Advertisement

ಅಪಘಾತ ಆಹ್ವಾನಿಸುತ್ತಿದೆ ಹಳೆ ತಾಲೂಕು ಆಫೀಸ್‌ ಎದುರಿನ ಡಿವೈಡರ್‌

06:00 AM Jun 06, 2018 | |

ವಿಶೇಷ ವರದಿ

Advertisement

ಉಡುಪಿ: ನಗರದ ಹಳೆ ತಾಲೂಕು ಆಫೀಸ್‌ ಎದುರಿನಲ್ಲಿ ಸುಮಾರು 20 ಅಡಿ ದೂರದ ಡಿವೈಡರ್‌ ಅನ್ನು ಕಿತ್ತು ಹಾಕಲಾದ ಪರಿಣಾಮ ಸಾರ್ವಜನಿಕರು, ದ್ವಿಚಕ್ರವಾಹನ ಸವಾರರು ಡಿವೈಡರ್‌ ಮೇಲೆ ಸಂಚರಿಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಡಿವೈಡರ್‌ಗೆ ಹಾಕಲಾದ ರಾಡ್‌ಗಳು ಎದ್ದುಕೊಂಡಿವೆ. ಬೀದಿ ದೀಪಕ್ಕಾಗಿ ಡಿವೈಡರ್‌ ಮೇಲೆಯೇ ಹಾದು ಹೋದ ವಿದ್ಯುತ್‌ ಕೇಬಲ್‌ ಕೂಡ ಇದೆ. ಈ ಕೇಬಲ್‌ಗೆ ಸ್ವಲ್ಪ ಹಾನಿಯಾದರೂ ವಿದ್ಯುತ್‌ ಪ್ರವಹಿಸುವ ಅಪಾಯವಿದೆ. ಇಂದಿರಾ ಕ್ಯಾಂಟೀನ್‌ ನಿರ್ಮಾಣ ಸಂದರ್ಭ ಕ್ರೇನ್‌ ಬರುವುದಕ್ಕೆ ರಾತ್ರೋರಾತ್ರಿ ಡಿವೈಡರ್‌ ಅನ್ನು ಕಿತ್ತು ಹಾಕಲಾಗಿದೆ ಎನ್ನಲಾಗುತ್ತಿದ್ದು, ಕ್ಯಾಂಟಿನ್‌ ಕಾಮಗಾರಿ ಮುಗಿದ ಬಳಿಕ ಡಿವೈಡರ್‌ ಸರಿಮಾಡದೇ ಹಾಗೆಯೇ ಬಿಟ್ಟಿದ್ದರಿಂದ ಸಮಸ್ಯೆಯಾಗಿದೆ.  


ಕಿತ್ತುಹೋದ ಡಿವೈಡರ್‌ನಿಂದ ಎದ್ದು ನಿಂತ ರಾಡ್‌.

ಜನನಿಬಿಡ ಪ್ರದೇಶ
ಇಂದಿರಾ ಕ್ಯಾಂಟೀನ್‌ ತೆರಳಬೇಕಾದವರು ಮತ್ತು ಕ್ಯಾಂಟೀನ್‌ನಿಂದ ಹೊರಗೆ ಬರುವವರು ಕಿತ್ತು ಹಾಕಿದ ಡಿವೈಡರ್‌ ಮೇಲೆಯೇ ಸಂಚರಿಸುತ್ತಿದ್ದಾರೆ. ಬಿಗ್‌ ಬಜಾರ್‌ ಮತ್ತು ಕೋರ್ಟ್‌ ಎದುರಿನ ವರೆಗೆ ಹೋಗಿ ಯು ಟರ್ನ್ ಮಾಡಬೇಕಾದ ಕೆಲವು ದ್ವಿಚಕ್ರವಾಹನ ಸವಾರರು ನೇರವಾಗಿ ಡಿವೈಡರ್‌ ಮೇಲೆಯೇ ಹಾದು ಬರುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.  ಉಡುಪಿ ನಗರದ ಮುಖ್ಯ ರಸ್ತೆ ಇದಾಗಿದ್ದು, ಹಲವಾರು ವೇಗದೂತ, ಸಿಟಿ ಬಸ್‌ಗಳು ಓಡಾಟ ನಡೆಸುತ್ತವೆ. ಅವಶ್ಯ ಅಂಗಡಿ ಮುಂಗಟ್ಟುಗಳಿಂದ ಕೂಡಿದ ಇಲ್ಲಿ ಜನರ ಓಡಾಟವೂ ನಿರಂತವಾಗಿದೆ. ಕಿತ್ತು ಹಾಕಲಾದ ಡಿವೈಡರ್‌ ಮೇಲೆ ಕಳೆದ ತಿಂಗಳು ಅಡ್ಡವಾಗಿ 4 ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು. ಆದರೆ ಈಗ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದರಿಂದ ಸಮಸ್ಯೆ ಉಲ್ಬಣಿಸಿದೆ.  

ಶೀಘ್ರ ಗಮನಹರಿಸಿ
ಡಿವೈಡರ್‌ ರಿಪೇರಿ ಮಾಡುವ ವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ ಸಂಭವಿಸಬಹುದಾದ ಅಪಾಯ ತಪ್ಪಿಸಬಹುದು. ಡಿವೈಡರ್‌ ರಿಪೇರಿಗೊಳಿಸುವತ್ತ ಸಂಬಂಧಪಟ್ಟವರು ಶೀಘ್ರ ಗಮನಹರಿಸಿ ಮುಂದಾಗಬಹುದಾದ ಸಮಸ್ಯೆಯನ್ನು ತಡೆಯಬೇಕಾಗಿದೆ.
ಅಜಿತ್‌ ಭಟ್‌, ಸ್ಥಳೀಯರು

ರಿಪೇರಿ ಕಾಮಗಾರಿ ನಡೆಸುತ್ತೇವೆ
ಡಿವೈಡರ್‌ ರಿಪೇರಿ ಕಾಮಗಾರಿಗೆ ನಗರಸಭೆಯಿಂದ 60 ಸಾವಿರ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಟೆಂಡರ್‌ ಕರೆದು ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು.
ಜಿ.ಸಿ. ಜನಾರ್ದನ್‌, ನಗರಸಭೆ ಪೌರಾಯುಕ್ತರ

Advertisement
Advertisement

Udayavani is now on Telegram. Click here to join our channel and stay updated with the latest news.

Next