Advertisement

ಅಭ್ಯಾಸದಲ್ಲೂ  ಡೆತ್‌ ಓವರ್‌ ಎಸೆಯುತ್ತಿದ್ದೆ:  ಜಸ್‌ಪ್ರೀತ್‌ ಬುಮ್ರಾ

11:34 AM May 01, 2017 | Team Udayavani |

ರಾಜ್‌ಕೋಟ್‌: ಅಮೋಘ ಎನಿಸಿದ “ಸೂಪರ್‌ ಓವರ್‌’ ಒಂದನ್ನು ಎಸೆದು ರೋಚಕ ಟೈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದಿತ್ತ ಜಸ್‌ಪ್ರೀತ್‌ ಬುಮ್ರಾ ಶನಿವಾರ ರಾತ್ರಿಯ ಐಪಿಎಲ್‌ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅಭ್ಯಾಸದಲ್ಲೂ ಡೆತ್‌ ಓವರ್‌ ಎಸೆಯುತ್ತ ಬಂದದ್ದು ಹಾಗೂ ಮಾಲಿಂಗ ಜತೆ ಯಾರ್ಕರ್‌ಗಳನ್ನು ಅಭ್ಯಸಿಸಿದ್ದು ಪ್ರಯೋಜನಕ್ಕೆ ಬಂತು ಎಂಬುದಾಗಿ ಅವರು ಹೇಳಿದರು.

Advertisement

ಆತಿಥೇಯ ಗುಜರಾತ್‌ ಮತ್ತು ಮುಂಬೈ ನಡುವಿನ ಶನಿವಾರದ ಪಂದ್ಯ ತಲಾ 153 ರನ್ನುಗಳೊಂದಿಗೆ ಟೈಯಲ್ಲಿ ಅಂತ್ಯ ಕಂಡಿತು. ಅನಂತರದ ಸೂಪರ್‌ ಓವರ್‌ನಲ್ಲಿ ಮುಂಬೈ ಜಯ ಸಾಧಿಸಿ ಎರಡಂಕವನ್ನು ಕಿಸೆಗೆ ಹಾಕಿಕೊಂಡಿತು.

“ನಾನು ಎಸೆದ ಮೊತ್ತಮೊದಲ ಸೂಪರ್‌ ಓವರ್‌ ಇದಾಗಿತ್ತು. ಹೀಗಾಗಿ ಬಹಳ ಒತ್ತಡಕ್ಕೆ ಸಿಲುಕಿದ್ದೆ. ನಮ್ಮ ತಂಡ ಕೇವಲ 11 ರನ್ನನ್ನು ಉಳಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಪ್ರಶಾಂತ ಮನಸ್ಥಿತಿಯ ಅಗತ್ಯವಿರುತ್ತದೆ. ಸಕಾರಾತ್ಮಕ ಸಂಗತಿಗಳತ್ತ, ನಮ್ಮ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನಾನು ಯಶಸ್ವಿಯಾದೆ…’ ಎಂದು ಟೈ ಓವರಿನಲ್ಲಿ ಗುಜರಾತನ್ನು ಕಟ್ಟಿಹಾಕಿದ ಬುಮ್ರಾ ಹೇಳಿದರು.

ನಿಜಕ್ಕಾದರೆ ಮುಂಬೈ ನಿರಾಯಾಸಾವಾಗಿ ಗೆಲ್ಲುವಂಥ ಪಂದ್ಯ ಇದಾಗಿತ್ತು. ಆರಂಭಕಾರ ಪಾರ್ಥಿವ್‌ ಪಟೇಲ್‌ ಭಾರೀ ಜೋಶ್‌ನಲ್ಲಿದ್ದರು. ಮೊದಲ 3 ಓವರ್‌ಗಳಲ್ಲೇ 7 ಬೌಂಡರಿ, ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತ್ತು. ಆದರೆ 44 ಎಸೆತಗಳಿಂದ 70 ರನ್‌ ಬಾರಿಸಿದ ಪಾರ್ಥಿವ್‌ 14ನೇ ಓವರಿ ನಲ್ಲಿ ಔಟಾಗುವುದರೊಂದಿಗೆ ಮುಂಬೈ ಪರಿಸ್ಥಿತಿ ಬಿಗಡಾ ಯಿಸುತ್ತ ಹೋಯಿತು. ಅಂತಿಮ ಓವರಿನಲ್ಲಿ 2 ವಿಕೆಟ್‌ಗಳಿಂದ 11 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

ಇರ್ಫಾನ್‌ ಪಠಾಣ್‌ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನೇ ಕೃಣಾಲ್‌ ಪಾಂಡ್ಯ ಸಿಕ್ಸರಿಗೆ ಬೀಸಿದರು. ಬಳಿಕ ಒಂದು ರನ್‌ ತೆಗೆದರು. 3ನೇ ಎಸೆತದಲ್ಲಿ ಬುಮ್ರಾ ರನೌಟಾದರು. ಮುಂದಿನೆರಡು ಎಸೆತಗಳಲ್ಲಿ ಪಾಂಡ್ಯ 2 ಹಾಗೂ ಒಂದು ರನ್‌ ಮಾಡಿದರು. ಅಂತಿಮ ಎಸೆತದಲ್ಲಿ ಒಂದು ರನ್‌ ಕದಿಯುವ ಧಾವಂತದಲ್ಲಿ ಪಾಂಡ್ಯ ರನೌಟಾದರು. ಸ್ಕೋರ್‌ ಸಮನಾಯಿತು.

Advertisement

ಸೂಪರ್‌ ಓವರ್‌ ಮ್ಯಾಜಿಕ್‌
ಗುಜರಾತ್‌ ಪರ ಸೂಪರ್‌ ಓವರ್‌ ಎಸೆದವರು ಜೇಮ್ಸ್‌ ಫಾಕ್ನರ್‌. ಮುಂಬೈ 5 ಎಸೆತಗಳಲ್ಲಿ 2 ವಿಕೆಟ್‌ ಕಳೆದುಕೊಂಡು 11 ರನ್ನಿಗೆ “ಆಲೌಟ್‌’ ಆಯಿತು. ಪೊಲಾರ್ಡ್‌ 10, ಬಟ್ಲರ್‌ ಒಂದು ರನ್‌ ಮಾಡಿದರು.  ಗುಜರಾತ್‌ ಗೆಲುವಿಗೆ 12 ರನ್‌ ಮಾಡಿದರೆ ಸಾಕಿತ್ತು. ಫಿಂಚ್‌-ಮೆಕಲಮ್‌ ಅವರಂಥ ಬಿಗ್‌ ಹಿಟ್ಟರ್ ಕ್ರೀಸಿಗೆ ಇಳಿದಿದ್ದರು. ಇತ್ತ ಬುಮ್ರಾ ಆರಂಭದಲ್ಲೇ ಲಯ ತಪ್ಪಿದ್ದರು. ನೋಬಾಲ್‌, ವೈಡ್‌ ಕೂಡ ಎಸೆದರು. ಆದರೆ ಇಬ್ಬರ ಬ್ಯಾಟಿನಿಂದ ಬಂದದ್ದು ಒಂದೊಂದು ಸಿಂಗಲ್ಸ್‌ ಮಾತ್ರ. ಅದೂ ಕೊನೆಯ 2 ಎಸೆತಗಳಲ್ಲಿ. ಗುಜರಾತ್‌ ಗಳಿಸಿದ ಒಟ್ಟು ರನ್‌ ಕೇವಲ 6. ಮುಂಬೈ ಲಕ್ಕಿ ತಂಡ ಎಂಬುದು ಇದರಿಂದ ಸಾಬೀತಾಗಿದೆ!
 

Advertisement

Udayavani is now on Telegram. Click here to join our channel and stay updated with the latest news.

Next