ಬೆಂಗಳೂರು: ಚಿಟ್‌ಫಂಡ್ ಹೆಸರಿನಲ್ಲಿ ನಿವೃತ್ತ ಉದ್ಯೋಗಿಗಳು ಹಾಗೂ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಹೂಡಿಸಿಕೊಂಡು ಬಡ್ಡಿ ಹಾಗೂ ಅಸಲು ವಾಪಸ್ ಕೊಡದೆ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಲಕ್ಷ್ಮೀ ಅಲಿಯಾಸ್ ವಾಣಿ (36) ಬಂಧಿತೆ. ಈಕೆಯ ಪತಿ ಸುದರ್ಶನ್ ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಈ ಹಿಂದೆ ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ವಾಣಿ, ಮೊದಲಿಗೆ ಲಗ್ಗೆರೆಯಲ್ಲಿ ಚಿಟ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಲಾಭಾಂಶ ನೀಡುವುದಾಗಿ ಲಕ್ಷಾಂತರ ರೂ. ಠೇವಣಿ ಇರಿಸಿಕೊಂಡಿದ್ದರು. ಆರಂಭದಲ್ಲಿ ಹೂಡಿಕೆದಾರಿರಗೆ ನಿಯಮದಂತೆ ಬಡ್ಡಿ ನೀಡಿದ್ದಾರೆ. ಈ ಮಧ್ಯೆ ಚಿಟ್ ಫಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಪರಿಚಯವಾಗಿದ್ದು, ಆತನ ಜತೆ ಮೂರನೇ ಮದುವೆಯಾಗಿದ್ದು, ಆತನ ಸಲಹೆ ಮತ್ತು ಸೂಚನೆ ಮೇರೆಗೆ 2018ರಲ್ಲಿ ರಾಜಾಜಿನಗರದಲ್ಲಿ ವಾರಧಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರೈ ಎಂಬ ಕಂಪನಿ ತೆರೆದು, ಪತಿ ಸುದರ್ಶನ್‌ನನ್ನು ವ್ಯವಸ್ಥಾಪಕ ನಿರ್ದೇಶಕನ್ನಾಗಿ ಮಾಡಿದ್ದರು. ಇದೇ ವೇಳೆ ಕಂಪನಿಗೆ ಹತ್ತಾರು ಮಂದಿ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದು, ಅವರಿಗೆ ತಿಳಿದಂತೆ ಕಂಪನಿಯ ನಿರ್ದೇಶಕರನ್ನಾಗಿ ಮಾಡಿಕೊಂಡು ಹಣ ಸಂಗ್ರಹಿಸಿ ವಂಚಿಸಿದ್ದಾರೆ ಎಂಬುದು ಸದ್ಯದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬಸವೇಶ್ವರನಗರದ ನಿವೃತ್ತ ಅಧಿ ಕಾರಿ ಶಿವಲಿಂಗಯ್ಯ ಎಂಬವರು ವಾಣಿ ಸಲಹೆ ಮೇರೆಗೆ ಕೋ-ಆಪರೇಟಿವ್ ಸೊಸೈಟಿಯಲ್ಲಿ 10 ಲಕ್ಷಕ್ಕೂ ಅಧಿಕ ಹಣವನ್ನು 2019ರಲ್ಲಿ ಹೂಡಿಕೆ ಮಾಡಿದ್ದರು. ಕಳೆದ 10 ತಿಂಗಳಿಂದ ಬಡ್ಡಿ ಕೊಡು ತ್ತಿಲ್ಲ ಎಂದು 2021ರಲ್ಲಿ ರಾಜಾಜಿನಗರ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಷಯ ತಿಳಿದ ದಂಪತಿ ನಾಪತ್ತೆಯಾಗಿದ್ದರು.
ಅಂದು ಕೋಟಿ ಕೋಟಿ ವಹಿವಾಟು ಇಂದು ಛತ್ರದಲ್ಲಿ ಅಡುಗೆ ಕೆಲಸ! : ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದ ವಾಣಿಯ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದ ಕೆಲ ಗ್ರಾಹಕರು, ಕೊರೊನಾ ಸಂದರ್ಭದಲ್ಲಿ ಚಿಟ್ ಫಂಡ್‌ನಲ್ಲಿದ್ದ ಹಣ ಹಿಂಪಡೆದುಕೊಂಡಿದ್ದರು. ಇನ್ನು ಕೆಲವರು ಹಣ ಪಡೆದು ವಾಪಸ್ ಪಾವತಿಸಿಲ್ಲ. ಹೀಗಾಗಿ ಕೋಟ್ಯಂತರ ರೂ. ನಷ್ಟ ಹೊಂದಿದ್ದಾರೆ. ಮತ್ತೂಂದೆಡೆ ತನ್ನ ವಿರುದ್ಧ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಕೋಟಿಗಟ್ಟಲೇ ವ್ಯವಹಾರ ನಡೆಸುತ್ತಿದ್ದ ವಾಣಿ, ಜೀವನ ನಿರ್ವಹಣೆಗಾಗಿ ಕೆಂಗೇರಿ ಬಳಿಯ ಕಲ್ಯಾಣ ಮಂಟಪವೊಂದರಲ್ಲಿ ನಿತ್ಯ 800 ರೂ.ಗೆ ಅಡುಗೆ ಕೆಲಸ ಮಾಡಿಕೊಂಡಿದ್ದರು. ಈ ಮಾಹಿತಿ ಪಡೆದ ರಾಜಾಜಿನಗರ ಠಾಣೆ ಪೊಲೀಸರು ಒಂದು ವರ್ಷದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.