Advertisement

ಬಂಡವಾಳ ಆಕರ್ಷಣೆ : ಮಂಗಳೂರಿಗೂ ಆದ್ಯತೆ ಇರಲಿ

07:17 AM Feb 17, 2019 | |

ಮಂಗಳೂರು ಸ್ಮಾರ್ಟ್‌ ಸಿಟಿ ಆಗುತ್ತಿರುವ ಬೆನ್ನಲ್ಲೇ ಕೈಗಾರಿಕೆ ವಲಯ ಮತ್ತೂ ಅಭಿವೃದ್ಧಿಗೊಂಡರೆ ಉತ್ತಮ. ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಕೈಗಾರಿಕೆ ಕ್ಷೇತ್ರವಾಗಿ ಬೆಳೆದಿರುವುದರಿಂದ ಮತ್ತಷ್ಟು ಕೈಗಾರಿಕೆ ಕ್ಷೇತ್ರ ವಿಸ್ತಾರಗೊಳ್ಳುವ ಮೂಲಕ ಉದ್ಯೋಗ ಸೃಷ್ಟಿ ಹಾಗೂ ಬಂಡಾವಳ ಹೂಡಿಕೆಯು ಸಾಕಾರಗೊಂಡರೆ ಮಂಗಳೂರಿಗೆ ಗರಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

Advertisement

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ 2014-19ನೇ ಅವಧಿಯ ಕೈಗಾರಿಕಾ ನೀತಿ ಈ ವರ್ಷದ ಸೆಪ್ಟಂಬರ್‌ಗೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಕೈಗಾರಿಕಾ ನೀತಿ ರೂಪುಗೊಳ್ಳಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರು ಹೊಸ ಕೈಗಾರಿಕಾ ನೀತಿಯನ್ನು ರೂಪಿಸುವುದಾಗಿ ಬಜೆಟ್‌ ಮಂಡನೆ ವೇಳೆ ಘೋಷಿಸಿದ್ದಾರೆ.

ಹೊಸ ಕೈಗಾರಿಕೆ ನೀತಿಯಲ್ಲಿ ರಾಜ್ಯದ  ದ್ವಿತೀಯ ಹಂತ ಮತ್ತು ತೃತೀಯ ಹಂತದ ನಗರಗಳು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಬಂಡವಾಳ ಆಕರ್ಷಣೆ, ಹೂಡಿಕೆಗೆ ಉತ್ತೇಜನ, ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ, ತಂತ್ರಜ್ಞಾನ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಭರವಸೆಯಿತ್ತಿದ್ದಾರೆ. ಮುಂದಿನ ಜನವರಿಯಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರರ ಸಮಾವೇಶವನ್ನು ಆಯೋಜಿಸುವುದಾಗಿ ಘೋಷಿಸಲಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ( ಎಂಎಸ್‌ಎಂಇ) ತಮ್ಮ ಉತ್ಪನ್ನಗಳನ್ನು ಮಾರುಕಟ್ಟಗೆ ಪೂರೈಸುವಲ್ಲಿನ ಸಮಸ್ಯೆಗಳ ನಿವಾರಣೆಗೆ ಎಂಎಸ್‌ಎಂಇ- ಸಾರ್ಥಕ್‌ ಯೋಜನೆಯನ್ನು ಕೂಡಾ ಸರಕಾರ ಘೋಷಿಸಿದೆ. ಎಂಎಸ್‌ಎಂಇಗಳಿಗೆ ಅವಶ್ಯವಿರುವ ಗುಣಮಟ್ಟದ ಕಚ್ಚಾವಸ್ತುಗಳು, ಸಾಲಸೌಲಭ್ಯ, ದುಡಿಮೆ ಬಂಡವಾಳ, ರಾಜ್ಯಾದ್ಯಂತ ಗುರುತಿಸಬಹುದಾದ ಬ್ರ್ಯಾಂಡ್ ಗಳನ್ನು ಈ ಯೋಜನೆಯಲ್ಲಿ ಒದಗಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಮಂಗಳೂರಿಗೆ ಆದ್ಯತೆ
ಮಂಗಳೂರು ಹೂಡಿಕೆಗಳಿಗೆ ವಿಪುಲ ಅವಕಾಶಗಳಿರುವ ನಗರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಈ ಹಿಂದಿನ ಎರಡು ಅವಧಿಗಳ ಸರಕಾರಗಳ ಆಡಳಿತದಲ್ಲಿ ಹೂಡಿಕೆಗಳಿಗೆ ಗುರುತಿಸಲಾಗಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿ ಸ್ಥಾನ ಪಡೆದಿತ್ತು.  ಒಂದಷ್ಟು ಹೂಡಿಕೆ ಪ್ರಸ್ತಾವನೆಗಳು ಕೂಡಾ ರೂಪುಗೊಂಡಿದ್ದವು. ಹೂಡಿಕೆದಾರರನ್ನು ಆಕರ್ಷಿಸುವ  ನಿಟ್ಟಿನಲ್ಲಿ ಸಭೆಗಳು ಆಯೋಜನೆಗೊಂಡಿದ್ದವು. ಆದರೆ ಇವುಗಳು ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಲಿಲ್ಲ. ಇದೀಗ ನೂತನವಾಗಿ ರೂಪುಗೊಳ್ಳುವ ಕೈಗಾರಿಕಾ ನೀತಿಯಲ್ಲಿ ಮಂಗಳೂರು ನಗರ ಆದ್ಯತೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು, ಒತ್ತಡಗಳು ಈಗಿಂದಲೇ ಪ್ರಾರಂಭವಾಗಬೇಕಾಗಿದೆ.

ಎರಡನೇ ಐಟಿ ಹಬ್‌ ಆಗಲು ಅವಕಾಶ
ಮಂಗಳೂರನ್ನು ರಾಜ್ಯದ ಎರಡನೇ ಐಟಿ ಹಬ್‌ ಆಗಿ ಅಭಿವೃದ್ಧಿಪಡಿಸುವ ಭರವಸೆಗಳು ಹಲವಾರು ವರ್ಷಗಳಿಂದ ಕೇಳಿಬರುತ್ತಿವೆ. ಬೆಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶಗಳನ್ನು ಮಂಗಳೂರು ಹೊಂದಿದೆ. ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಮಾನವ ಸಂಪನ್ಮೂಲ ವೆಚ್ಚ ( ವೇತನ ಹಾಗೂ ಇತರ ಸವಲತ್ತುಗಳು) ಶೇ.30 ರಷ್ಟು ಕಡಿಮೆ. ಬೈಕಂಪಾಡಿ, ಯೆಯ್ನಾಡಿ, ಕಾರ್ನಾಡ್‌ ಸಹಿತ ಜಿಲ್ಲೆಯಲ್ಲಿ ಒಟ್ಟು 15 ಕೈಗಾರಿಕೆ ಪ್ರದೇಶಗಳಿವೆ.

Advertisement

ಪ್ಲಾಸ್ಟಿಕ್‌ ಪಾರ್ಕ್‌ ಪ್ರಸ್ತಾವನೆ
ಪ್ರವಾಸೋದ್ಯಮ ಉತ್ತಮ ಆದಾಯ ತರುವ ಸೇವಾ ವಲಯವಾಗಿ ಪ್ರಸ್ತುತ ಗುರುತಿಸಿಕೊಂಡಿದೆ. ಉದ್ಯೋಗ ಅವಕಾಶಗಳ ಸೃಷ್ಠಿ , ವಾಣಿಜ್ಯ ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಪ್ರಸ್ತಾವನೆಗೆ ಬಂದು ನಾಲ್ಕು ವರ್ಷಗಳು ಕಳೆದಿವೆ. ಕೇಂದ್ರ ಸರಕಾರ ಇದಕ್ಕೆ 1,000 ಕೋ.ರೂ.ನೀಡುವ ಭರವಸೆಯಿತ್ತಿದೆ. ಈ ಉದ್ಯಮ ಕಾರ್ಯಗತಗೊಂಡರೆ ಸುಮಾರು 1,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಪೂರಕ ಪ್ರಕ್ರಿಯೆಗಳು ಕೂಡಾ ಆರಂಭಗೊಂಡಿದ್ದವು. ಬೈಕಂಪಾಡಿ ,ಮುಡಿಪುವಿನಲ್ಲಿ ಜಾಗ ಸಮೀಕ್ಷೆ ಕೂಡಾ ನಡೆದಿದೆ.

ವಿಸ್ತರಿಸಲಿ ಇಂಡಸ್ಟ್ರಿಯಲ್‌ ಕಾರಿಡಾರ್‌ ಯೋಜನೆ
ಚೆನ್ನೈ – ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ ಯೋಜನೆಯನ್ನು ಮಂಗಳೂರಿಗೆ ವಿಸ್ತರಿಸಿದರೆ ಮಂಗಳೂರು ಮತ್ತು ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಪಶ್ಚಿಮ ಕರಾವಳಿ ಬಂದರಿನಿಂದ ಪೂರ್ವ ಕರಾವಳಿಯ ಬಂದರಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ ಆಗಿ ರೂಪುಗೊಳ್ಳಲಿದೆ. ಬೆಂಗಳೂರಿನಿಂದ ಮಂಗಳೂರುವರೆಗೆ ಕಾರಿಡಾರ್‌ಹಾದಿಯ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಸಾಧ್ಯವಾಗಲಿದೆ ಮತ್ತು ಯೋಜನೆ ಗರಿಷ್ಠ ಲಾಭವನ್ನು ಕರ್ನಾಟಕ ಕೂಡಾ ಪಡೆಯಲು ಸಾಧ್ಯವಾಗುತ್ತದೆ.

ಹೂಡಿಕೆ ಪ್ರಯತ್ನಗಳು
ಜಿಲ್ಲೆಗೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹೂಡಿಕೆ, ಉದ್ಯಮ ಹಾಗೂ ಐಟಿ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದಿದೆ. ಮಂಗಳೂರಿನಲ್ಲೂ ಐಟಿ ಕ್ಷೇತ್ರದಲ್ಲಿ ಹೂಡಿಕೆ ಬಗ್ಗೆ ಸಮಾವೇಶಗಳನ್ನು ಆಯೋಜಿಸಲು ಹಿಂದಿನ ಸರಕಾರದ ಅವಧಿಯಲ್ಲಿ ಉದ್ದೇಶಿಸಲಾಗಿತ್ತು. ಕೊಲ್ಲಿ ರಾಷ್ಟ್ರಗಳಲ್ಲೂ ಮಂಗಳೂರಿನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಸಭೆ ಆಯೋಜಿಸಿ ಚರ್ಚೆಗಳು ನಡೆದ್ದವು. ಈ ಪ್ರಯತ್ನಗಳು ನಿಂತ ನೀರಾಗದೆ ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಇವುಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಹೆಚ್ಚಿನ ಒತ್ತಾಸೆ ದೊರಕಿದರೆ ಮಂಗಳೂರು ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಔದ್ಯೋಗಿಕವಾಗಿ ತೆರೆದುಕೊಳ್ಳಲು ಸಾಧ್ಯವಿದೆ.

ಅವಕಾಶಗಳು
ಐಟಿ, ಆಹಾರ ಸಂಸ್ಕರಣೆ ಹಾಗೂ ವಸ್ತ್ರೋದ್ಯಮ ,ಪ್ರವಾಸೋದ್ಯಮಗಳಿಗೆ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ನೆಲೆಯಲ್ಲಿ ಜಿಲ್ಲೆಗೆ ಪ್ಲಾಸ್ಟಿಕ್‌ ಪಾರ್ಕ್‌, ಜವುಳಿ ( ಆ್ಯಪೆರಾಲ್‌) ಪಾರ್ಕ್‌, ಆಹಾರ ಸಂಸ್ಕರಣಾ ಉದ್ಯಮ ಪಾರ್ಕ್‌, ಐಟಿ ಪಾರ್ಕ್‌, ಕೊಕೊನಟ್‌ ಪಾರ್ಕ್‌, ಔಷಧ ತಯಾರಿ ಪಾರ್ಕ್‌, ಆಟೋಮೊಬೈಲ್‌ ಪಾರ್ಕ್‌ ಮುಂತಾದ ಯೋಜನೆಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಈ ಎಲ್ಲ ಯೋಜನೆಗಳು ಪ್ರಸ್ತಾವನೆಯಲ್ಲೇ ಉಳಿದುಕೊಂಡಿವೆ ಹೊರತು ಅನುಷ್ಠಾನಕ್ಕೆ ಬಂದಿಲ್ಲ. 

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next