ಮೈಸೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಂತೆ ಮೈಸೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಶೀಘ್ರದಲ್ಲೇ ಪೂರ್ವಭಾವಿ ಸಭೆ ಕರೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಭಾನುವಾರ ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ವಿಭಾಗ ಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 72 ಸಾವಿರ ಕೋಟಿ ರೂ. ಬಂಡವಾಳ ಹರಿದುಬಂದಿದೆ ಎಂದು ಮಾಹಿತಿ ನೀಡಿದರು.
ಬಾಂಬೆ ಇನ್ವೆಸ್ಟರ್ಸ್ ಮೀಟ್ ಮಾದರಿಯಲ್ಲಿ ಕರ್ನಾಟಕದ 2 ಮತ್ತು 3ನೇ ಸ್ತರದ ನಗರಗಳಲ್ಲಿ ವಲಯ ಮಟ್ಟದಲ್ಲಿ ಹೂಡಿಕೆದಾರರ ಸಭೆ ನಡೆಸಲಾಗುವುದು. 2019-24ರ ಕೈಗಾರಿಕೆ ನೀತಿಯಲ್ಲಿ ತಿಳಿಸಿರುವಂತೆ 2 ಮತ್ತು 3ನೇ ನಗರಗಳಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡಲಾಗುವುದು ಎಂದರು.
ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಹಲವಾರು ಪ್ರಸ್ತಾವನೆಗಳನ್ನು ಸಚಿವರಿಗೆ ಸಲ್ಲಿಸಿದರು. ಕೂರ್ಗಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯಿಂದ ಹಂಚಿಕೆಯಾಗಿರುವ ಉದ್ದಿಮೆದಾರರಿಗೆ ಹಂಚಿಕೆ ಪತ್ರ ನೀಡಬೇಕು. ತಾಂಡ್ಯ-ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 100 ಎಕರೆ ಪ್ರದೇಶವನ್ನು ಆಹಾರ ಮತ್ತು ಫಾರ್ಮ ಪಾರ್ಕ್ ಸ್ಥಾಪಿಸಲು ಮೀಸಲಿರಿಸಬೇಕು ಎಂದು ಮನವಿ ಮಾಡಿದರು.
ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ 2 ಮಹಿಳಾ ಪಾರ್ಕ್ ಉದ್ದಿಮೆಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆಗೆ ಪರಿಗಣಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಹಾಗೂ ನಾಲಾ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಬೇಕು ಎಂದು ಕೇಳಿದರು.
ಟ್ರಕ್ ಟರ್ಮಿನಲ್ ಸ್ಥಾಪನೆಗೆ 10 ಎಕರೆ ನಿವೇಶನ ಮೀಸರಿಸಬೇಕು. ಕೈಗಾರಿಕಾ ಪ್ರದೇಶ ತಾಜ್ಯ ಶೇಖರಣೆ, ಸಂಸ್ಕರಣೆ ಹಾಗೂ ವಿಲೇವಾರಿ ಘಟಕ ಸ್ಥಾಪಿಸಬೇಕು. ಕೈಗಾರಿಕೆ ಪ್ರದೇಶಗಳಿಗೆ ಹೊಂದಿಕೊಂಡಂತೆ ಇರುವ ಭೂಮಿಯನ್ನು ವಸತಿ ಬಡಾವಣೆ ಹಾಗೂ ವಸತಿ ಸಮುತ್ಛಯಗಳ ನಿರ್ಮಾಣಗಳಿಗೆ ಅನುಮೋದನೆ ನೀಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಬಫರ್ ಝೋನ್ ಅಂತರ ಕಾಯ್ದುಕೊಳ್ಳಲು ನಗರಾಭಿವೃದ್ಧಿ ಕಾಯಿದೆ ತಿದ್ದುಪಡಿ ತರುವಂತೆ ಕೋರಿದರು.
ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ಕೆಐಎಡಿಬಿ ಸಿಇಒ ಬಸವರಾಜೇಂದ್ರ, ಮಾಜಿ ಶಾಸಕ ಕೋಟೆ ಶಿವಣ್ಣ, ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಕಡಕೊಳ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಕೃಷ್ಣೇಗೌಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜಪ್ಪ, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ ಇದ್ದರು.