Advertisement

ಪರಿಪೂರ್ಣ ಪ್ರದರ್ಶನ: ರೋಹಿತ್‌ ಶರ್ಮ

02:35 PM May 15, 2017 | Karthik A |

ಕೋಲ್ಕತಾ: ಇದೊಂದು ಪರಿಪೂರ್ಣ ಪ್ರದರ್ಶನ, ಲೀಗ್‌ ಹಂತದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಕ್ಕೆ ಬಹಳ ಖುಷಿಯಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ಶನಿವಾರ ರಾತ್ರಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ 9 ರನ್ನುಗಳಿಂದ ಕೆಕೆಆರ್‌ಗೆ ಸೋಲುಣಿಸಿ ಈ ಎತ್ತರವನ್ನೇರಿತು. ‘ನಾವು ಲೀಗ್‌ ಹಣಾಹಣಿಯನ್ನು ಅಧಿಕಾರಯುತವಾಗಿ, ದೊಡ್ಡ ಮಟ್ಟದಲ್ಲೇ ಮುಗಿಸಿದ್ದೇವೆ. ನಮ್ಮ ಮೀಸಲು ಸಾಮರ್ಥ್ಯ ಏನೆಂಬುದನ್ನು ಈ ಪಂದ್ಯದ ಮೂಲಕ ನಿರೂಪಿಸಿದ್ದೇವೆ. ನಮ್ಮ ತಂಡದ ಎಲ್ಲ ಆಟ ಗಾರರೂ ಮ್ಯಾಚ್‌ ವಿನ್ನರ್‌ಗಳೇ ಆಗಿದ್ದಾರೆ…’ ಎಂದು ರೋಹಿತ್‌ ಶರ್ಮ ಹೇಳಿದರು.

Advertisement

ಕೋಲ್ಕತಾದ ‘ಈಡನ್‌ ಗಾರ್ಡನ್ಸ್‌’ನಲ್ಲಿ ಮಳೆಯಿಂದಾಗಿ ತುಸು ವಿಳಂಬಗೊಂಡು ಮೊದಲ್ಗೊಂಡ ಈ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ 5 ವಿಕೆಟಿಗೆ 173 ರನ್‌ ಪೇರಿಸಿತು. ಜವಾಬಿತ್ತ ಕೆಕೆಆರ್‌ಗೆ 8ಕ್ಕೆ 164 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಸುನೀಲ್‌ ನಾರಾಯಣ್‌ ಖಾತೆ ತೆರೆಯದೆ ಮೊದಲ ಓವರಿನಲ್ಲೇ ಔಟಾದದ್ದು, ರಾಬಿನ್‌ ಉತ್ತಪ್ಪ (2) ವಿಫ‌ಲರಾದದ್ದು ಕೋಲ್ಕತಾಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಹಾರ್ದಿಕ್‌ ಪಾಂಡ್ಯ, ವಿನಯ್‌ ಕುಮಾರ್‌ ಮತ್ತು ಟಿಮ್‌ ಸೌಥಿ ಬಿಗಿ ದಾಳಿ ನಡೆಸಿ ಗಂಭೀರ್‌ ಪಡೆಯನ್ನು ಕಟ್ಟಿಹಾಕಿದರು. 33 ರನ್‌ ಮಾಡಿದ ಪಾಂಡೆ ಅವರದೇ ಹೆಚ್ಚಿನ ಗಳಿಕೆ.

4 ವಿಕೆಟ್‌ಗಳಿಂದ ಕೊನೆಯ 3 ಓವರ್‌ಗಳಲ್ಲಿ 25 ರನ್‌ ತೆಗೆಯುವ ಅಷ್ಟೇನೂ ಕಠಿನವಲ್ಲದ ಸವಾಲು ಕೆಕೆಆರ್‌ ಮುಂದಿತ್ತು. ಪಾಂಡೆ, ಕುಲದೀಪ್‌ ಕ್ರೀಸಿನಲ್ಲಿದ್ದರು. 18ನೇ ಓವರಿನಲ್ಲಿ ಕೇವಲ 4 ರನ್‌ ನೀಡಿ ಪಾಂಡೆ ವಿಕೆಟ್‌ ಕಿತ್ತ ಪಾಂಡ್ಯ, 20ನೇ ಓವರ್‌ನಲ್ಲಿ ಬರೀ 7 ರನ್‌ ನೀಡಿ ಮುಂಬೈ ಗೆಲುವನ್ನು ಸಾರಿದರು. ಅಂತಿಮ ಓವರಿನಲ್ಲಿ ಕೆಕೆಆರ್‌ ಜಯಕ್ಕೆ 14 ರನ್‌ ಅಗತ್ಯವಿತ್ತು.

‘ಇದು ಪರಿಪೂರ್ಣ ಪಂದ್ಯಕ್ಕೊಂದು ಪರಿಪೂರ್ಣ ಉದಾಹರಣೆ. ಅವರು ಓವರಿಗೆ 10 ರನ್ನಿನಂತೆ ಮುನ್ನುಗ್ಗಿ ಬರುತ್ತಿದ್ದರು. ಆದರೆ ನಾವು ನಿರಂತರವಾಗಿ ವಿಕೆಟ್‌ಗಳನ್ನು ಕೀಳುತ್ತ ಹೋದೆವು. ಕಾರ್ಯತಂತ್ರದಲ್ಲಿ ಭರಪೂರ ಯಶಸ್ಸು ಕಂಡೆವು. ಆದರೆ ಪಂದ್ಯಾವಳಿ ಇನ್ನೂ ಮುಗಿದಿಲ್ಲ. ಪ್ಲೇ-ಆಫ್ ಗೆ ಅಣಿಯಾಗಬೇಕಿದೆ’ ಎಂದು ರೋಹಿತ್‌ ಹೇಳಿದರು. ಮುಂಬೈ 10ನೇ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ಪುಣೆಗೆ ಶರಣಾದ ಬಳಿಕ ಗೆಲುವಿನ ಅಭಿಯಾನ ಆರಂಭಿಸಿತ್ತು.

ಚೇಸಿಂಗ್‌ ಮಾಡಬಹುದಿತ್ತು: ಗಂಭೀರ್‌
‘ಇದು ಬ್ಯಾಟಿಂಗ್‌ಯೋಗ್ಯ ಪಿಚ್‌ ಆಗಿತ್ತು, ಚೇಸಿಂಗ್‌ ಖಂಡಿತ ಅಸಾಧ್ಯವಾಗಿರಲಿಲ್ಲ. ಕೊನೆಯ ತನಕ ಒಬ್ಬ ಬ್ಯಾಟ್ಸ್‌ಮನ್‌ ನಿಂತಿದ್ದರೆ ಗೆಲುವು ನಮ್ಮದಾಗುತ್ತಿತ್ತು’ ಎಂಬುದು ಕೆಕೆಆರ್‌ ನಾಯಕ ಗಂಭೀರ್‌ ಪ್ರತಿಕ್ರಿಯೆ. ‘ಬೇಜಬ್ದಾರಿಯುತ ಬ್ಯಾಟಿಂಗಿನಿಂದಾಗಿ ನಾವು ಸೋಲು ಕಾಣಬೇಕಾಯಿತು. ಎಲ್ಲರೂ ವಿಕೆಟ್‌ ಕೈಚೆಲ್ಲಿದರು. ಸ್ವಲ್ಪ ಎಚ್ಚರಿಕೆಯಿಂದ ಆಡಿದ್ದರೆ ಈ ಸೋಲು ಎದುರಾಗುತ್ತಿರಲಿಲ್ಲ. ಮುಂಬೈಯನ್ನು 174ಕ್ಕೆ ಹಿಡಿದು ನಿಲ್ಲಿಸಿದ್ದು ನಿಜಕ್ಕೂ ಅಮೋಘ ಸಾಧನೆಯೇ ಆಗಿದೆ…’ ಎಂದು ಗಂಭೀರ್‌ ಹೇಳಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಮುಂಬೈ-5 ವಿಕೆಟಿಗೆ 173. ಕೆಕೆಆರ್‌-8 ವಿಕೆಟಿಗೆ 164 (ಪಾಂಡೆ 33, ಗ್ರ್ಯಾಂಡ್‌ಹೋಮ್‌ 29, ಲಿನ್‌ 26, ಪಠಾಣ್‌ 20, ಪಾಂಡ್ಯ 22ಕ್ಕೆ 2, ವಿನಯ್‌ ಕುಮಾರ್‌ 31ಕ್ಕೆ 2, ಸೌಥಿ 39ಕ್ಕೆ 2). ಪಂದ್ಯಶ್ರೇಷ್ಠ: ಅಂಬಾಟಿ ರಾಯುಡು.

ಎಕ್ಸ್‌ಟ್ರಾ ಇನ್ನಿಂಗ್ಸ್‌ : ಪಂದ್ಯ 54 ಕೆಕೆಆರ್‌-ಮುಂಬೈ
ಮುಂಬೈ ಇಂಡಿಯನ್ಸ್‌ ಟಿ-20 ಚರಿತ್ರೆಯಲ್ಲಿ 100 ಪಂದ್ಯ ಗೆದ್ದ ಮೊದಲ ತಂಡವೆನಿಸಿತು. ಇದು ಮುಂಬೈ ಆಡಿದ 176ನೇ ಪಂದ್ಯವಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ (94) ಮತ್ತು ಲಂಕಾಶೈರ್‌ (90) ಅನಂತರದ ಸ್ಥಾನದಲ್ಲಿವೆ.

ಮುಂಬೈ ತಂಡ ಕೆಕೆಆರ್‌ ವಿರುದ್ಧ 15ನೇ ಗೆಲುವು ಸಾಧಿಸಿತು. ಇದು ಐಪಿಎಲ್‌ನಲ್ಲಿ ತಂಡವೊಂದು ನಿರ್ದಿಷ್ಟ ಎದುರಾಳಿ ವಿರುದ್ಧ ಸಾಧಿಸಿದ ಅತ್ಯಧಿಕ ಸಂಖ್ಯೆಯ ಜಯವಾಗಿದೆ. ಪಂಜಾಬ್‌ ವಿರುದ್ಧ 14 ಗೆಲುವು ದಾಖಲಿಸಿದ ಕೆಕೆಆರ್‌ ದ್ವಿತೀಯ ಸ್ಥಾನದಲ್ಲಿದೆ.

ಅಂಬಾಟಿ ರಾಯುಡು 7ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ಮುಂಬೈ ಆಟಗಾರನ 4ನೇ ಅತ್ಯುತ್ತಮ ಸಾಧನೆಯಾಗಿದೆ. ರೋಹಿತ್‌ ಶರ್ಮ (11), ಪೊಲಾರ್ಡ್‌ (9) ಮತ್ತು ತೆಂಡುಲ್ಕರ್‌ (8) ಮೊದಲ 3 ಸ್ಥಾನದಲ್ಲಿದ್ದಾರೆ.

ರಾಯುಡು ಮುಂಬೈ ಪರ ಆಡಿ 14ನೇ ಸಲ ’50 ಪ್ಲಸ್‌’ ರನ್‌ ಹೊಡೆದರು. ಈ ಸಾಧನೆಯಲ್ಲಿ ಅವರು ತೆಂಡುಲ್ಕರ್‌ ಜತೆ 2ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ರೋಹಿತ್‌ ಶರ್ಮ ಅಗ್ರಸ್ಥಾನ ಅಲಂಕರಿಸಿದ್ದಾರೆ (25). 

ರಾಯುಡು-ಸೌರಭ್‌ ತಿವಾರಿ ನಡುವೆ 449 ರನ್‌ ಜತೆಯಾಟ ನಡೆಯಿತು. ಇದರಲ್ಲಿ 4 ಅರ್ಧ ಶತಕದ ಹಾಗೂ ಒಂದು ಶತಕದ ಜತೆಯಾಟ ದಾಖಲಾಗಿದೆ. ಈ ಜೋಡಿ 2010ರ ಬಳಿಕ ಜತೆಗೂಡಿ ಆಡಿದ ಮೊದಲ ಸಂದರ್ಭ ಇದಾಗಿದೆ. 

ರಾಯುಡು 2013ರ ಬಳಿಕ ಎಲ್ಲ ಮಾದರಿಯ ಪಂದ್ಯಗಳಿಗೂ ಅನ್ವಯಿಸುವಂತೆ ಮೊದಲ ಬಾರಿಗೆ ವಿಕೆಟ್‌ ಕೀಪಿಂಗ್‌ ನಡೆಸಿದರು. ಅಂದು ಅವರು ಸಯ್ಯದ್‌ ಮುಷ್ತಾಕ್‌ ಅಲಿ ಟಿ-20 ಪಂದ್ಯದಲ್ಲಿ ಬರೋಡ ತಂಡದ ಪರ ಕೊನೆಯ ಸಲ ಕೀಪಿಂಗ್‌ ಮಾಡಿದ್ದರು.

ಕೆಕೆಆರ್‌ ಈ ಪಂದ್ಯಕ್ಕೂ ಮುನ್ನ ‘ಈಡನ್‌ ಗಾರ್ಡನ್ಸ್‌’ನಲ್ಲಿ ಸತತ 12 ಪಂದ್ಯಗಳನ್ನು ಚೇಸ್‌ ಮಾಡಿ ಗೆದ್ದಿತ್ತು. ಅದು ತವರಿನಂಗಳದಲ್ಲಿ ಕೊನೆಯ ಸಲ ಚೇಸಿಂಗ್‌ ವೇಳೆ ಸೋತದ್ದು 2012ರಲ್ಲಿ. ಅದೂ ಮುಂಬೈ ಎದುರಿನ ಪಂದ್ಯವಾಗಿತ್ತು!

Advertisement

Udayavani is now on Telegram. Click here to join our channel and stay updated with the latest news.

Next