ಕಲಬುರಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ನಾಲ್ವರು ಮುಖಂಡರನ್ನು ಹತ್ಯೆ ಮಾಡಲು ಪೊಲೀಸರೇ ಸಂಚು ರೂಪಿಸಿದ್ದರು ಎನ್ನುವ ಆಘಾತಕಾರಿ ಅಂಶವನ್ನು ಬಂಧಿತ ಆರೋಪಿ ಹೊರಹಾಕಿದ್ದು, ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಒತ್ತಾಯಿಸಿದರು.
ಇದನ್ನೂ ಓದಿ:ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ “AAP” ಅಖಾಡಕ್ಕೆ; 160 ಅಭ್ಯರ್ಥಿ ಹೆಸರು ಘೋಷಣೆ
ನಗರದ ಪತ್ರಿಕಾ ಭವನದಲ್ಲಿ ರವಿವಾರ ಎಂಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ, ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಕುರಿತಂತೆ “ಬಿಜೆಪಿ ಸರ್ಕಾರಗಳ ಕಾಯ್ದೆ ಮೂರು, ಸುಳ್ಳು ನೂರಾರು’ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದೆಹಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಬಂಧಿತ ವ್ಯಕ್ತಿ ಪೊಲೀಸರೇ ರೈತ ಮುಖಂಡರನ್ನು ಹತ್ಯೆ ಮಾಡಲು ಪೊಲೀಸರು ಸಂಚು ರೂಪಿಸಿದ್ದಾಗಿ ಹೇಳಿದ್ದಾನೆ.
ಇದು ತೀವ್ರ ಆಘಾತಕಾರಿ ಮತ್ತು ಆತಂಕಕಾರಿ ಸಂಗತಿಯಾಗಿದೆ ಎಂದರು. ರಕ್ಷಣೆ ನೀಡಬೇಕಾದ ಪೊಲೀಸರೇ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಅಲ್ಲದೇ, ಬಿಜೆಪಿ ಸರ್ಕಾರವೇ ಮುಂದೆ ಭಯೋತ್ಪಾದನೆ ನಡೆಸುವಂತೆ ಕಾಣುತ್ತಿದೆ. ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವುದರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಸಿಎಂ ಕ್ಷಮೆ ಕೇಳಲಿ: ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾರಣಕ್ಕೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು, ಖಂಡನೀಯವಾಗಿದೆ. ಪೊಲೀಸರ ಕ್ರಮದ ಬಗ್ಗೆ ಮಂಡ್ಯ ಎಸ್‌ಪಿ ವಿಷಾದ ವ್ಯಕ್ತಪಡಿಸಿದರೆ ಸಾಲದು, ಹಂಪನಾ ಅವರ ಬಳಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕ್ಷಮೆಯಾಚಿಸಬೇಕೆಂದು ಬಿ.ಆರ್. ಪಾಟೀಲ ಆಗ್ರಹಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಲು ಸರ್ಕಾರ ಹೊರಟಿದೆ. ಸಾಹಿತಿಯೊಬ್ಬರು ವ್ಯವಸ್ಥೆ ಟೀಕಿಸಿದರೆ ತಪ್ಪೇನಿಲ್ಲ. ಅಲ್ಲದೇ, ಹಂಪನಾ ತಮ್ಮ ಹೇಳಿಕೆಗೆ ಬದ್ಧ ಎಂದು ಹೇಳಿದ್ದು ಶ್ಲಾಘನೀಯವಾಗಿದೆ. ಅವರು ತಮ್ಮ ವಾಕ್ ಸ್ವಾತಂತ್ರ್ಯವನ್ನು ಮುಂದುವರೆಸಬೇಕು. ಇದಕ್ಕೆ ನಮ್ಮ ನೈತಿಕ ಬೆಂಬಲವಿದೆ ಎಂದರು.
ರೈತ ಸಂಘಟನೆಗಳ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಶೌಕತ್‌ಅಲಿ ಆಲೂರ, ಶರಣು ಭೂಸನೂರ, ಎಸ್.ಆರ್.ಕೊಲ್ಲೂರ, ಉಮಾಪತಿ ಪಾಟೀಲ, ರಾಜಶೇಖರ ಯಂಕಂಚಿ, ಎಸ್.ಎಂ.ಶರ್ಮಾ, ಭೀಮಾಶಂಕರ ಮಾಡಿಯಾಳ, ಶರಣಗೌಡ ಪಾಟೀಲ, ರಾಜಶೇಖರ ಕೊರವಿ ಇದ್ದರು.