ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಸಂದಿಗ್ಧವಾದ ಸಂದರ್ಭದಲ್ಲಿ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಇಲ್ಲಿ ಬಜೆಟ್‌ನ ಅಂಶಗಳನ್ನು ನೋಡಿದರೆ, ಮುಖ್ಯಮಂತ್ರಿಗಳದ್ದು ಅಕ್ಷರಶಃ ತಂತಿಮೇಲಿನ ನಡಿಗೆಯಾಗಿದೆ.
ಒಂದೆಡೆ ಕೇಂದ್ರ ತೆರಿಗೆಗಳಲ್ಲಿನ ರಾಜ್ಯಕ್ಕೆ ಬರಬೇಕಾದ ಸುಮಾರು 8,887 ಕೋಟಿ ರೂ. ಕಡಿತವಾಗಿದೆ. ಮತ್ತೂಂದೆಡೆ ಜಿಎಸ್‌ಟಿ ಪರಿಹಾರ ಉಪಕರದ ನಿರೀಕ್ಷಿತ ಸಂಗ್ರಹಣೆ ಇಲ್ಲದ ಕಾರಣ 3 ಸಾವಿರ ಕೋಟಿ ರೂ. ಕಡಿಮೆ ಆಗಿದೆ. ಅಂದರೆ ಹೆಚ್ಚು-ಕಡಿಮೆ 12 ಸಾವಿರ ಕೋಟಿ ರೂ. ಖೋತಾ ಆಗಿದೆ. ಇಂತಹ ಸನ್ನಿವೇಶದಲ್ಲೂ ತೈಲ ಹೊರತುಪಡಿಸಿ, ಬೇರೆ ಯಾವುದರ ಮೇಲೂ ಹೊರೆ ಆಗದಂತೆ ಮಂಡಿಸುವುದರ ಜತೆಗೆ ಹೂಡಿಕೆದಾರರನ್ನೂ ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಗತಾರ್ಹವಾಗಿದೆ.
ಕೊರೊನಾ ವೈರಸ್‌ನಿಂದ ಪ್ರಮುಖ “ಸಪ್ಲೆ„ ಚೈನ್’ ಆಗಿರುವ ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿವಿಧ ದೇಶಗಳು ಈಗ ಎರಡನೇ ಸಪ್ಲೆ„ ಚೇನ್ ಮೂಲ ಹುಡುಕುತ್ತಿದ್ದು, ಅದು ಭಾರತವೇ ಅದರಲ್ಲೂ ಕರ್ನಾಟಕವೇ ಯಾಕೆ ಆಗಬಾರದು? ವಿದೇಶಿ ಹೂಡಿಕೆದಾರರ ರ್‍ಯಾಂಕಿಂಗ್‌ನಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೇರಲು ಇದೊಂದು ಸದಾವಕಾಶ. ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಮಾಡಿದ್ದಾರೆ. ಉದಾಹರಣೆಗೆ ಹೂಡಿಕೆದಾರರನ್ನು ಉತ್ತೇಜಿಸಲು ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲಿಕರಿಂದ ಭೂಮಿ ಖರೀದಿಸಲು ಅನುಕೂಲ ಆಗುವಂತೆ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.
ನಮ್ಮಲ್ಲಿ ಸಾಕಷ್ಟು ಇಂಧನ ಇದೆ. ಆದರೆ, ಭೂಮಿ ಮಂಜೂರಾತಿಯಲ್ಲಿ ತುಸು ಅಡತಡೆಗಳಿವೆ. ಅದನ್ನು ತೊಡೆದುಹಾಕುವ ಪ್ರಯತ್ನ ಇಲ್ಲಿ ನಡೆದಿದೆ. ಜತೆಗೆ 2020ರ ನವೆಂಬರ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಕೂಡ ನಡೆಯಲಿದೆ. ಜತೆಗೆ ಈಸ್ ಆಫ್ ಲಿವಿಂಗ್ ಮೂಲಕ “ಗ್ರಾಮ ಒನ್’ ಘೋಷಿಸಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ.
ಇನ್ನು ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಿಸುವುದರ ಜತೆಗೆ ತೆರಿಗೆ ಸಂಗ್ರಹ ಈ ಬಾರಿ ಶೇ. 14ರಷ್ಟು ಆಗಲಿದೆ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಮೂಲಕ ತೆರಿಗೆ ಖೋತಾದಿಂದ ಆಗಿರುವ ಹೊರೆಯನ್ನು ನೀಗಿಸಲಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಜಾಣ ನಡೆ ಪ್ರದರ್ಶಿಸಿದ್ದಾರೆ.
-ಡಿ. ಮುರಳೀಧರ್,
ಆರ್ಥಿಕ ತಜ್ಞ.