ಕನ್ನಡದಲ್ಲಿ ಈಗಾಗಲೇ ಒಂದಷ್ಟು ಹೊಸ ಪ್ರಯೋಗಗಳು ನಡೆದಿವೆ. ಈಗಲೂ ನಡೆಯುತ್ತಲೇ ಇವೆ. ಈ ಹಿಂದೆ ಮೊಬೈಲ್‌ನಲ್ಲೂ ಸಿನಿಮಾ ಮಾಡಿದ ಉದಾಹರಣೆ ಕನ್ನಡದಲ್ಲೇ ಇದೆ. ಈಗ ಇನ್ನೊಂದು ಹೊಸ ಸುದ್ದಿಯೆಂದರೆ, ಐ ಫೋನ್‌ನಲ್ಲಿ “ಡಿಂಗ’ ಎಂಬ ಮತ್ತೂಂದು ಸಿನಿಮಾ ತಯಾರಾಗಿದೆ. ಚಿತ್ರಕ್ಕೆ “ಬಿ ಪಾಸಿಟಿವ್’ ಎಂಬ ಅಡಿಬರಹವಿದೆ. ಈ ಮೂಲಕ ಬೆಳೆದಿರುವ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡ ತೃಪ್ತಭಾವ ಚಿತ್ರತಂಡದ್ದು. ಸದ್ಯಕ್ಕೆ ಸಿನಿಮಾ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ತಯಾರು ಮಾಡಿಕೊಳ್ಳುತ್ತಿದೆ. ಅಂದಹಾಗೆ, ಈ ಚಿತ್ರಕ್ಕೆ ಆರವ್ ಗೌಡ್ರು ಹೀರೋ. ಅಭಿಷೇಕ್ ಜೈನ್ ನಿರ್ದೇಶನದ ಜೊತೆಯಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ಒಬ್ಟಾತ ಕ್ಯಾನ್ಸರ್ ಪೀಡಿತ. ಅವನು ಸಾಯುವ ಮುನ್ನ ತಾನು ಪ್ರೀತಿಯಿಂದ ಸಾಕಿರುವ ಶ್ವಾನವೊಂದನ್ನು, ತನ್ನಷ್ಟೇ ಅದನ್ನೂ ಪ್ರೀತಿಸುವ ವ್ಯಕ್ತಿಯೊಬ್ಬನಿಗೆ ಕೊಡಬೇಕು ಎಂಬುದು ಅವನ ಕೊನೆಯ ಆಸೆ. ಕೇವಲ ಆ ಶ್ವಾನವನ್ನು ಇಷ್ಟಪಟ್ಟರೆ ಸಾಲದು. ಅದಕ್ಕೂ ಹಾಗೂ ಶ್ವಾನ ಪಡೆಯುವ ವ್ಯಕ್ತಿಯ ಜಾತಕ ಸೇರಿದಂತೆ ಇನ್ನಿತರೆ ವಿಷಯಗಳು ಹೊಂದಿಕೆಯಾಗಬೇಕು. ಅದೆಲ್ಲಾ ಓಕೆ ಎನಿಸಿದರೆ ಆ ಶ್ವಾನ ಕೊಡಬೇಕೆಂಬ ನಿರ್ಧಾರ ಅವನದು. ಹೀಗೆ ಅವನು, ಅಂತಹ ವ್ಯಕ್ತಿಯ ಹುಡುಕಾಟಕ್ಕೆ ಹೊರಡುತ್ತಾನೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಅನ್ನೋದೇ ಕಥೆ. ಇಲ್ಲಿ ಕಾಮಿಡಿ ಇದೆ, ಎಮೋಶನಲ್ ಇದೆ, ಸೆಂಟಿಮೆಂಟ್ ಕೂಡ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸಂಬಂಧಗಳ ಮೌಲ್ಯವಿದೆ ಎಂಬುದು ಚಿತ್ರತಂಡದ ಮಾತು.
ಈ ಚಿತ್ರಕ್ಕಾಗಿ ಬೇರೆ ದೇಶದಿಂದಲೂ ಹಲವು ಉಪಕರಣ ಖರೀದಿಸಿ, ಬೆಂಗಳೂರು, ಮೈಸೂರು, ಸಕಲೇಶಪುರ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಾಗಿರುವ ಚಿತ್ರ, ನೋಡುಗರಿಗೆ ಖುಷಿ ಕೊಡುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.
ನಾಯಕ ಆರವ್ ಗೌಡ್ರು ಈ ಚಿತ್ರದ ಪಾತ್ರಕ್ಕಾಗಿ ಅವರು ಸಿಗರೇಟ್ ಸೇದುವುದು, ಪಬ್‌ಗ ಹೋಗುವುದು ಅಲ್ಲಿನ ವಾತಾವರಣ ಹೇಗಿರುತ್ತೆ ಎಂಬುದೆಲ್ಲವನ್ನೂ ಗಮನಿಸಿ, ಪಾತ್ರಕ್ಕೆ ತಯಾರಾದರಂತೆ. ಪ್ರೀತಿಗೆ ಬೀಳುವ ಅವರು, ಅನೇಕ ಏಳು-ಬೀಳು ಕಂಡು ಲೈಫಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅನುಷಾ ನಾಯಕಿ.ಅವರಿಗಿಲ್ಲಿ ಎರಡು ಶೇಡ್ ಪಾತ್ರ ಇದೆಯಂತೆ. ಉಳಿದಂತೆ ಚಿತ್ರದಲ್ಲಿ ರಾಘು ರಮಣಕೊಪ್ಪ, ನಾಗೇಂದ್ರ ಷಾ, ವಿಜಯ್ ಈಶ್ವರ್ ಕಾಣಿಸಿಕೊಂಡಿದ್ದಾರೆ. ನಾಗೇಂದ್ರ ಪ್ರಸಾದ್ ಬರೆದಿರುವ ಶೀರ್ಷಿಕೆ ಗೀತೆಗೆ ಅರ್ಜುನ್ ಜನ್ಯ, ನವೀನ್ ಸಜ್ಜು ಹಾಗು ಸಂಚಿತ್ ಹೆಗ್ಡೆ ಧ್ವನಿಗೂಡಿಸಿದ್ದಾರೆ. ಸುದೋರಾಯ್ ಸಂಗೀತವಿದೆ. ಜಯಂತ್ ಮಂಜುನಾಥ್ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ ಮಾಡಿದ್ದಾರೆ.