Advertisement

ವಯಸ್ಸಿನ ಕಾರಣಕ್ಕೆ ಕೆಕೆಆರ್‌ನಿಂದ ಗಂಭೀರ್‌ ಔಟ್‌?

06:30 AM Jan 06, 2018 | Team Udayavani |

ನವದೆಹಲಿ: ನಾಯಕನಾಗಿ ಕೋಲ್ಕತಾ ನೈಟ್‌ ರೈಡರ್ ತಂಡಕ್ಕೆ ಎರಡು ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟ್ರೋಫಿ ತಂದ ಗೌತಮ್‌ ಗಂಭೀರ್‌ ಅವರನ್ನು ತಂಡದಿಂದ ಕೈಬಿಟ್ಟಿರುವುದು ದೊಡ್ಡ ಅಚ್ಚರಿ ಸೃಷ್ಟಿಸಿದೆ. ಆದರೆ ಗಂಭೀರ್‌ ಕೈಬಿಡಲು ಮುಖ್ಯ ಕಾರಣ ಅವರ ವಯಸ್ಸು ಮತ್ತು ಸೀಮಿತ ಓವರ್‌ಗಳ ಪಂದ್ಯಕ್ಕೆ ಬೇಕಾಗುವಷ್ಟು ವೇಗದ ಬ್ಯಾಟಿಂಗ್‌ ಇಲ್ಲದಿರುವುದೇ ಮುಖ್ಯ ಕಾರಣ ಎನ್ನಲಾಗಿದೆ.

Advertisement

ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ಗುರುವಾರ ಕೊನೆಯದಿನವಾಗಿತ್ತು. ಕೆಕೆಆರ್‌ ತಂಡ ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಮತ್ತು ಶ್ರೇಷ್ಠ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ. ಆದರೆ ನಾಯಕನಾಗಿ ಯಶಸ್ವಿಯಾದ ಗಂಭೀರ್‌ ಕೈಬಿಟ್ಟಿದ್ದು, ಚರ್ಚೆಗೆ ಕಾರಣವಾಗಿದೆ. ಕೆಕೆಆರ್‌ 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿರುವುದರಲ್ಲಿ ಗಂಭೀರ್‌ ಪಾತ್ರ ದೊಡ್ಡದಿದೆ. ಗಂಭೀರ್‌ ಕೆಕೆಆರ್‌ ಪರ ಒಟ್ಟು 122 ಪಂದ್ಯವನ್ನು ಆಡಿದ್ದಾರೆ. 3345 ರನ್‌ ಬಾರಿಸಿದ್ದಾರೆ. ಅದರಲ್ಲಿ 30 ಅರ್ಧಶತಕ ಸೇರಿವೆ.

ವಯಸ್ಸು ಕಾರಣ ಆಯ್ತ:
ಕ್ರಿಕೆಟ್‌ನಲ್ಲಿ ವಯಸ್ಸು ಆದಂತೆ ಆಟಗಾರರ ಬೇಡಿಕೆ ಕುಗ್ಗುತ್ತದೆ. ಗಂಭೀರ್‌ಗೆ ಈಗ 36 ವರ್ಷ. ಇದೇ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಟಿ20ಗೆ ಸ್ಫೋಟಕ ಆಟಗಾರರು ಅಗತ್ಯ. ಗಂಭೀರ್‌ ಟಿ20ಗೆ ಬೇಕಾದಂತಹ ನಿರೀಕ್ಷಿತ ಮಟ್ಟದಲ್ಲಿ ಸ್ಫೋಟಿಸುತ್ತಿಲ್ಲ. ಇದು ಕೂಡ ತಂಡದಿಂದ ಕೈಬಿಡಲು ಮತ್ತೂಂದು ಕಾರಣವಾಗಿದೆ.

ರೈಟ್‌ ಟು ಮ್ಯಾಚ್‌ ಕಾರ್ಡ್‌ನಲ್ಲೂ ಖರೀದಿಸುವ ಸಾಧ್ಯತೆ ಇಲ್ಲ:
ಪ್ರತಿ ಫ್ರಾಂಚೈಸಿ ರೈಟ್‌ ಟು ಮ್ಯಾಚ್‌ ಕಾರ್ಡ್‌ ಪದ್ಧತಿಯಲ್ಲಿ ಇಬ್ಬರು ಆಟಗಾರರನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಆದರೆ ಕೆಕೆಆರ್‌ ತಂಡ ಯುವ ಆಟಗಾರರತ್ತ ದೃಷ್ಟಿ ಹರಿಸಿದೆ. ಇದರಿಂದಾಗಿ ಈ ಹಕ್ಕಿನ ಅಡಿಯಲ್ಲಿ ಗಂಭೀರ್‌ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಕೂಡ ಇಲ್ಲ ಎನ್ನಲಾಗಿದೆ.

ಡೆಲ್ಲಿ ತಂಡ ಖರೀದಿಸುತ್ತಾ?:
ಗಂಭೀರ್‌ಗೆ 36 ವರ್ಷವಾದರೂ ಕೂಡ ಇಂದಿಗೂ ಫಾರ್ಮ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ಅಂತ್ಯ ಕಂಡ ರಣಜಿ ಟ್ರೋಫಿಯೇ ಸಾಕ್ಷಿಯಾಗಿದೆ. ಅದರಲ್ಲಿಯೂ ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧ್ಯನೆಯನ್ನು ಹೊಂದಿದ್ದಾರೆ. ಹೀಗಾಗಿ ಡೆಲ್ಲಿ ತಂಡ ಪುನಃ ಗಂಭೀರ್‌ ಅವರನ್ನು ಖರೀದಿಸಿ ನಾಯಕ ಸ್ಥಾನದ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಗಂಭೀರ್‌ 2008 ರಿಂದ 2010ರ ಆವೃತ್ತಿಯವರೆಗೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ಆಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next