Advertisement

ಪಂಜಾಬ್‌ 73 ರನ್ನಿಗೆ ಪಂಕ್ಚರ್‌: ಪುಣೆಗೆ ಪ್ಲೇ-ಆಫ್ ಟಿಕೆಟ್‌

02:46 PM May 15, 2017 | Karthik A |

ಪುಣೆ: ‘ಲೀಗ್‌ ಸೆಮಿಫೈನಲ್‌’ ಮಹತ್ವ ಪಡೆದ ರವಿವಾರದ ಬಹು ಮುಖ್ಯ ಐಪಿಎಲ್‌ ಹಣಾಹಣಿಯಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡ ನಿರೀಕ್ಷೆಗೂ ಸುಲಭದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಬಗ್ಗುಬಡಿದು ಪ್ಲೇ-ಆಫ್ ಸುತ್ತಿಗೆ ಸಿಮೆಂಟ್‌ ಹಾಕಿತು. ಅಷ್ಟೇ ಅಲ್ಲ, ನಾಲ್ಕರಿಂದ ದ್ವಿತೀಯ ಸ್ಥಾನಕ್ಕೆ ತನ್ನ ನೆಲೆಯನ್ನು ಬದಲಿಸಿತು; ಮೈನಸ್‌ನಲ್ಲಿದ್ದ ರನ್‌ರೇಟನ್ನು ಪ್ಲಸ್‌ ಆಗಿಯೂ ಪರಿವರ್ತಿಸಿತು. ತವರಿನಂಗಳದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಂಜಾಬ್‌ ಮೊದಲ ಎಸೆತದಿಂದಲೇ ಉದುರಲಾರಂಭಿಸಿ 15.5 ಓವರ್‌ಗಳಲ್ಲಿ ಜುಜುಬಿ 73 ರನ್ನಿಗೆ ಗಂಟುಮೂಟೆ ಕಟ್ಟಿತು. ಪುಣೆ 12 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 78 ರನ್‌ ಬಾರಿಸಿ ಅಧಿಕಾರಯುತವಾಗಿ ಪ್ಲೇ-ಆಫ್ ಪ್ರವೇಶಿಸಿತು. 

Advertisement

ಮಂಗಳವಾರ ನಡೆಯುವ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪುಣೆ ಲೀಗ್‌ ಅಗ್ರಸ್ಥಾನಿ ಮುಂಬೈಯನ್ನು ‘ವಾಂಖೇಡೆ ಸ್ಟೇಡಿಯಂ’ನಲ್ಲಿ ಎದುರಿಸಲಿದೆ. ಇಲ್ಲಿ ಗೆದ್ದ ತಂಡ ಫೈನಲಿಗೆ ಲಗ್ಗೆ ಇಡಲಿದ್ದು, ಪರಾಜಿತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದೆ. ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಪುಣೆ ಮುಂಬೈಯನ್ನು ಪರಾಭವಗೊಳಿಸಿತ್ತು. ಬುಧವಾರ ಬೆಂಗಳೂರಿನಲ್ಲಿ ನಡೆಯುವ ಎಲಿಮಿನೇಟರ್‌ ಸುತ್ತಿನಲ್ಲಿ ಕೆಕೆಆರ್‌-ಹೈದರಾಬಾದ್‌ ಮುಖಾಮುಖೀಯಾಗಲಿವೆ. ಇಲ್ಲಿ ಸೋತ ತಂಡ ಕೂಟದಿಂದ ನಿರ್ಗಮಿಸುತ್ತದೆ.

ಪಂಜಾಬ್‌ ಪರದಾಟ: ರವಿವಾರದ ಮುಖಾಮುಖೀ ಇತ್ತಂಡಗಳಿಗೂ ಅತ್ಯಂತ ಮಹತ್ವದ್ದಾಗಿತ್ತು. ಆದರೆ ಪಂಜಾಬ್‌ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿಯೂ ತೀರಾ ಕಳಪೆ ಆಟವಾಡಿ ಪಂದ್ಯದ ಆವೇಶವನ್ನೇ ಕೊಂದುಬಿಟ್ಟಿತು. ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಮೂರಕ್ಕೆ 230 ರನ್‌ ಪೇರಿಸಿದ ತಂಡ ಇದೇನಾ ಎಂಬ ಅನುಮಾನ ಎಲ್ಲರನ್ನೂ ಕಾಡಿತು. 

ಮಾರ್ಟಿನ್‌ ಗಪ್ಟಿಲ್‌ ಪಂದ್ಯದ ಮೊದಲ ಎಸೆತದಲ್ಲೇ ಉನಾದ್ಕತ್‌ಗೆ ಬೌಲ್ಡ್‌ ಆಗುವುದರೊಂದಿಗೆ ಪಂಜಾಬ್‌ ಪತನ ಮೊದಲ್ಗೊಂಡಿತು. ಸಾಹಾ, ಮಾರ್ಷ್‌, ಮಾರ್ಗನ್‌, ಮ್ಯಾಕ್ಸ್‌ವೆಲ್‌… ಹೀಗೆ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ದೊಡ್ಡ ಸಾಲೇ ಇದ್ದರೂ ತಂಡದ ರಕ್ಷಣೆಗೆ ಇವರ್ಯಾರೂ ಒದಗಿ ಬರಲಿಲ್ಲ. 7ನೇ ಕ್ರಮಾಂಕದಲ್ಲಿ ಬಂದ ಅಕ್ಷರ್‌ ಪಟೇಲ್‌ 22 ರನ್‌ ಮಾಡಿದ್ದೇ ಪಂಜಾಬ್‌ ಸರದಿಯ ಗರಿಷ್ಠ ಗಳಿಕೆ. ಸಾಹಾ 13, ಮಾರ್ಷ್‌ ಮತ್ತು ಸ್ವಪ್ನಿಲ್‌ ತಲಾ 10 ರನ್‌ ಹೊಡೆದರು. ನಾಯಕ ಮ್ಯಾಕ್ಸ್‌ವೆಲ್‌ ಅವರದೂ ಶೂನ್ಯ ಸಂಪಾದನೆ. ಗಪ್ಟಿಲ್‌, ಮಾರ್ಷ್‌, ಮಾರ್ಗನ್‌, ಮ್ಯಾಕ್ಸ್‌ವೆಲ್‌ ಸೇರಿ ಗಳಿಸಿದ ರನ್‌ ಬರೀ 14 ಎಂಬುದು ಪಂಜಾಬ್‌ ಅವಸ್ಥೆಯನ್ನು ಸಾರುತ್ತದೆ.

12 ರನ್ನಿಗೆ 2 ವಿಕೆಟ್‌ ಉರುಳಿಸಿ ಒಂದು ಕ್ಯಾಚ್‌, ಒಂದು ರನೌಟ್‌ ಕೂಡ ಮಾಡಿದ ಜೈದೇವ್‌ ಉನಾದ್ಕತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 19ಕ್ಕೆ 3 ವಿಕೆಟ್‌ ಹಾರಿಸಿದ ಶಾರ್ದೂಲ್‌ ಠಾಕೂರ್‌ ಪುಣೆಯ ಅತ್ಯಂತ ಯಶಸ್ವಿ ಬೌಲರ್‌. ಆ್ಯಡಂ ಝಂಪ ಮತ್ತು ಡೇನಿಯಲ್‌ ಕ್ರಿಸ್ಟಿಯನ್‌ ಕೂಡ ಬಿಗಿ ದಾಳಿ ಸಂಘಟಿಸಿ ತಲಾ 2 ವಿಕೆಟ್‌ ಹಾರಿಸಿದರು.

Advertisement

ಪುಣೆ ಸುಲಭ ಚೇಸಿಂಗ್‌: ತವರಿನಂಗಳದಲ್ಲಿ ಈ ಮೊತ್ತವನ್ನು ಹಿಂದಿಕ್ಕುವುದು ಪುಣೆಗೆ ಒಂದು ಸವಾಲೇ ಆಗಲಿಲ್ಲ. ಈ ಹಾದಿಯಲ್ಲಿ ಅದು ಆರಂಭಕಾರ ರಾಹುಲ್‌ ತ್ರಿಪಾಠಿ (28) ಅವರ ವಿಕೆಟನ್ನಷ್ಟೇ ಕಳೆದುಕೊಂಡಿತು. ಈ ಏಕೈಕ ಯಶಸ್ಸು ಅಕ್ಷರ್‌ ಪಟೇಲ್‌ ಪಾಲಾಯಿತು. ಇಶಾಂತ್‌ ಶರ್ಮ ಈ ಪಂದ್ಯದಲ್ಲೂ ವಿಕೆಟ್‌ ಕೀಳಲು ವಿಫ‌ಲರಾದರು. ಐಪಿಎಲ್‌ ಋತುವೊಂದರಲ್ಲಿ 100 ಪ್ಲಸ್‌ ರನ್‌ ನೀಡಿಯೂ ವಿಕೆಟ್‌ ಉರುಳಿಸದ ಏಕೈಕ ಬೌಲರ್‌ ಎಂಬ ‘ವಿಶಿಷ್ಟ ದಾಖಲೆ’ಗೆ ಇಶಾಂತ್‌ ಪಾತ್ರರಾದರು! ಅಜಿಂಕ್ಯ ರಹಾನೆ 34 ರನ್‌, ನಾಯಕ ಸ್ಟೀವನ್‌ ಸ್ಮಿತ್‌ 15 ರನ್‌ ಮಾಡಿ ಅಜೇಯರಾಗಿ ಉಳಿದರು. ಮ್ಯಾಕ್ಸ್‌ವೆಲ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರಹಾನೆ ಪುಣೆ ಗೆಲುವನ್ನು ಸಾರಿದರು. 

ಟಾಸ್‌ ಸೋಲೇ ತಂಡಕ್ಕೆ ಇಂಥ ಸ್ಥಿತಿ ಒದಗಲು ಕಾರಣ ಎಂಬುದಾಗಿ ಪಂಜಾಬ್‌ ನಾಯಕ ಮ್ಯಾಕ್ಸ್‌ವೆಲ್‌ ಪ್ರತಿಕ್ರಿಯಿಸಿದರು. ‘ಕಳೆದ ಕೆಲವು ದಿನಗಳ ಮಳೆಯಿಂದಾಗಿ ಪಿಚ್‌ ಹಾನಿಗೊಂಡಿತ್ತು. ಜತೆಗೆ ಯಾವುದೂ ನಾವೆಣಿಸಿದಂತೆ ನಡೆಯಲಿಲ್ಲ…’ ಎಂದು ಮ್ಯಾಕ್ಸ್‌ವೆಲ್‌ ಹೇಳಿದರು. ವಿಜೇತ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಕೂಡ ಟಾಸ್‌ ಪಾತ್ರ ನಿರ್ಣಾಯಕವಾಗಿತ್ತು ಎಂದರು. ಟಾಸ್‌ ಗೆಲುವು ತಮ್ಮ ಅದೃಷ್ಟವನ್ನು ತೆರೆದಿರಿಸಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಕೋರ್‌ ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಮಾರ್ಟಿನ್‌ ಗಪ್ಟಿಲ್‌    ಸಿ ತಿವಾರಿ ಬಿ ಉನಾದ್ಕತ್‌    0
ವೃದ್ಧಿಮಾನ್‌ ಸಾಹಾ    ಸಿ ಧೋನಿ ಬಿ ಕ್ರಿಸ್ಟಿಯನ್‌    13
ಶಾನ್‌ ಮಾರ್ಷ್‌    ಸಿ ಸ್ಮಿತ್‌ ಬಿ ಠಾಕೂರ್‌    10
ಎವೋನ್‌ ಮಾರ್ಗನ್‌    ರನೌಟ್‌    4
ರಾಹುಲ್‌ ಟೆವಾಟಿಯ    ಸಿ ಉನಾದ್ಕತ್‌ ಬಿ ಠಾಕೂರ್‌    4
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ರಹಾನೆ ಬಿ ಠಾಕೂರ್‌    0
ಅಕ್ಷರ್‌ ಪಟೇಲ್‌    ಸಿ ಧೋನಿ ಬಿ ಕ್ರಿಸ್ಟಿಯನ್‌    22
ಸ್ವಪ್ನಿಲ್‌ ಸಿಂಗ್‌    ಸಿ ಧೋನಿ ಬಿ ಉನಾದ್ಕತ್‌    10
ಮೋಹಿತ್‌ ಶರ್ಮ    ಸಿ ಕ್ರಿಸ್ಟಿಯನ್‌ ಬಿ ಝಂಪ    6
ಇಶಾಂತ್‌ ಶರ್ಮ    ಸಿ ಸ್ಮಿತ್‌ ಬಿ ಝಂಪ    1
ಸಂದೀಪ್‌ ಶರ್ಮ    ಔಟಾಗದೆ    0

ಇತರ       3
ಒಟ್ಟು  (15.5 ಓವರ್‌ಗಳಲ್ಲಿ ಆಲೌಟ್‌)    73
ವಿಕೆಟ್‌ ಪತನ: 1-0, 2-19, 3-24, 4-31, 5-32, 6-51, 7-62, 8-69, 9-71.

ಬೌಲಿಂಗ್‌:
ಜೈದೇವ್‌ ಉನಾದ್ಕತ್‌    3-1-12-2
ಶಾರ್ದೂಲ್‌ ಠಾಕೂರ್‌    4-0-19-3
ಬೆನ್‌ ಸ್ಟೋಕ್ಸ್‌        3-0-10-0
ಆ್ಯಡಂ ಝಂಪ        3.5-0-22-2
ಡೇನಿಯಲ್‌ ಕ್ರಿಸ್ಟಿಯನ್‌    2-0-10-2

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌
ಅಜಿಂಕ್ಯ ರಹಾನೆ    ಔಟಾಗದೆ    34
ರಾಹುಲ್‌ ತ್ರಿಪಾಠಿ    ಬಿ ಪಟೇಲ್‌    28
ಸ್ಟೀವನ್‌ ಸ್ಮಿತ್‌    ಔಟಾಗದೆ    15
ಇತರ        1

ಒಟ್ಟು  (12 ಓವರ್‌ಗಳಲ್ಲಿ ಒಂದು ವಿಕೆಟಿಗೆ)    78
ವಿಕೆಟ್‌ ಪತನ: 1-41.

ಬೌಲಿಂಗ್‌:
ಸಂದೀಪ್‌ ಶರ್ಮ        2-0-12-0
ಮೋಹಿತ್‌ ಶರ್ಮ        1-0-6-0
ಇಶಾಂತ್‌ ಶರ್ಮ        1-0-12-0
ರಾಹುಲ್‌ ಟೆವಾಟಿಯ    3-0-14-0
ಅಕ್ಷರ್‌ ಪಟೇಲ್‌        2-0-13-1
ಸ್ವಪ್ನಿಲ್‌ ಸಿಂಗ್‌        1-0-6-0
ಗ್ಲೆನ್‌ ಮ್ಯಾಕ್ಸ್‌ವೆಲ್‌    2-0-15-0

ಪಂದ್ಯಶ್ರೇಷ್ಠ: ಜೈದೇವ್‌ ಉನಾದ್ಕತ್‌

Advertisement

Udayavani is now on Telegram. Click here to join our channel and stay updated with the latest news.

Next