ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಉದ್ಯಮ ವೇಗೋತ್ಕರ್ಷ ನಿಟ್ಟಿನಲ್ಲಿ ರಾಜ್ಯ ಸರಕಾರ ಎರಡನೇ ಸ್ತರದ ನಗರದಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ಮಹತ್ವದ ಹೆಜ್ಜೆ ಇರಿಸಿದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ(ಹೂ-ಬಳ್ಳಿ) ದೇಶದ ವಿವಿಧ ಕಡೆಯ ಉದ್ಯಮಿಗಳು, ವಿದೇಶಿ ಕಂಪೆನಿಗಳ ದೇಶದ ಪ್ರತಿನಿಧಿಗಳ ಸ್ವಾಗತಕ್ಕೆ ಸಜ್ಜಾಗಿದೆ. ಉದ್ಯಮ ಹೂಡಿಕೆಯ ಸಿಹಿ ಸುದ್ದಿಗೆ ಉತ್ತರ ಕರ್ನಾಟಕ ಕಾತರವಾಗಿದೆ.
ಹೂಡಿಕೆದಾರರ ಮೇಳ ಬೆಂಗಳೂರಿಗೆ ಸೀಮಿತ ಎನ್ನುವಂತಾಗಿತ್ತು. ಇದೀಗ ದ್ವಿತೀಯ ಸ್ತರದ ನಗರಗಳ ಕಡೆ ಹೆಜ್ಜೆ ಹಾಕುತ್ತಿದ್ದು, ಸಹಜವಾಗಿಯೇ 2-3ನೇ ಸ್ತರದ ನಗರಗಳನ್ನು ಪುಳಕಿತವಾಗಿಸುತ್ತಿದೆ. ಹುಬ್ಬಳ್ಳಿಯಲ್ಲಿ ಫೆ. 14ರಂದು ನಡೆಯುವ ಹೂಡಿಕೆದಾರ ಮೇಳ ಉದ್ಯಮ ಬೆಳವಣಿಗೆಯ ನಿರೀಕ್ಷೆಗಳು ಗರಿಗೆದರುವಂತಾಗಿದೆ.
ಮೇಳವನ್ನು ಯಶಸ್ವಿಯಾಗಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಮುಂಬೈ, ಹೈದರಾಬಾದ್, ಗುವಾಹಟಿ ಇನ್ನಿತರ ಕಡೆಗಳಲ್ಲಿ ರೋಡ್ ಶೋ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಮೂಲಕ ಮೇಳಕ್ಕೆ ಉದ್ಯಮಿಗಳನ್ನು ಆಕರ್ಷಿಸುವ ಯತ್ನ ಕೈಗೊಂಡಿದ್ದಾರೆ.
ಉದ್ಯಮ ದಿಗ್ಗಜ ಗೋದ್ರೇಜ್, ಅದಾನಿ, ಟಾಟಾ, ಹಿಂದೂಜಾ, ಎಲ್ ಆ್ಯಂಡ್ ಟಿ, ಚೀನಾದ ಕಂಪೆನಿಯೊಂದರ ದೇಶದ ನಿಯೋಗ, ಜವಳಿ, ವಾಲ್ಸ್, ಸೌರಶಕ್ತಿ, ಆಹಾರ ಸಂಸ್ಕರಣೆ, ಎಫ್ಎಂಜಿಸಿ ಉದ್ಯಮ ವಲಯ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಸುಮಾರು 700ಕ್ಕೂ ಹೆಚ್ಚು ಉದ್ಯಮಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಕೃಷಿ ಉಳಿಯಬೇಕು-ಉದ್ಯಮವೂ ಬೆಳೆಯಬೇಕು: ಉತ್ತರ ಕರ್ನಾಟಕ ಅಭಿವೃದ್ಧಿ, ಮೂಲಸೌಕರ್ಯಗಳ ದೃಷ್ಟಿಯಿಂದ ಹಿಂದುಳಿದಿದೆ ಎಂಬುದು ಬಿಟ್ಟರೆ, ಉದ್ಯಮಕ್ಕೆ ಬೇಕಾದ ಸಂಪನ್ಮೂಲ, ಕಚ್ಚಾ ಸಾಮಗ್ರಿ, ಉತ್ತಮ ವಾತಾವರಣ ದೃಷ್ಟಿಯಿಂದ ಮಹತ್ವದ ಸ್ಥಾನ ಹೊಂದಿದೆ. ಉಕ ಉತ್ತಮ ಖನಿಜ ಸಂಪತ್ತು ಹೊಂದಿದೆ. ಅಕ್ಕಿ, ತೊಗರಿಬೇಳೆ, ಮೆಕ್ಕೆಜೋಳ, ತರಕಾರಿ, ದಾಳಿಂಬೆ, ದ್ರಾಕ್ಷಿ, ಪೇರಲ ಹೀಗೆ ವೈವಿಧ್ಯಮಯ ಕೃಷಿ-ತೋಟಗಾರಿಕೆ ಉತ್ಪನ್ನಗಳ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿದೆ. ಕೃಷಿಯೂ ಉಳಿಯಬೇಕು, ಉದ್ಯಮವೂ ಬೆಳೆಯಬೇಕು ಇಂತಹ ಸಮತೋಲಿತ ನಿಯಮದಡಿ ಸಾಗಬೇಕಾಗಿದೆ. ಉಕದಲ್ಲಿ ಕೃಷಿ-ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಉದ್ಯಮಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ.
ಈ ಭಾಗದಲ್ಲಿನ ಆಹಾರ ಧಾನ್ಯಗಳು, ಹಣ್ಣುಗಳು ಇನ್ನಿತರ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾದರೆ ರೈತರಿಗೂ ಉತ್ತಮ ದರ ದೊರೆಯಲಿದೆ. ಕೃಷಿಯಿಂದ ವಿಮುಖರಾಗಿ ನಗರಕ್ಕೆ ವಲಸೆ ಹೋಗಿರುವ ಯುವ ಸಮೂಹವನ್ನು ಕೃಷಿ-ತೋಟಗಾರಿಕೆಗೆ ಆಕರ್ಷಿತಗೊಳಿಸಬಹುದಾಗಿದೆ. ಉತ್ತರ ಕರ್ನಾಟಕವೆಂದರೆ ಸಂಪರ್ಕ ಕೊರತೆ ತಾಣವೆಂದೇ ಮೂದಲಿಕೆಗೆ ಒಳಗಾಗಿತ್ತು. ಇದಕ್ಕಾಗಿಯೇ ಉದ್ಯಮ ವಲಯ ಹಿಂದೇಟು ಹಾಕುತ್ತಿತ್ತು. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬೀದರ, ಬಳ್ಳಾರಿ ಇನ್ನಿತರ ಕಡೆಗಳಿಗೆ ವಿಮಾನಯಾನ ಸಂಪರ್ಕ ಆರಂಭವಾಗಿದೆ. ರೈಲ್ವೆ ಸಂಪರ್ಕದಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಉದ್ಯಮಕ್ಕೆ ಇದುಪೂರಕವಾಗಿದೆ.
ಮತ್ತೂಂದು ಜಾತ್ರೆ ಆಗದಿರಲಿ: ಹೂಡಿಕೆದಾರರ ಮೇಳದ ಸಂಭ್ರಮದ ಬೆನ್ನಹಿಂದೆಯೇ ಒಡಂಬಡಿಕೆಗಳ ಅನುಷ್ಠಾನಕ್ಕೆ ಸವಾಲು ಎದುರಿಸಲು ಸಜ್ಜಾಗಬೇಕಾಗಿದೆ. ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿ, ಉದ್ಯಮ ಪರವಾನಗಿ, ಸೌಲಭ್ಯಗಳ ನೀಡಿಕೆ ಇನ್ನಿತರ ವಿಚಾರದಲ್ಲಿ ನಿಧಾನದ್ರೋಹ ತಡೆಯುವಿಕೆಗೆ ಕಟ್ಟುನಿಟ್ಟಿನ ಕ್ರಮ, ಉದ್ಯಮಾಕರ್ಷಣೆ ಯೋಜನೆಗಳಿಗೆ ಒತ್ತು ನೀಡಬೇಕಾಗಿದೆ. ಕೈಗೊಂಡ ಒಡಂಬಡಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕೆ ವಿನಃ ಇದು ಮತ್ತೂಂದು ಜಾತ್ರೆಯಾಗಬಾರದು ಎಂಬುದು ಅನೇಕರ ಅನಿಸಿಕೆ.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಮೇಳ, ಇದಕ್ಕೆ ಪೂರ್ವಭಾವಿಯಾಗಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಮೇಳಗಳಲ್ಲಿ ಅನೇಕ ಉದ್ಯಮಿಗಳು ಭಾಗಿಯಾಗಿದ್ದರು. ಹೂಡಿಕೆ ಭರವಸೆ ನೀಡಿ ಒಡಂಬಡಿಕೆಗೆ ಸಹಿ ಹಾಕಿದ್ದರು. ಆದರೆ, ಫಲಿತಾಂಶ ಏನೆಂದು ನೋಡಿದಾಗ ಉತ್ತರದ ಮಟ್ಟಿಗೆ ನಿರಾಸೆಯೇ ಕಾಣುತ್ತಿದೆ.
ಬೆಂಗಳೂರಿನಲ್ಲಿ ನಡೆದ ಜಿಮ್‌ನಲ್ಲಿ ಅನೇಕ ಕಂಪೆನಿಗಳು ಉತ್ತರಮುಖೀಯಾಗುವ ಭರವಸೆ ನೀಡಿದ್ದವು. ಜುವಾರಿ ರಸಗೊಬ್ಬರ ಮತ್ತು ಕೆಮಿಕಲ್ಸ್ ಕಂಪೆನಿ ಬೆಳಗಾವಿಯಲ್ಲಿ ವಾರ್ಷಿಕ 11.55 ಮಟ್ರಿಕ್ ಟನ್ ಸಾಮರ್ಥ್ಯದ ಯೂರಿಯಾ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಭರವಸೆ ನೀಡಿತ್ತು. ಇದಕ್ಕಾಗಿ ಅಂದಾಜು 4,565 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಅದೇ ರೀತಿ ಹಾವೇರಿಯಲ್ಲಿ ಟಾಟಾ ಮೆಟಾಲಿಕ್ ಸ್ಟೀಲ್ ಪ್ಲಾಂಟ್ ಸ್ಥಾಪನೆ ಮಾಡುವುದಾಗಿ ತಿಳಿಸಿತ್ತು. ಹೀಗೆ ಹಲವಾರು ಉದ್ಯಮಗಳು ಭರವಸೆ ನೀಡಿದ್ದವಾದರೂ ನಿರೀಕ್ಷಿತ ರೀತಿಯ ಯಶಸ್ಸು ಕಂಡಿಲ್ಲ. ಉದ್ಯಮ ಸ್ಥಾಪನೆ ಒಡಂಬಡಿಕೆ ಅನುಷ್ಠಾನಕ್ಕೆ ಮನವೊಲಿಕೆ, ಉದ್ಯಮ ಸ್ನೇಹಿ ವಾತಾವರಣ, ಅಗತ್ಯ ಮೂಲಸೌಕರ್ಯಗಳ ಲಭ್ಯತೆಯ ಮನವರಿಕೆಗೆ ಒತ್ತು ನೀಡಬೇಕಾಗಿದೆ.
-ಅಮರೇಗೌಡ ಗೋನವಾರ