Advertisement

ಹೊಸ ಹರುಷದ ಹೂಡಿಕೆಗಳು

12:30 AM Dec 31, 2018 | |

ಹಗಲು ಕಳೆದು ರಾತ್ರಿ ಮುಗಿದರೆ ಹೊಸ ವರ್ಷದ ಬಾಗಿಲು ತೆರೆಯುತ್ತದೆ.  ಈ ವರ್ಷ ನಾವು ಶ್ರೀಮಂತರಾಗೋಣ ಅಂತೆಲ್ಲ ಲೆಕ್ಕ ಹಾಕಿದವರು, ಲೆಕ್ಕ ಹಾಕುವವರು ಮುಂದೇನು ಮಾಡಬೇಕು ಅನ್ನೋದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ. ಅದಕ್ಕೆ ಇಲ್ಲಿದೆ ಮಾಹಿತಿ. 

Advertisement

ನಾಳೆ ಹೊಸ ವರುಷ.  
ಬೆನ್ನಿಗೆ ಹಳೆ ವರ್ಷ 2018. ಹಣ ಉಳಿಸಬೇಕು, ಹಣ ಗಳಿಸಬೇಕು ಅಂತೆಲ್ಲಾ ಅನೇಕ ಯೋಜನೆಗಳು ಇನ್ನೂ ತಲೆಯಲ್ಲಿ ಹಾಗೇ ಇವೆ. ಈ ವರ್ಷ ಇದ್ದಂತೆ ಮುಂದಿನ ವರ್ಷ ಇರುತ್ತದೆಯೇ? ಹೀಗೊಂದು ಅನುಮಾನ ಏಳುವುದು ಸಹಜ. ಪರಿಸ್ಥಿತಿಯಾವುದೂ ನಮ್ಮ ಕೈಯಲ್ಲಿಲ್ಲ. ಹಣ ಮಾತ್ರ ಸ್ವಲ್ಪವೋ, ಜಾಸ್ತಿಯೇ ನಮ್ಮಲ್ಲಿ ಇರುವುದು! 

ಹೊಸ ವರುಷ ಎಂದಾಕ್ಷಣ ನೆನಪಾಗುವುದು, ಹಳೆಯ ವರ್ಷದಲ್ಲಿ ಮಾಡಿರಬಹುದಾದ ತಪ್ಪುಗಳು. ಅವುಗಳನ್ನು ತಿದ್ದಿಕೊಂಡು ಮುನ್ನಡೆಯುವ ದಿಸೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು. ಅದನ್ನು ನ್ಯೂ ಇಯರ್‌ ರೆಸಲ್ಯೂಷನ್ಸ್‌ ಅಂತಾರೆ.  ಈ ರೆಸಲ್ಯೂಷನ್‌ಗಳೇ ಒಂಥರಾ ಮಜವಾಗಿರುತ್ತವೆ. ಕುಡಿತ, ಸಿಗರೇಟು ಬಿಡುತ್ತೇನೆನ್ನುವುದು, ಬೆಳಗ್ಗೆ ಬೇಗ ಏಳುವುದು, ವ್ಯಾಯಾಮ ಕಡ್ಡಾಯವಾಗಿ ಮಾಡುವುದು ಇವೆಲ್ಲವೂ ರೆಸಲ್ಯೂಷನ್‌ ಭಾಗವೇ. ಆದರೆ , ಹೊಸ ವರ್ಷದ ಮೊದಲ ತಿಂಗಳಲ್ಲೇ ಹಲವು ರೆಸಲ್ಯೂಷನ್‌ಗಳು ಮುರಿದು ಬಿದ್ದಿರುತ್ತವೆ. ಮತ್ತೆ ಹಳೆಯ ಚಾಳಿ ಹಲವರಲ್ಲಿ ಅಂಟಿಕೊಳ್ಳುವುದೂ ಇದೆ.  ತಪ್ಪು ಮಾಡದವ್ರು ಯಾರವ್ರೆ,ತಪ್ಪೇ ಮಾಡದವ್ರು ಎಲ್ಲವ್ರೇ  ಎಂಬ ಹಾಡನ್ನು ನೆನಪಿಸಿಕೊಳ್ಳಿ.  ಇದೆಲ್ಲವೂ ಮಾನವಸಹಜ ಗುಣ ಎನ್ನೋಣ,  ಆದರೆ ನಮ್ಮ ಕಷ್ಟಾರ್ಜಿತ ಹಣದ ಹೂಡಿಕೆಯ ವಿಚಾರಕ್ಕೆ ಬಂದಾಗ ಸಾಕಷ್ಟು ಮುನ್ನೆಚ್ಚರಿಕೆ, ಜಾಗರೂಕತೆ ಮತ್ತು ಜಾಣತನ ಇರಬೇಕಾಗುತ್ತದೆ.  ಈ ಪೈಕಿ ಒಂದು ವಿಚಾರದಲ್ಲಿ ಎಡವಿದರೂ ಆಗುವ ಹಾನಿ ದೊಡ್ಡದಾಗಿರುತ್ತದೆ. 

ಕಳೆದ ವರ್ಷ ಇದೇ ಹೊತ್ತಿಗೆ ನೀವು ಹೂಡಿಕೆ ಮಾಡಿದ್ದರೆ, ಈಗ (ವರ್ಷದ ಕೊನೆಯಲ್ಲಿ) ಅದರ ಫ‌ಲಶ್ರುತಿ ಹೇಗಿತ್ತು, ಪ್ಲಸ್ಸು, ಮೈನಸ್ಸುಗಳನ್ನು ನಿಮ್ಮ ನಿಮ್ಮಲ್ಲೇ ಲೆಕ್ಕ ಹಾಕಿಕೊಳ್ಳಿ.  ಹೂಡಿಕೆ ಲಾಭದ ಹಾದಿಯಲ್ಲಿದ್ದರೆ ಖುಷಿಪಡಿ, ನಷ್ಟವಾಗಿದ್ದರೆ ದುಃಖೀಸುವುದು ಬೇಡ.  ಎಲ್ಲಿ ತಪ್ಪಿದ್ದೀರೆಂದು ನೀವೇ ಅನಲೈಸ್‌ ಮಾಡಿಕೊಂಡು ಹುಷಾರಾಗಿ ಮುಂದಡಿ ಇಡಿ. ಯಾವುದೇ ಕಾರಣಕ್ಕೂ ಹೂಡಿಕೆಯನ್ನು ನಿಲ್ಲಿಸಬೇಡಿ.  ತಾಳ್ಮೆ ಹೆಚ್ಚಿಸಿಕೊಂಡರೆ ಅಚ್ಚೇ ದಿನ್‌ ಬಂದೇ ಬರುತ್ತದೆ. 

 ಹೂಡಿಕೆ ಎಂಬ ವಿಚಾರಕ್ಕೆ ಬಂದಾಗ ಹಲವರು ಹೇಳುವುದು ಒಂದೇ ಮಾತು, “ಸಾರ್‌ ನಮ್ಮತ್ರ ಎಲ್ಲಿ ಉಳಿಯುತ್ತೆ ದುಡ್ಡು,  ದುಡಿದಿದ್ದೆಲ್ಲ ಮನೆಬಾಡಿಗೆ, ಶಾಪಿಂಗ್‌, ತಿರುಗಾಟಕ್ಕೆ ಖರ್ಚಾಗುತ್ತೆ. ತಿಂಗಳ ಕೊನೆಗೆ ಏನೂ ಉಳಿಯಲ್ಲ’ ಹೀಗೆ ಹೇಳುವವರು ಒಬ್ಬರಲ್ಲ, ಇಬ್ಬರಲ್ಲ ಸಾವಿರಾರು ಮಂದಿ ಇರುತ್ತಾರೆ. ಆದರೆ ಆ ಖರ್ಚುಗಳ ನಡುವೆಯೇ ಒಂದಷ್ಟು ಉಳಿತಾಯ ಮಾಡಿ ಯಾವುದೋ ಒಂದು ಪ್ಲಾನ್‌ನಲ್ಲಿ ತೊಡಗಿಸಿದರೆ ನಮಗೇ ಅರಿವಿಲ್ಲದಂತೆ ಅದು ಬೆಳೆಯುತ್ತದೆ. ನಿನ್ನೆ ಮೊನ್ನೆ ಕೈಗೂಸಂತಿದ್ದ ನಿಮ್ಮ ಮಗ ಈಗ ನಿಮಗಿಂತ ಎತ್ತರ ಬೆಳೆದು ನಿಂತಾಗ ಆಗುವ ಖುಷಿಯಂತೆ, ಈ ಹೂಡಿಕೆಯೂ ಒಂದು ದಿನ ನಿಮಗಿಂತ ಎತ್ತರಕ್ಕೆ ಬೆಳೆದು ಖುಷಿ ಕೊಡುತ್ತದೆ. ಹಾಗಾಗಿ, ನಿಮ್ಮ ಆದಾಯದ ಶೇ. 1ರಷ್ಟಾದರೂ ಹೂಡಿಕೆ ಮಾಡಿ.  

Advertisement

ಹಾಗಿದ್ದರೆ,  ಹಣವನ್ನು ಎಲ್ಲಿ  ಹೂಡಿಕೆ ಮಾಡಿದರೆ ಚೆನ್ನ?ಎಲ್ಲರ ಕಾತರದ ಪ್ರಶ್ನೆ ಇದು.   ಬ್ಯಾಂಕ್‌ ಠೇವಣಿ, ಮ್ಯೂಚುವಲ್‌ ಫ‌ಂಡ್‌, ಶೇರು ಮಾರುಕಟ್ಟೆ, ರಿಯಲ್‌ ಎಸ್ಟೇಟ್‌, ಚಿನ್ನ, ಬೆಳ್ಳಿ ಹೀಗೆ ಹಲವಾರು ಮಾರ್ಗಗಳು ನಮ್ಮ ಮುಂದಿವೆ.  ಯಾವುದು ಸೂಕ್ತ, ಯಾವುದರಲ್ಲಿ ಎಷ್ಟು ಹೂಡಿದರೆ ಒಳಿತು ಎಂಬುದು ನಿಮ್ಮ ವೇಚನೆಗೆ ಬಿಟ್ಟದ್ದು. ಹೂಡಿಕೆಗೂ ಮೊದಲು ಕಳೆದ ವರ್ಷ ಎಷ್ಟು ಪಸಲು ಕೊಟ್ಟಿದೆ ಎನ್ನುವುದರ ಆಧಾರದ ಮೇಲೆ ತೀರ್ಮಾನ ಮಾಡಬೇಕು.  

 ನಿಮ್ಮ ಹೂಡಿಕೆಯ ಬಗ್ಗೆ  ಸ್ಪಷ್ಟ ನಿರ್ಧಾರವಿರಲಿ.  ಅದು ಅಲ್ಪಾವಧಿ ಹೂಡಿಕೆಯೋ ಅಥವಾ ದೀರ್ಘಾವಧಿ ಹೂಡಿಕೆಯೋ ಎಂಬುದನ್ನು ಮೊದಲು ಖಚಿತಗೊಳಿಸಿಕೊಳ್ಳಬೇಕು. ನಂತರ ಅದಕ್ಕೆ ತಕ್ಕಂತೆ ಹೂಡಿಕೆಯ ವಿಧಾನವನ್ನು ರೂಢಿಸಿಕೊಳ್ಳಬೇಕು. ಹೊಸವರ್ಷದಲ್ಲಿ ನಿಮಗೆ ಹೂಡಿದ ಮೊತ್ತ ವಾಪಸ್‌  ಸಿಗಬೇಕೆಂದಾದರೆ ಅದು ಅಲ್ಪಾವಧಿ ಹೂಡಿಕೆ ಆಗಿರಲಿ.  ಆದರೆ ಒಂದು ಸತ್ಯ ಏನೆಂದರೆ, ಅಲ್ಪಾವಧಿ ಹೂಡಿಕೆಯಿಂದ ಹೆಚ್ಚೆಚ್ಚು ರಿಟನ್ಸ್‌ ಸಿಗುವುದಿಲ್ಲ.  ತುತೇìನಿಲ್ಲ, ಮಗ ಅಥವಾ ಮಗಳ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆ ಸಂದರ್ಭದಲ್ಲಿ ಹಣ ಕೈಗೆ ಸಿಕ್ಕರೆ ಸಾಕು ಎನ್ನುವುದಾದರೆ ದೀರ್ಘಾವಧಿ ಹೂಡಿಕೆ ಮಾಡಿ. 

 ಹೀಗಾಗಿ, ನಮ್ಮ ಕಣ್ಣ ಮುಂದಿರುವ ಆಯ್ಕೆ-ಹೀಗಿವೆ. 
1.    ಚಿನ್ನ

 ಹೂಡಿಕೆ ಅಂದರೆ ಎಲ್ಲರಿಗೂ ಮೊದಲಿಗೆ ಚಿನ್ನವೇ ನೆನಪಾಗುತ್ತದೆ. ಚಿನ್ನದ ಮೇಲಿನ ಹೂಡಿಕೆಯಿಂದ ಈವರೆಗೆ ಯಾರಿಗೂ ನಷ್ಟವಾಗಿಲ್ಲ. ಆದರೆ, ಬದಲಾದ ಕಾಲಮಾನದಲ್ಲಿ ಇದು ಅಲ್ಪಾವಧಿ ಹೂಡಿಕೆಯಾಗಿಲ್ಲ.  1964ರಲ್ಲಿ ಹತ್ತುಗ್ರಾಂ ಚಿನ್ನಕ್ಕೆ  ರೂ:65-00 ಇದ್ದರೆ  1974 ರಲ್ಲಿ ಅದು ರೂ.506 ಆಗಿತ್ತು.  1980ರಲ್ಲಿ 133, 1990 ರ ವೇಳೆಗಾಗಲೇ 3,200-ತಲುಪಿತ್ತು.  2000ನೇ ಇಸವಿಗೆ ಬಂದಾಗ ಹತ್ತು ಗ್ರಾಂ ಚಿನ್ನದ ಬೆಲೆ ರೂ:4400,  2018ರ ಕೊನೆಯಲ್ಲಿ ಅದೀಗ  ಮೂವತ್ತುಸಾವಿರದ ಆಜುಬಾಜು ಬಂದು ನಿಂತಿದೆ.  ಈ ಏರಿಳಿತದ ಬೆಲೆ ವೈಪರೀತ್ಯ ಮುಂದುವರೆಯುವ ಎಲ್ಲ ಲಕ್ಷಣಗಳೂ ಇವೆ. ಹಾಗಾಗಿ, ಭೌತಿಕವಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಚಿನ್ನ ಕೊಳ್ಳಿ.  ಆದರೆ ಹೂಡಿಕೆ ವಿಚಾರಕ್ಕೆ ಬಂದಾಗ ಆಭರಣ ಖರೀದಿಗೆ ಮುಂದಾಗಬೇಡಿ. ಇದು ಡಿಜಿಟಲ್‌ ಯುಗ.  ಚಿನ್ನದ ಹೂಡಿಕೆಗೆಂದೇ  ಗೋಲ್ಡ್‌ ಫ‌ಂಡ್‌ ಗಳಿವೆ, ಈ.ಟಿ.ಎಫ್. ಬಾಂಡ್‌ ಗಳಿವೆ, ಅಲ್ಲಿ ಹೂಡಿಕೆ ಮಾಡಿ, ಬೆಲೆ ಏರಿದಾಗ ಮಾರಿ ನಗದೀಕರಿಸಿಕೊಳ್ಳುವುದಕ್ಕೂ ಸುಲಭ.   ಇವೆಲ್ಲವೂ ಕಾನೂನುಬದ್ಧವಾಗಿದ್ದು, ಮೋಸ ಹೋಗುವ ಭಯ ಇರುವುದಿಲ್ಲ.  ಆದರೆ ನೆನಪಿಡಿ, ನಿಮ್ಮ ಉಳಿತಾಯದ ಶೇ:20ಕ್ಕಿಂತ ಹೆಚ್ಚು ಹಣವನ್ನು ಮಾತ್ರ ಇದರಲ್ಲಿ ನಿಯೋಜನೆ ಮಾಡಿ ಸಾಕು, ಉಳಿದದ್ದನ್ನು ಬೇರೆಡೆ ಹೂಡುವುದು ಒಳಿತು.

2.    ಬೆಳ್ಳಿ
 ಇತ್ತೀಚಿನ ವರ್ಷಗಳಲ್ಲಿ ಬೆಳ್ಳಿಯ ದರದಲ್ಲಿ ಆಗಿರುವ ವ್ಯತ್ಯಯ ಹೂಡಿಕೆಗೆ ಅದು ಯೋಗ್ಯ ಎಂಬ ನಂಬಿಕೆಯನ್ನು ಹುಟ್ಟಿಸಿದೆ. ಆದರೆ ಇಲ್ಲಿ ಲಿಕ್ವಿಡಿಟಿ ಚಿನ್ನದಷ್ಟು ಇಲ್ಲ ಎಂಬುದು ನೆನಪಿರಲಿ.  1970ರಲ್ಲಿ ರೂ:536/- ರಲ್ಲಿ ಒಂದು ಕೆಜಿ ಬೆಳ್ಳಿ ಕೊಳ್ಳಬಹುದಿತ್ತು.  ಈಗ ಕೆ.ಜಿಗೆ ನಲವತ್ತುಸಾವಿರ ರೂ. ಆಸುಪಾಸಿನಲ್ಲಿದೆ.  ಬೆಳ್ಳಿಯಲ್ಲಿಯೂ  ಈ.ಟಿ.ಎಫ್. ಹೂಡಿಕೆ ಮಾರ್ಗವಿದೆ. ನೀವು ಭೌತಿಕವಾಗಿ ಬೆಳ್ಳಿ ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳಬೇಕಿಲ್ಲ. ಫ‌ಂಡ್‌ಗಳಲ್ಲಿ ನಿಯೋಜನೆ ಮಾಡಿ ಬೆಳ್ಳಿಬೆಲೆಯ ಏರಿಳಿತಗಳನ್ನು ಗಮನದಲ್ಲಿಟ್ಟು ಲಾಭ ಮಾಡಿಕೊಳ್ಳಬಹುದು.  ಆದರೆ ಈ ಮೂಲದಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಹೋಮ್‌ ವರ್ಕ್‌ ಮಾಡಿಕೊಳ್ಳಿ. ನಿಮ್ಮ ಒಟ್ಟಾರೆ ವಾರ್ಷಿಕ ಉಳಿತಾಯದ ಶೇ: 10ನ್ನು ಇಲ್ಲಿ ತೊಡಗಿಸಿ. ತಕ್ಷಣ ಆದಾಯವನ್ನು ನಿರೀಕ್ಷಿಸಬೇಡಿ.  

3.    ರಿಯಲ್‌ ಎಸ್ಟೇಟ್‌
ಇದು ಹೂಡಿಕೆಯ ಆಕರ್ಷಕ ಕ್ಷೇತ್ರ. ಹಾಕಿದ ದುಡ್ಡಿಗೆ ಎರಡು, ಮೂರು ಪಟ್ಟು ಹೆಚ್ಚು ಲಾಭ ತಂದು ಕೊಡುತ್ತದೆ ಅನ್ನೋದು ಸತ್ಯ. ಆದರೆ, ನಮ್ಮ ಹೂಡಿಕೆಯನ್ನು ಎಲ್ಲಿ ಮಾಡುತ್ತೇವೆ ಎನ್ನುವುದರ ಮೇಲೆ ಲಾಭದ ಪ್ರಮಾಣ ನಿಗದಿಯಾಗುತ್ತದೆ.  ನಿವೇಶನ, ಜಮೀನು, ಫ್ಲಾಟ್‌ ಇವೆಲ್ಲವುಗಳಲ್ಲಿ ಮಾಡಿದ ಹೂಡಿಕೆ ಲಾಭದಾಯಕವಾಗುತ್ತದೆಯೇ ಹೊರತು ನಷ್ಟ ಸಂಭವಿಸುವುದು ಕಡಿಮೆ.  ಇದು ದೂರದೃಷ್ಟಿ ಇರುವವರಿಗೆ, ಕನಿಷ್ಠ  5 ವರ್ಷ ಕಾಯುವ ಮನಸ್ಥಿತಿ ಇರುವವರಿಗೆ ಸೂಕ್ತ. ಇಂದು ಮಾಡಿದ ಹೂಡಿಕೆ ನಾಲ್ಕೈದು ತಿಂಗಳಲ್ಲಿ ದುಪ್ಪಟ್ಟು ಆಗಬೇಕೆಂದು ಬಯಸುವವರಿಗೆ ಇದು ಸೂಕ್ತ ಕ್ಷೇತ್ರವಲ್ಲ. ನಗರಪ್ರದೇಶಕ್ಕೆ ಹತ್ತಿರದಲ್ಲಿರುವ, ದಾಖಲೆಗಳು ಕಾನೂನುಬದ್ಧವಾಗಿರುವ, ರಸ್ತೆ ಅಗಲೀಕರಣದ ರಗಳೆಗಳಿಂದ ದೂರವಿರುವ ಪ್ರದೇಶದಲ್ಲಿ ನಿವೇಶನ ಖರೀದಿ ಮಾಡುವುದು ಸೂಕ್ತ.  ಒಂದೇ ವರ್ಷದ ಉಳಿತಾಯದಲ್ಲಿ ಸೈಟು ಖರೀದಿ ಮಾಡಲಾಗದು.  ಆದರೆ ಈ  ಹೂಡಿಕೆಗೆ ಬ್ಯಾಂಕ್‌ ಸಾಲಗಳೂ ಸಿಗುತ್ತವೆಯಾದ್ದರಿಂದ  ಧೈರ್ಯ ಮಾಡಿ ಮುಂದಡಿ ಇಡಿ. ಈ ಬಾಬಿ¤ಗೆ ನಿಮ್ಮ ವಾರ್ಷಿಕ ಉಳಿತಾಯದ ಶೇ.50ಅನ್ನು ನಿಯೋಜಿಸಬಹುದು.  

4.    ಶೇರು ಮಾರುಕಟ್ಟೆ
ಇದು ಒಂದು ರೀತಿಯಲ್ಲಿ ಹಾವು ಏಣಿ ಆಟವಿದ್ದಂತೆ. ಆದರೆ ನೀವು ಯಾವ ಕಂಪನಿಯಲ್ಲಿ, ಯಾವ ಸೆಕ್ಟರ್‌ನಲ್ಲಿ ಹೂಡಿಕೆ ಮಾಡಿದ್ದೀರಿ ಎಂಬುದರ ಮೇಲೆ ನಿಮ್ಮ ಲಾಭ-ನಷ್ಟ ಅವಲಂಬಿತವಾಗಿರುತ್ತದೆ. ಇಲ್ಲಿಯೂ ಅಷ್ಟೇ, ಇಂದು ಹೂಡಿ ನಾಳೆಯೇ ಲಾಭ ತೆಗೆಯಲು ಸಾಧ್ಯವಿಲ್ಲ. ಡೇ ಟ್ರೇಡಿಂಗ್‌ನಿಂದ ಲಾಭ ಮಾಡಿದ ಉದಾಹರಣೆಗಳೇ ಇಲ್ಲವೆನ್ನಬಹುದು.  ಕನಿಷ್ಠ ಮೂರು ವರ್ಷಗಳ ಹೂಡಿಕೆಯಿಂದ ಬಂದ ಲಾಭವನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಕಂಪನಿ ಶೇರಿನ ಮೇಲೆ ಹೂಡುವುದು ಒಳಿತು. ಮುಂದಿನ ದಿನಗಳಲ್ಲಿ ಪ್ರಕಾಶಮಾನವಾಗಬಹುದಾದ ಸೆಕ್ಟರ್‌ಗಳಲ್ಲಿನ ಶೇರುಗಳನ್ನು ಕೊಂಡು ಡಿಮ್ಯಾಟ್‌ ಖಾತೆಯಲ್ಲಿ ಇಟ್ಟುಬಿಡಿ. ಅವುಗಳನ್ನು ಸದ್ಯಕ್ಕೆ ಮಾರುವ ಚಿಂತೆ ಮಾಡದಿರಿ. ಖಂಡಿತವಾಗಿಯೂ ಅಲ್ಲಿ ಉತ್ತಮ ಇಳುವರಿ ಸಿಕ್ಕೇ ಸಿಗುತ್ತದೆ.  ಆದರೆ ಇಲ್ಲೂ ಅಷ್ಟೇ; ನಿಮ್ಮ  ಒಟ್ಟಾರೆ ಉಳಿತಾಯದ ಶೇ.5 ಕ್ಕಿಂತ ಜಾಸ್ತಿ ಹೂಡಿಕೆ ಬೇಡ.  

5. ಮ್ಯೂಚುವಲ್‌ ಫ‌ಂಡ್‌
ಇತ್ತೀಚಿನ ವರುಷಗಳಲ್ಲಿ ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಆಕರ್ಷಕವೆನ್ನಿಸಿದೆ. ಇದು ಕೂಡ ಅಲ್ಪಾವಧಿಗೆ ಹೇಳಿ ಮಾಡಿಸಿದ್ದಲ್ಲ. ದೀರ್ಘಾವಧಿಯಲ್ಲಿ ಉತ್ತಮ ಇಳುವರಿ ಕೊಡುವ ಹೂಡಿಕೆ ಇದಾಗಿದ್ದು,  ಯಾವ  ಫ‌ಂಡ್‌ ಸೂಕ್ತ, ಅದರಲ್ಲೂ ಯಾವ ಯೋಜನೆ ನಿಮಗೆ ಉತ್ತಮ ಎಂಬುದನ್ನು ಸಾಕಷ್ಟು ಹೋಮ್‌ ವರ್ಕ್‌ ಮಾಡಿಕೊಂಡು ತೀರ್ಮಾನಕ್ಕೆ ಬನ್ನಿ.   ನಿಮ್ಮ ಮಾಸಿಕ ಉಳಿತಾಯದಲ್ಲಿ ನಿರ್ದಿಷ್ಟ ಮೊತ್ತವನ್ನು ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ ( ಎಸ್‌ಐಪಿ) ಮೂಲಕವಾಗಿ ಹೂಡಿಕೆ ಮಾಡುವುದು ಉತ್ತಮ. ನಿಮಗರಿವಿಲ್ಲದೇ ಅದು ಹೂಡಿಕೆಯಲ್ಲಿ ತೊಡಗಿಕೊಳ್ಳುತ್ತದೆ. ಮುಂದೊಂದು ದಿನ ಲಾಭದ ಹಾದಿ ನಿಮ್ಮದಾಗುತ್ತದೆ.  ಅಂಕಿ-ಅಂಶಗಳ ಪ್ರಕಾರ, 2017ರಲ್ಲಿ ಮಾಡಿದ ಹೂಡಿಕೆ 2018ರ ಕೊನೆಯ ವೇಳೆಗೆ ಶೇ. 25-30ರಷ್ಟು ಇಳುವರಿಯನ್ನು ದಾಖಲಿಸಿದೆ. ಇದು ಉತ್ತಮ ಇಳುವರಿ ಎಂಬುದರಲ್ಲಿ ಎರಡು ಮಾತಿಲ್ಲ.  ಮ್ಯೂಚುವಲ್‌ ಫ‌ಂಡ್‌ ಬಾಬಿ¤ಗೆ ನಿಮ್ಮ ಉಳಿತಾಯದ ಶೇ.10-15  ಪ್ರಮಾಣದ ಮೊತ್ತವನ್ನು ಹೂಡಬಹುದು. ಇದು ದೀರ್ಘ‌ಕಾಲದಲ್ಲಿ ನಿಮ್ಮ ಕೈ ಹಿಡಿಯುವುದರಲ್ಲಿ ಅನುಮಾನವಿಲ್ಲ.

6.    ಬಾಂಡ್‌ಗಳು
ನಿಮ್ಮ ವಯಸ್ಸು 60 ದಾಟಿದ್ದರೆ, ಹೂಡಿಕೆ ವಿಚಾರದಲ್ಲಿ ಹೆಚ್ಚಿನ ರಿಸ್ಕ್ ಬೇಡ ಅಂತಿದ್ದರೆ  ವರಮಾನ ಕೊಡುವ ಬಾಂಡ್‌ ಮಾರ್ಗವೇ ಸೂಕ್ತ. ನೀವು ಬ್ಯಾಂಕ್‌ ಡಿಪಾಜಿಟ್‌, ಡೆಬ್‌r ಫ‌ಂಡ್‌, ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌, ಆರ್‌.ಬಿ.ಐ. ಫ‌ಂಡ್‌, ಸೀನಿಯರ ಸಿಟಿಜನ್ಸ್‌ ಸೇವಿಂಗ್ಸ್‌ ಫ‌ಂಡ್‌ ಮುಂತಾದ ಸ್ಕೀಮುಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು. ಅಲ್ಲಿ ಇಳುವರಿ ಕಮ್ಮಿ ಬರಬಹುದಾದರೂ ನಿಮ್ಮ ನೆಮ್ಮದಿಯನ್ನಂತು ಹಾಳು ಮಾಡಲಾರದು.  ಅದಕ್ಕೆ ವರ್ಷಾನುಗಟ್ಟಲೆ 

ಕಾಯ ಬೇಕಿಲ್ಲ. 
ಒಟ್ಟಿನಲ್ಲಿ 2019ರ ಹೊಸ ಕ್ಯಾಲೆಂಡರ್‌ನಲ್ಲಿ ಆರ್ಥಿಕ ಬದುಕು ಸುಗಮವಾಗಲಿ. 

ಆರೋಗ್ಯಕ್ಕಾಗಿ ಹೂಡಿಕೆ 
ನಿಮ್ಮ ವಾರ್ಷಿಕ ಗಳಿಕೆಯ ಶೇ.2-3ರಷ್ಟನ್ನು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ಹೆಲ್ತ್‌ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಿ.   ಹೆಲ್ತ್‌ ಇನ್ಸೂರೆನ್ಸ್‌ ಗೆ ಯಾವುದು ಸೂಕ್ತ ಕಂಪನಿ ಎಂಬುದನ್ನೂ ನೀವು ಮೊದಲೇ ಪರಾಮರ್ಶೆ ಮಾಡಿಕೊಳ್ಳಬೇಕು. ಕ್ಯಾಶ್‌ ಲೆಸ್‌ ಸೌಲಭ್ಯವಿರುವ ವಿಮಾಕಂಪೆನಿಯಲ್ಲಿ  ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸಿ. ಇದಲ್ಲದೇ, ಹೆಂಡತಿ-ಮಕ್ಕಳಿಗೂ ವಿಮೆ ಬೇಕು. ಇದಕ್ಕಾಗಿಯೇ ಟರ್ಮ್ ಪ್ಲಾನ್‌ಗಳೂ ಉಂಟು. ವಿಮೆಗಳು ವಯಸ್ಸಿನ ಆಧಾರದ ಮೇಲೆ ಏರುತ್ತಾ ಹೋಗುವುದರಿಂದ ಪ್ರತಿ ವರ್ಷ ಇದರ ಮೇಲಿನ ಹೂಡಿಕೆಯಲ್ಲಿ ವ್ಯತ್ಯಾಸಗಳಾಗುತ್ತಿರುತ್ತದೆ ಎಚ್ಚರ. 

ಡೆಡ್‌ ಲೈನ್‌ 1
 ಸೆಕ್ಷನ್‌ 119ರ ಪ್ರಕಾರ ಆಧಾರನ್ನು ಪಾನ್‌ ಕಾರ್ಡಿಂಗ್‌ ಲಿಂಕ್‌ ಮಾಡಲೇಬೇಕು. ಇದಕ್ಕೆ ಕೋರ್ಟಿನ ನಿರ್ಬಂಧವಿಲ್ಲ. ಅದಕ್ಕೆ ಹೊಸ ವರ್ಷ ಅಂದರೆ ಮಾರ್ಚ್‌ 31ಇದಕ್ಕೆ ಡೆಡ್‌ಲೈನ್‌. ಲಿಂಕ್‌ ಆಗದೇ ಇದ್ದರೆ ನಿಮ್ಮ ಪಾನಿಗೆ ಯಾವುದೇ ಬೆಲೆ ಇರೊಲ್ಲ.

ಡೆಡ್‌ಲೈನ್‌ 2
 ಮೊದಲ ಮನೆ ಕಟ್ಟು ಕನಸಿದ್ದರೆ,  ಅದಕ್ಕೆ ಸರ್ಕಾರದಿಂದ ರಿಯಾಯಿತಿ ಪಡೆಯುವ ಉದ್ದೇಶವಿದ್ದರೆ ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಅರ್ಜಿ ಹಾಕಿ.  ಮಾರ್ಚ್‌ 31-2019 ಕಡೇ. ಆಮೇಲೆ ಇಲ್ಲ. 

ಡೆಡ್‌ ಲೈನ್‌ 3
 ಕಂಪನಿಯಿಂದ ಕಂಪನಿಗೆ ನಿಮ್ಮ ಶೇರು (ಫಿಸಿಕಲ್‌ ಶೇರ್‌)ಗಳನ್ನು ವರ್ಗಾಯಿಸಿಕೊಳ್ಳಲು ಈ ಮೊದಲು ಡಿಸೆಂಬರ್‌ 31 ಕಡೆಯಾಗಿತ್ತು. ಈಗ ಅದು ಮಾರ್ಚ್‌ 31-2019 ಆಗಿದೆ. ಅದರೊಳಗೆ ಬೇಗ ಮುಗಿಸಿ. 

ಡೆಡ್‌ಲೈನ್‌ 4
 ಆದಾಯ ತೆರಿಗೆ ವಿವರ ಫೈಲ್‌ ಮಾಡದೇ ಇದ್ದರೆ ಎಚ್ಚರ. ಅದಕ್ಕೂ 2019ರ ಮಾರ್ಚ್‌ 1 ಡೆಡ್‌ಲೈನ್‌ ಘೋಷಣೆಯಾಗಿದೆ. 

ಡೆಡ್‌ಲೈನ್‌ 5
 ತೆರಿಗೆ ಉಳಿಸುವ ಕ್ಲೈಮುಗಳು ಅಂದರೆ ಎಲ್‌ಟಿಎನಂಥ ಕ್ಲೈಮುಗಳನ್ನು ಮಾಡಲು ಮಾರ್ಚ್‌ 31, 2019 ಕಡೇ. ಆಮೇಲೆ ಕ್ಲೈಮು ಮಾಡಲು ಹರಸಾಹಸ ಮಾಡಬೇಕು. ಮರೆಯದಿರಿ. 

ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next