Advertisement

ಒತ್ತಡದ ವೇಳೆ ಉತ್ತಮ ನಿರ್ವಹಣೆ: ರಾಣಾ

06:05 AM Apr 18, 2018 | Team Udayavani |

ಕೋಲ್ಕತಾ: ಒತ್ತಡದ ವೇಳೆ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಕೋಲ್ಕತಾ ನೈಟ್‌ರೈಡರ್ ತಂಡದ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಹೇಳಿದ್ದಾರೆ. ಅವರ 59 ರನ್‌ ನೆರವಿನಿಂದ ಕೆಕೆಆರ್‌ ತಂಡವು ಡೆಲ್ಲಿ ವಿರುದ್ಧ 71 ರನ್ನುಗಳಿಂದ ಗೆಲುವು ಸಾಧಿಸಲು ಯಶಸ್ವಿಯಾಯಿತು.

Advertisement

ಒತ್ತಡದಲ್ಲಿರುವ ವೇಳೆ ನನ್ನಿಂದ ಉತ್ತಮ ಬ್ಯಾಟಿಂಗ್‌ ಬರುತ್ತದೆ. ಈ ವಿಷಯವನ್ನು ಹಿಂದೆಯೇ ಹೇಳಿದ್ದೆ. ಒತ್ತಡವಿದ್ದರೆ ನನಗೆ ಖುಷಿ ಮತ್ತು ಆಟವಾಡುವುದನ್ನು ಆನಂದಿಸುತ್ತೇನೆ ಎಂದು ಪಂದ್ಯದ ಬಳಿಕ ರಾಣಾ ತಿಳಿಸಿದರು.

ರಾಣಾ 35 ಎಸೆತಗಳಿಂದ 59 ರನ್‌ ಮತ್ತು ಆ್ಯಂಡ್ರೆ ರಸೆಲ್‌ ಕೇವಲ 12 ಎಸೆತಗಳಿಂದ 41 ರನ್‌ ಸಿಡಿಸಿದ್ದರು. ಇದರಿಂದ ಕೆಕೆಆರ್‌ 9 ವಿಕೆಟಿಗೆ 200 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಸುನೀಲ್‌ ನಾರಾಯಣ್‌ ಮತ್ತು ಕುಲದೀಪ್‌ ಯಾದವ್‌ ದಾಳಿಗೆ ಕುಸಿದ ಡೆಲ್ಲಿ ತಂಡವು 129 ರನ್ನಿಗೆ ಆಲೌಟಾಗಿ ಶರಣಾಯಿತು.

ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ಕಾರಣ ನಮಗಿದು ಅತ್ಯಂತ ಪ್ರಮುಖ ಪಂದ್ಯವಾಗಿತ್ತು. ಈ ಹಿಂದಿನ ಪಂದ್ಯಗಳಲ್ಲಿ ಚೆನ್ನೈ ಮತ್ತು ಹೈದರಾಬಾದ್‌ ವಿರುದ್ಧ ಸೋತಿದ್ದ ಕೆಕೆಆರ್‌ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ.

ಬೆಂಗಳೂರು ವಿರುದ್ಧ ನಡೆದ ಕೆಕೆಆರ್‌ನ ಆರಂಭಿಕ ಪಂದ್ಯದಲ್ಲಿ  ರಾಣಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. 25 ಎಸೆತಗಳಿಂದ 34 ರನ್‌ ಹೊಡೆದಿದ್ದರು. ಒಟ್ಟಾರೆ ನಾಲ್ಕು ಪಂದ್ಯವನ್ನಾಡಿದ ಅವರು 31.75 ಸರಾಸರಿಯಂತೆ 127 ರನ್‌ ಗಳಿಸಿದ್ದಾರೆ.

Advertisement

ತಂಡದ ಗೆಲುವಿನಲ್ಲಿ ನಿಮ್ಮ ಪಾತ್ರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಾಣಾ ನನ್ನ ಪಾತ್ರಕ್ಕಿಂತ ತಂಡ ಪ್ರಯತ್ನವೇ ಮೇಲು ಎಂದರು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪ್ರತಿಯೊಬ್ಬರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಉದಾಹರಣೆಯಾಗಿ ಕುಲದೀಪ್‌ ಅವರು ರಿಷಬ್‌ ಪಂತ್‌ ಮತ್ತು ಮ್ಯಾಕ್ಸ್‌ವೆ‌ಲ್‌ ಅವರ ವಿಕೆಟನ್ನು ಕಿತ್ತಿರುವುದು ಅತೀ ಮುಖ್ಯವಾಗಿದೆ. ಅವರಿಬ್ಬರು ಅಪಾಯಕಾರಿ ಆಟಗಾರರಾಗಿದ್ದರು. ಅವರಲ್ಲದೇ ಎಲ್ಲರೂ ಉತ್ತಮ ನಿರ್ವಹಣೆ ನೀಡಿದ್ದರಿಂದ ನಾವು ಸುಲಭವಾಗಿ ಗೆಲುವು ಸಾಧಿಸಿದೆವು ಎಂದು ರಾಣಾ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next