Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಕಂಪೆನಿಯಿಂದ ಸಾವಿರ ಕೋಟಿಗೂ ಅಧಿಕ ಹೂಡಿಕೆ

12:57 AM Dec 31, 2022 | Team Udayavani |

ಉಡುಪಿ : ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳ ಸಹಿತ 15 ಕಂಪೆನಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂ. ಗಳಿಗೂ ಅಧಿಕ ಬಂಡ ವಾಳ ಹೂಡಿಕೆ ಮಾಡಲು ಮುಂದಾಗಿವೆ.

Advertisement

ಇದರಿಂದ ಸುಮಾರು 6 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೆಲವು ತೈಲೋತ್ಪನ್ನ ಕಂಪೆನಿಗಳು ಹೂಡಿಕೆ ಮಾಡಿವೆ. ಈಗ ಸಣ್ಣ ಮತ್ತು ದೊಡ್ಡ ಪ್ರಮಾಣದ ಕೈಗಾ ರಿಕೆಗಳು ಆಸಕ್ತಿ ತಾಳಿವೆ.

2019ರಿಂದ ಕರಾವಳಿ ಜಿಲ್ಲೆಗಳಲ್ಲಿ ಉದ್ಯಮ ಸ್ಥಾಪನೆ ಸಂಬಂಧ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ, ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು 16 ಯೋಜನೆ  ಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ 5 ಉಡುಪಿ, 15 ದ.ಕ. ಜಿಲ್ಲೆ ಹಾಗೂ 1 ಉತ್ತರ ಕನ್ನಡ ಜಿಲ್ಲೆಗೆ ಸೇರಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಕೈಗಾರಿಕೆ ಪ್ರದೇಶ, ಬೈಕಂಪಾಡಿ ಕೈಗಾರಿಕೆ ಪ್ರದೇಶ, ಗಂಜಿಮಠ ಕೈಗಾರಿಕೆ ಪ್ರದೇಶ, ಇಪಿಐಪಿ ಕೈಗಾರಿಕೆ ಪ್ರದೇಶ, ಎಂಎಸ್‌ಇಝಡ್‌ ಪ್ರದೇಶಗಳಲ್ಲಿ ಕೆಲವು ಸಂಸ್ಥೆಗಳು ಹೂಡಿಕೆಗೆ ಮನಸ್ಸು ಮಾಡಿದ್ದರೆ, ಇನ್ನು ಕೆಲವು ಕೈಗಾರಿಕೆ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶದಲ್ಲೂ ಹೂಡಿಕೆಗೆ ಮುಂದಾಗಿವೆ.

ಉಡುಪಿಯ ನಂದಿಕೂರು ಕೈಗಾರಿಕೆ ಪ್ರದೇಶ 3, ನಡ್ಸಾಲ್ ನಲ್ಲಿ 1 ಹಾಗೂ ಕಾರ್ಕಳ ಕೈಗಾರಿಕೆ ಪ್ರದೇಶದಲ್ಲಿ ಒಂದು ಕಂಪೆನಿ ಹೂಡಿಕೆಗೆ ನಿರ್ಧರಿಸಿದೆ.

Advertisement

ದ.ಕ.ದಲ್ಲಿ 800 ಕೋ.ರೂ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಕಂಪೆನಿಯು 495 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಸುಮಾರು 4,010 ಉದ್ಯೋಗಾವಕಾಶ ಕಲ್ಪಿಸುವ ಸಾಧ್ಯತೆಗಳಿವೆ. ಇನ್ನು ಬಿಗ್‌ಬ್ಯಾಗ್‌ ಕಂಪೆನಿಯು 70 ಕೋಟಿ ರೂಪಾಯಿ ಹೂಡಿಕೆ ಮಾಡಿ, ಒಂದು ಸಾವಿರ ಜನರಿಗೆ ಉದ್ಯೋಗ ನೀಡಲಿದೆ. ಫ್ಯಾಬ್‌ ಇಕೊ ಕ್ಲೀನ್‌ ಎನರ್ಜಿ ವೆಂಚರ್‌ ಕಂಪೆನಿಯ ವತಿಯಿಂದ 20 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುತ್ತಿದ್ದು, 155 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. ಫಿನ್‌ಫ‌ವರ್‌ ಏರೋಕಾನ್‌ ಸಿಸ್ಟಮ್ಸ್‌ ಕಂಪೆನಿಯಿಂದ 17.35 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿಕೆಯಾಗಲಿದ್ದು, 120 ಮಂದಿಗೆ ಉದ್ಯೋಗ ಸಿಗಲಿದೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಉದ್ಯಮ ಸಂಸ್ಥೆಗಳು ಸುಮಾರು 805.99 ಕೋ.ರೂ. ಹೂಡಿಕೆ ಮಾಡಿ 5,786 ಮಂದಿಗೆ ಉದ್ಯೋಗ ಒದಗಿಸಲಿವೆ.

ಉಡುಪಿಯಲ್ಲೆಷ್ಟು?
ಉಡುಪಿ ಜಿಲ್ಲೆಯಲ್ಲಿ ಎಂ11 ಇಂಡಸ್ಟ್ರೀಸ್‌ 96 ಕೋ.ರೂ. ಹೂಡಿಕೆ ಮಾಡಿ 100 ಮಂದಿಗೆ ಉದ್ಯೋಗಾವಕಾಶ, ಶ್ರೀಚಕ್ರ ಕಂಟೈನರ್‌ 18.95 ಕೋ.ರೂ. ಹೂಡಿಕೆ ಮಾಡಿ 102 ಮಂದಿಗೆ ಉದ್ಯೋಗ -ಹೀಗೆ 5 ಸಂಸ್ಥೆಗಳಿಂದ ಸುಮಾರು 208.23 ಕೋ.ರೂ. ಹೂಡಿಕೆ ಮತ್ತು 359 ಮಂದಿಗೆ ಉದ್ಯೋಗ ಸಿಗಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ 15 ಸಂಸ್ಥೆಗಳಿಂದ 1,014.22 ಕೋ.ರೂ. ಹೂಡಿಕೆಯಾಗಲಿದ್ದು, 6,145 ಮಂದಿಗೆ ಉದ್ಯೋಗ ಸಿಗಲಿದೆ. ಇದರಲ್ಲಿ ಕೆಲವು ಸಂಸ್ಥೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಆಕ್ಸಿಜನ್‌ ಆಧಾರಿತ ಕೈಗಾರಿಕೆಗಳು ಕರಾವಳಿ ಭಾಗಕ್ಕೆ ಬರಲಿವೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಹೂಡಿಕೆಯಿಂದ ಸ್ಥಳೀಯವಾಗಿ ಒಂದಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
-ನಾಗರಾಜ ವಿ. ನಾಯಕ್‌, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕೆ ಕೇಂದ್ರ, ಉಡುಪಿ

–  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next