದನ್ನು ಉಳಿಸಿಕೊಳ್ಳುವುದೂ ಮುಖ್ಯವಾಗಿತ್ತು. ಇದರಲ್ಲೂ ಯಶಸ್ವಿಯಾದೆವು…’ ಎಂದರು. 

ಶಾದೂìಲ್‌ ಠಾಕೂರ್‌ ಮುಂಬಯಿಯ ವರಾಗಿದ್ದು, ವಾಂಖೇಡೆಯಲ್ಲೇ ಆಡಿ ಬೆಳೆ ದವರಾದ್ದರಿಂದ ಇದರ ಲಾಭವೆತ್ತಿದರು ಎನ್ನಲಡ್ಡಿಯಿಲ್ಲ. ಠಾಕೂರ್‌ ಗಳಿಕೆ 5 ಎಸೆತಗಳಿಂದ ಅಜೇಯ 15 ರನ್‌ (3 ಬೌಂಡರಿ). ವೆಸ್ಟ್‌ ಇಂಡೀಸ್‌ ವೇಗಿ ಕಾರ್ಲೋಸ್‌ ಬ್ರಾತ್‌ವೇಟ್‌ ಅವರ 18ನೇ ಓವರಿನಲ್ಲಿ 3 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದ ಸಂದರ್ಭವನ್ನೂ ಡು ಪ್ಲೆಸಿಸ್‌ ನೆನಪಿಸಿಕೊಂಡರು.

“ಆ ಸಂದರ್ಭ ನಾನು ಬ್ರಾತ್‌ವೇಟ್‌ ವಿರುದ್ಧ ರಿಸ್ಕ್ ತೆಗೆದುಕೊಳ್ಳಲೇಬೇಕಿತ್ತು. ಅವರ ನಿಧಾನ ಗತಿಯ ಹಾಗೂ ಪೇಸ್‌ ಬೌಲಿಂಗ್‌ನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಆದರೆ ಎರಡೂ ರೀತಿಯ ಎಸೆತಗಳಿಗೆ ಬಾರಿಸಲು ಸಿದ್ಧವಾಗಿರುವುದು ಮುಖ್ಯವಾಗಿತ್ತು. ನಾನು ಯಾವ ರೀತಿ ಕಾರ್ಲೋಸ್‌ ಅವರನ್ನು ಟಾರ್ಗೆಟ್‌ ಮಾಡಿಕೊಂಡಿದ್ದೆನೋ, ಅವರು ಕೂಡ ನನ್ನನ್ನು ಟಾರ್ಗೆಟ್‌ ಮಾಡಿಕೊಂಡಿದ್ದರು’ ಎಂದ ಡು ಪ್ಲೆಸಿಸ್‌, ಈ ಬಾರಿ ಚಾಂಪಿಯನ್‌ ಆಗಲು ಚೆನ್ನೈ ಅತ್ಯಂತ ಅರ್ಹ ತಂಡ ಎಂದರು. ಈ ಬಾರಿಯ ಹೀರೋ ಅಂಬಾಟಿ ರಾಯುಡು ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಡು ಪ್ಲೆಸಿಸ್‌ ಅವರನ್ನು ಇನ್ನಿಂಗ್ಸ್‌ ಆರಂಭಿ ಸಲು ಕಳುಹಿಸಲಾಗಿತ್ತು. ಆದರೆ ರಾಯುಡು ಮೊದಲ ಎಸೆತದಲ್ಲೇ ಔಟಾದದ್ದು ವಿಪರ್ಯಾಸ!

Advertisement

ರಶೀದ್‌ ವಿಶ್ವಶ್ರೇಷ್ಠ ಲೆಗ್‌ ಸ್ಪಿನ್ನರ್‌
ಈ ಸಂದರ್ಭದಲ್ಲಿ ಹೈದರಾಬಾದ್‌ ಸ್ಪಿನ್ನರ್‌ ರಶೀದ್‌ ಖಾನ್‌ ಬೌಲಿಂಗ್‌ ದಾಳಿಯನ್ನು ಡು ಪ್ಲೆಸಿಸ್‌ ಪ್ರಶಂಸಿಸಲು ಮರೆಯಲಿಲ್ಲ. “ರಶೀದ್‌ ವಿಶ್ವದ ಅತ್ಯುತ್ತಮ ಲೆಗ್‌ ಸ್ಪಿನ್ನರ್‌. ಟೆಸ್ಟ್‌ ಕ್ರಿಕೆಟಿಗೆ ಬಂದಾಗ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳ ಪಾಲಿಗೆ ದೊಡ್ಡ ಸವಾಲಾಗಿ ಕಾಡುವುದರಲ್ಲಿ ಅನುಮಾನವಿಲ್ಲ. ಅವರ ಬೌಲಿಂಗಿನ ವೀಡಿಯೋ ದೃಶ್ಯಾವಳಿ ಯನ್ನು ನಾವು ಸಾಕಷ್ಟು ಅವಲೋಕಿಸಿದ್ದೇವೆ. ಆದರೂ ರಶೀದ್‌ ಬೌಲಿಂಗನ್ನು ಅರ್ಥೈಸಿಕೊಳ್ಳಲಾಗಿಲ್ಲ. ರಶೀದ್‌ ಎಸೆತಗಳನ್ನು ನಾವು ಗೌರವಿಸಲೇ ಬೇಕು…’ 
-ಫಾ ಡು ಪ್ಲೆಸಿಸ್‌

ಎಕ್ಸ್‌ಟ್ರಾ  ಇನ್ನಿಂಗ್ಸ್‌

ಚೆನ್ನೈ ಸೂಪರ್‌ ಕಿಂಗ್ಸ್‌ 7ನೇ ಸಲ ಐಪಿಎಲ್‌ ಫೈನಲ್‌ ಪ್ರವೇಶಿಸಿತು. ಇದು ಚೆನ್ನೈ ಆಡುತ್ತಿರುವ 9ನೇ ಐಪಿಎಲ್‌. ಎಲ್ಲ 9 ಕೂಟಗಳಲ್ಲೂ ನಾಕೌಟ್‌/ಪ್ಲೇ ಆಫ್ ಪ್ರವೇಶಿಸಿದ್ದು ಚೆನ್ನೈ ಹೆಗ್ಗಳಿಕೆ.

 ಶಿಖರ್‌ ಧವನ್‌ ಪಂದ್ಯದ ಮೊದಲ ಎಸೆತದಲ್ಲೇ ಔಟಾದರು. ಐಪಿಎಲ್‌ ನಾಕೌಟ್‌/ಪ್ಲೇ ಆಫ್ ಪಂದ್ಯದ ಪ್ರಥಮ ಎಸೆತದಲ್ಲೇ ವಿಕೆಟ್‌ ಬಿದ್ದದ್ದು ಇದೇ ಮೊದಲು. ಈ ವಿಕೆಟ್‌ ಉರುಳಿಸಿದ ಸಾಧಕ ದೀಪಕ್‌ ಚಹರ್‌.

ಶಿಖರ್‌ ಧವನ್‌ ಐಪಿಎಲ್‌ ನಾಕೌಟ್‌/ಪ್ಲೇ ಆಫ್ನಲ್ಲಿ ಅತೀ ಹೆಚ್ಚು 3 ಸಲ ಸೊನ್ನೆಗೆ ಔಟಾದ 3ನೇ ಕ್ರಿಕೆಟಿಗ. ಅಂಬಾಟಿ ರಾಯುಡು, ಸುರೇಶ್‌ ರೈನಾ ಉಳಿದಿಬ್ಬರು.

ಹರ್ಭಜನ್‌ ಸಿಂಗ್‌ ಐಪಿಎಲ್‌ ಪಂದ್ಯದಲ್ಲಿ 2ನೇ ಸಲ ಬೌಲಿಂಗ್‌ ನಡೆಸುವ ಅವಕಾಶ ಪಡೆಯಲಿಲ್ಲ. ಇದಕ್ಕೂ ಮುನ್ನ 2010ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದಾಗ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಹರ್ಭಜನ್‌ಗೆ ಬೌಲಿಂಗ್‌ ಅವಕಾಶ ಸಿಕ್ಕಿರಲಿಲ್ಲ.

ಚೆನ್ನೈ 2 ವಿಕೆಟ್‌ಗಳ ಜಯ ಸಾಧಿಸಿತು. ಇದು ಐಪಿಎಲ್‌ ನಾಕೌಟ್‌/ಪ್ಲೇ ಆಫ್ ಪಂದ್ಯದಲ್ಲಿ ದಾಖಲಾದ ವಿಕೆಟ್‌ ಅಂತರದ ಅತೀ ಸಣ್ಣ ಗೆಲುವು. ಈವರೆಗೆ 3 ತಂಡಗಳು ಐಪಿಎಲ್‌ ನಾಕೌಟ್‌/ಪ್ಲೇ ಆಫ್ ಪಂದ್ಯಗಳಲ್ಲಿ 3 ವಿಕೆಟ್‌ ಅಂತರದ ಜಯ ಸಾಧಿಸಿವೆ.

ಧೋನಿ 3.3ನೇ ಓವರಿನಲ್ಲೇ ಬ್ಯಾಟಿಂಗಿಗೆ ಇಳಿದರು. ಇದು ಐಪಿಎಲ್‌ನಲ್ಲಿ ಧೋನಿ ಬಹಳ ಬೇಗ ಬ್ಯಾಟಿಂಗಿಗೆ ಬಂದ 3ನೇ ಸಂದರ್ಭವಾಗಿದೆ. 2010ರಲ್ಲಿ ಡೆಲ್ಲಿ ವಿರುದ್ಧ ಧೋನಿ 1.3ನೇ ಓವರಿನಲ್ಲಿ ಹಾಗೂ 2016ರಲ್ಲಿ ಆರ್‌ಸಿಬಿ ವಿರುದ್ಧ 2.3ನೇ ಓವರಿನಲ್ಲಿ ಬ್ಯಾಟಿಂಗಿಗೆ ಇಳಿದಿದ್ದರು.

ಸನ್‌ರೈಸರ್ ಹೈದರಾಬಾದ್‌ ಐಪಿಎಲ್‌ ಋತುವಿನಲ್ಲಿ ಮೊದಲ ಬಾರಿಗೆ ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿತು. ಇದು ಹೈದರಾಬಾದ್‌ ತಂಡದ ಸತತ ಸೋಲಿನ ಜಂಟಿ ದಾಖಲೆ. 2015ರ ಸಾಲಿನ ಕೊನೆಯ 2 ಪಂದ್ಯಗಳನ್ನು ಸೋತಿದ್ದ ಹೈದರಾಬಾದ್‌ 2016ರ ಮೊದಲ 2 ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ರಶೀದ್‌ ಖಾನ್‌ ಐಪಿಎಲ್‌ ನಾಕೌಟ್‌/ಪ್ಲೇ ಆಫ್ ಪಂದ್ಯದ ಪೂರ್ತಿ 4 ಓವರ್‌ಗಳ ಕೋಟಾದಲ್ಲಿ ಅತೀ ಕಡಿಮೆ 11 ರನ್‌ ನೀಡಿದ 2ನೇ ಬೌಲರ್‌ ಎನಿಸಿದರು. ಅಕ್ಷರ್‌ ಪಟೇಲ್‌ ಮೊದಲಿಗ. ಪಂಜಾಬ್‌ ಪರ ಆಡುತ್ತಿದ್ದ ಪಟೇಲ್‌ 2014ರ ಫೈನಲ್‌ನಲ್ಲಿ ಕೆಕೆಆರ್‌ ವಿರುದ್ಧ ಈ ಸಾಧನೆ ಮಾಡಿದ್ದರು. ದುರಂತವೆಂದರೆ, ಇವರಿಬ್ಬರ ಸಾಧನೆ ವೇಳೆಯೂ ತಂಡ ಸೋಲನುಭವಿಸಿತು!

Advertisement

Udayavani is now on Telegram. Click here to join our channel and stay updated with the latest news.

Next