Advertisement

ತುಳು ಸಂಸ್ಕೃತಿ ಪರಿಚಯ

11:08 AM Dec 23, 2018 | |

ಬೆಳ್ತಂಗಡಿ : ಗ್ರಾಮೀಣ ಪ್ರದೇಶವಾದರೂ ಭಾಷಾಭಿಮಾನಕ್ಕೆ ಕೊರತೆ ಇರಲಿಲ್ಲ. ತುಳುವರೆಲ್ಲ ಸೇರಿ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಕೊಯ್ಯೂರು ಗ್ರಾಮದ ಬಜಿಲ ದಲ್ಲಿ ಆಯೋಜನೆಗೊಂಡಿದ್ದ ತಾ| ತುಳು ಸಾಹಿತ್ಯ ಸಮ್ಮೇಳನ-ಬಜಿಲಡ್‌ ಬೊಳ್ಳಿ ಪರ್ಬೊ ಅರ್ಥಪೂರ್ಣ ಕಾರ್ಯಕ್ರಮವಾಗಿ ಯಶಸ್ವಿಗೊಂಡಿತು.

Advertisement

ಕೊಯ್ಯೂರು ಗ್ರಾಮದ ಬಜಿಲ ಹರ್ಷ ಗೆಳೆಯರ ಬಳಗ ಹಾಗೂ ಸ್ನೇಹ ಯುವತಿ ಮಂಡಲವು ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತುಳು ಭಾಷಾಭಿಮಾನಿಗಳು ಭಾಗವಹಿಸಿದ್ದರು. ತುಳುವಿನ ಕುರಿತು ವಿಚಾರಗೋಷ್ಠಿ, ಕವಿಗೋಷ್ಠಿ, ವಸ್ತು ಪ್ರದರ್ಶನ, ಜಾನಪದ ಕುಣಿತಗಳು ವಿಶೇಷ ಆಕರ್ಷಣೆ ಪಡೆದಿದ್ದವು.

ಸಮ್ಮೇಳನದ ಕ್ರೀಡಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಮಹಿಳಾ ಸ್ವಯಂಸೇವಕರು ನೀರು, ಮಜ್ಜಿಗೆ ವಿತರಿಸಿ ಜನರನ್ನು ಸ್ವಾಗತಿಸುತ್ತಿದ್ದರು. ಬಜಿಲ ತುಳು ಚಾವಡಿ ಎಂಬ ಆಕರ್ಷಕ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದ್ದು, ಬಳಿಕ ಸಭಾಂಗಣಕ್ಕೆ ಪ್ರವೇಶವಿತ್ತು. ಸಭಾಂಗಣದ ಸುತ್ತಲೂ ಹಲವು ಮಳಿಗೆಗಳ ಮೂಲಕ ತುಳುನಾಡಿನ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನವಿತ್ತು.

ಕಂಬಳದ ಕೋಣಗಳ ಪ್ರದರ್ಶನ, ಕೋಳಿ ಅಂಕದ ಹುಂಜಗಳ ಪ್ರದರ್ಶನ, ಕರ್ಬದ ಕೊಟ್ಯ ಎಂಬ ಕತ್ತಿಗಳನ್ನು ತಯಾರಿಸುವ ಸ್ಥಳದ ಪರಿಚಯ, ಕತ್ತಲಕಾನ ಧಾರ್ಮಿಕ ನಂಬಿಕೆಯ ಪ್ರದೇಶ ಪ್ರದರ್ಶನಗಳು ಗಮನ ಸೆಳೆದವು. ನೂರಾರು ಬಗೆಯ ತುಳುವರು ಉಪಯೋಗಿಸುತ್ತಿದ್ದ ಪ್ರಾಚೀನ ವಸ್ತುಗಳು ವಿಶೇಷವಾಗಿತ್ತು. 

ಬುಟ್ಟಿ ಹೆಣೆದರು
ಮೈದಾನದ ಒಂದು ಬದಿಯಲ್ಲಿ ಉಜಿರೆಯ ಬಾಬು ಅವರು ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅವರನ್ನು ಮಾತನಾಡಿಸಿದಾಗ, ತಾನು ಕಳೆದ 30 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದು, ಪ್ರಸ್ತುತ ಬುಟ್ಟಿ ಹಾಗೂ ಬಟ್ಟಿಗಳನ್ನು ಮಾಡುತ್ತಿದ್ದೇನೆ. ಇದೇ ತನ್ನ ಜೀವನಾಧಾರ ಕಸುಬಾಗಿದೆ. ದಿನಕ್ಕೆ ಒಂದೆರಡು ಬುಟ್ಟಿ ಮಾಡುತ್ತಿದ್ದು, ಉತ್ತಮ ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ.

Advertisement

ಅಡುಗೆ ಮನೆಯ ಮೆನು
ಸಮ್ಮೇಳನದ ಪಾಕಶಾಲೆಯಲ್ಲಿ ಸ್ಥಳೀಯ ಸ್ವಯಂಸೇವಕರೇ ಹೆಚ್ಚಾಗಿ ದುಡಿಯುತ್ತಿದ್ದು, ಒಟ್ಟು ಸುಮಾರು 5 ಸಾವಿರ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಇಡ್ಲಿ ಸಂಬಾರ್‌, ಚಾಹಾ, ಕಾಫಿ, ಮಧ್ಯಾಹ್ನ ಊಟಕ್ಕೆ ಹುಣಸೆ ಹುಳಿ ಉಪ್ಪಿನಕಾಯಿ, ತೊಂಡೆ ಪಲ್ಯ, ಅಂಬಟೆ ಗಸಿ, ಸೌತೆ ಬದನೆ ಸಂಬಾರ್‌, ರಸಂ, ಅನ್ನ, ಹೆಸರು ಬೇಳೆ ಪಾಯಸ, ಲಾಡು, ಮಜ್ಜಿಗೆ ಇತ್ತು. ಸಂಜೆ ಚಾಹಾ, ಕಾಫಿ, ಜತೆಗೆ ರಾತ್ರಿಯೂ ಊಟದ ವ್ಯವಸ್ಥೆ ಇತ್ತು. ಜತೆಗೆ ಮಜ್ಜಿಗೆ, ನೀರು, ಪಾನಕದ ವಿತರಣೆಯೂ ನಡೆದಿತ್ತು.

ಆಕರ್ಷಕ ವೇದಿಕೆ
ಸಮ್ಮೇಳನದ ಮುಖ್ಯ ವೇದಿಕೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿತ್ತು. ಬಿದಿರಿನ ಸಲಾಕೆಯಿಂದ ಆಕರ್ಷಕ ವಿನ್ಯಾಸ, ಅಕ್ಕಿಯ ಮುಡಿಗಳು, ಕಲಸೆ, ದೀಪಗಳನ್ನು ಉರಿಸಲಾಗಿತ್ತು. ಕುಂಭ, ಎಳನೀರನ್ನು ಆಕರ್ಷಕವಾಗಿ ಜೋಡಿಸಲಾಗಿತ್ತು. ಬಣವೆಯೂ ಗಮನ ಸೆಳೆಯಿತು. ಗದ್ದೆ, ಅಡಿಕೆ ರಾಶಿ, ತೆಂಗಿನ ರಾಶಿಗಳು ಕೂಡ ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next