ಕುಂಬಳೆ: ವಿಶ್ವ ತೆಂಗು ಬೆಳೆಗಾರರ ದಿನದಂಗವಾಗಿ ಶನಿವಾರ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ(ಸಿಪಿಸಿಆರ್‌ಐ)ಯಲ್ಲಿ ನಡೆದ ತೆಂಗು ಬೆಳೆಗಾರರ ಸಮಾವೇಶವನ್ನು ಕೇಂದ್ರ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.
ಬಳಿಕ ಮಾತನಾಡಿ, ನಮ್ಮ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆಯ ಮಾರುಕಟ್ಟೆಗಳಿಗೆ, ಗ್ರಾಹಕರಿಗೆ ಕಳುಹಿಸುವ ಮೂಲಕ ರಫ್ತು ವ್ಯವಹಾರ ದ್ವಿಗುಣಗೊಳಿಸುವಂತೆ ಅವರು ಉದ್ಯಮಿಗಳಿಗೆ ಸಲಹೆ ನೀಡಿದರು. ನಕಲಿ ಬೀಜಗಳ ಹಾವಳಿ ಕುರಿತು ರೈತರು ಎಚ್ಚರ ವಹಿಸುವಂತೆ ತಿಳಿಸಿದ ಅವರು ಗುಣಮಟ್ಟದ ಭರವಸೆಯ ಕ್ಯುಆರ್ ಕೋಡ್ ಹೊಂದಿರುವ ಸಸಿಗಳನ್ನು ಒದಗಿಸುತ್ತಿರುವ ಐಸಿಎಆರ್-ಸಿಪಿಸಿಆರ್‌ಐ ಉಪಕ್ರಮವನ್ನು ಶ್ಲಾ ಸಿದರು.
ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತು ಆಧಾರಿತ ವ್ಯಾಪಾರವನ್ನು ಸುಧಾರಿಸಲು ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ, ಕೃಷಿ ಆವಿಷ್ಕಾರ ನಿಧಿ ಮೊದಲಾದ ಕೇಂದ್ರ ಸರಕಾರದ ಯೋಜನೆಗಳನ್ನು ಬಳಸಿಕೊಳ್ಳುವಂತೆ ಸಚಿವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎ. ನೆಲ್ಲಿಕ್ಕುನ್ನು ಮಾತನಾಡಿ, ಪ್ರಸ್ತುತ ಕೃಷಿಕರು ಎದುರಿಸುತ್ತಿರುವ ಬಿಕ್ಕಟ್ಟನ್ನು ವಿವರಿಸಿದರು. ಯುವಕರು ಕೃಷಿಯಲ್ಲಿ ತೊಡಗಲು ಉತ್ತೇಜಿಸುವ ಯೋಜನೆಗಳನ್ನು ಇಲಾಖೆಗಳು ರೂಪಿಸಬೇಕು ಎಂದರು.
ಕೃಷಿ ತಜ್ಞರಾದ ಡಾ| ಬಿ ಹನುಮಂತ ಗೌಡ, ಡಾ| ವಿ.ಬಿ. ಪಾಟೀಲ್, ರೇಣು ಕುಮಾರ್ ಬಿ.ಎಚ್., ಪಿ.ಆರ್. ಮುರಳೀಧರನ್, ದೀಪ್ತಿ ನಾಯರ್ ಉಪಸ್ಥಿತರಿದ್ದರು. ಸಂಶೋಧನ ಕೇಂದ್ರದ ನಿರ್ದೇಶಕ ಕೆ.ಬಿ. ಹೆಬ್ಟಾರ್ ಸ್ವಾಗತಿಸಿದರು.