ಲಾಹೋರ್: ಪಾಕಿಸ್ಥಾನ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷ ಇಂಝಮಾಮ್ ಉಲ್ ಹಕ್ ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಜತೆಗೆ ಪಾಕ್ ಕ್ರಿಕೆಟ್ ಮಂಡಳಿ ಹೊಸ ಜವಾಬ್ದಾರಿ ನೀಡಿದರೆ ನಿರ್ವಹಿಸಬಲ್ಲೆ ಎಂದಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ಥಾನದ ಕಳಪೆ ನಿರ್ವಹಣೆ, ಅದರಲ್ಲೂ ಮುಖ್ಯವಾಗಿ ಭಾರತದೆದುರು ತಂಡ ಪರಾಭವಗೊಂಡ ಬಳಿಕ ಹಕ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಅವರ ಕಾರ್ಯಾವಧಿ ಇದೇ ಜುಲೈ 31ಕ್ಕೆ ಕೊನೆಗೊಳ್ಳಲಿದ್ದು, ಈ ಒಡಂಬಡಿಕೆಯನ್ನು ಪರಿಷ್ಕೃತಗೊಳಿಸುವ ಯಾವುದೇ ಉದ್ದೇಶ ತನ್ನಲ್ಲಿಲ್ಲ ಎಂದು ಬುಧವಾರ ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಕ್ ತಿಳಿಸಿದರು.
“ಈಗಾಗಲೇ ಪಿಸಿಬಿ ಅಧ್ಯಕ್ಷ ಎಹಸಾನ್ ಮಣಿ, ಆಡಳಿತ ನಿರ್ದೇಶಕ ವಾಸಿಮ್ ಅಕ್ರಮ್ ಅವರೊಂದಿಗೆ ನನ್ನ ನಿರ್ಧಾರದ ಬಗ್ಗೆ ಪ್ರತ್ಯೇಕವಾಗಿ ಮಾತಾಡಿದ್ದೇನೆ. ಈವರೆಗೆ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಕೃತಜ್ಞತೆಗಳು’ ಎಂಬುದಾಗಿ ಇಂಝಮಾಮ್ ಹೇಳಿದರು.
ವಾಸಿಮ್ ಹೈದರ್, ತೌಸಿಫ್ ಅಹ್ಮದ್ ಮತ್ತು ವಜಹತುಲ್ಲ ವಸ್ತಿ ಅವರನ್ನೊಳಗೊಂಡ ಆಯ್ಕೆ ಸಮಿತಿಗೆ ಇಂಝಮಾಮ್ ಅಧ್ಯಕ್ಷರಾಗಿದ್ದರು. ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಸ್ಟ್ರೇಲಿಯ ವಿರುದ್ಧ ಯುಎಇಯಲ್ಲಿ ನಡೆದ ಏಕದಿನ ಸರಣಿಗಾಗಿ ನಾಯಕ್ ಸಫìರಾಜ್ ಅಹ್ಮದ್ ಸಹಿತ 6 ಮಂದಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ ಇಂಝಮಾಮ್ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು.
“ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಐಸಿಸಿ ಟಿ20 ವಿಶ್ವಕಪ್ ಹಾಗೂ ಇನ್ನಿತರ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳ ಹಿನ್ನೆಲೆಯಲ್ಲಿ ಪಾಕಿಸ್ಥಾನಿ ಕ್ರಿಕೆಟಿಗೆ ಹೊಸ ದಿಕ್ಕು ತೋರಿಸಬಲ್ಲ, ಹೊಸ ಯೋಜನೆಗಳನ್ನು ಸಾಕಾರಗೊಳಿಸಬಲ್ಲ ಪ್ರಧಾನ ಆಯ್ಕೆಗಾರನೊಬ್ಬನ ಅಗತ್ಯವಿದೆ’ ಎಂದು ಪಿಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.