ಮಹಾನಗರ: ಹಲವಾರು ದಶಕಗಳ ಹಿಂದೆ ಮುಚ್ಚಿದ್ದ ಶತಮಾನಗಳ ಇತಿಹಾಸವಿರುವ ಬಾವಿಯೊಂದು ದಿಢೀರ್ ಆಗಿ ಕಾಣಿಸಿಕೊಂಡು ನಗರದ ಬೋಳಾರ ಲೀ ವೆಲ್‌ನ ಅಪರೂಪದ ಘಟನೆ ಇದೀಗ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬಾವಿಯ ಬಗ್ಗೆ ದಾಖಲೆ ಅಥವಾ ಐತಿಹ್ಯಗಳು ಇವೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಪಾಲಿಕೆಯು ಪುರಾತತ್ವ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಿದೆ. ಅವರ ವರದಿ, ಸೂಚನೆಯ ಬಳಿಕ, ಬಾಯೆ¤ರೆದ ಬಾವಿಯನ್ನು ಮುಂದೆ ಏನು ಮಾಡಬೇಕು? ಎಂಬುದನ್ನು ತೀರ್ಮಾನಿಸಲಾಗುತ್ತದೆ.
ಈ ಮಧ್ಯೆ, ಗುರುವಾರ ಸಂಜೆ ರಸ್ತೆ ಕಾಂಕ್ರೀಟ್ ಕಾಮಗಾರಿ ಸಂದರ್ಭದಲ್ಲಿ ದಿಢೀರಾಗಿ ಬಾವಿ ಪ್ರತ್ಯಕ್ಷವಾದ ಸುದ್ದಿ ತಿಳಿದು ಸ್ಥಳೀಯರು ಲೀ ವೆಲ್ ಕಡೆಗೆ ಬಂದು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಬಾವಿ ಇತ್ತು ಎನ್ನಲಾದ ಜಾಗದ ಸುತ್ತ ಇದೀಗ ಪೊಲೀಸ್ ಇಲಾಖೆಯು ಭದ್ರತೆಯ ದೃಷ್ಟಿಯಿಂದ ಬ್ಯಾರೀಕೇಡ್ ಹಾಕಿದೆ. ಆದರೆ ಪಕ್ಕದಲ್ಲಿಯೇ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಬಸ್ ನಿಲ್ದಾಣವೂ ಇದೆ. ಸುತ್ತಲೂ ಅಂಗಡಿ-ಕಟ್ಟಡಗಳಿವೆ.
ಬಾವಿಯಿರುವ ಜಾಗದ ಒಂದು ಪಾರ್ಶ್ವದ ಕೊಂಚ ಭೂಮಿ ಗುರುವಾರ ಒಳಕ್ಕೆ ಕುಸಿದಿದ್ದು, ಶುಕ್ರವಾರ ಯಥಾಸ್ಥಿತಿಯಲ್ಲಿದೆ.
“ಬ್ರಿಟಿಷರ ಆಡಳಿತ ಸಮಯದಲ್ಲಿ ಬೋಳಾರ ಮಾರಿಗುಡಿ ದೇವಸ್ಥಾನದ ಸಮೀಪದ ಜಂಕ್ಷನ್‌ನಲ್ಲಿ ಬಾವಿ ನಿರ್ಮಿಸಲಾಗಿತ್ತು. ಬ್ರಿಟಿಷ್ ಅಧಿಕಾರಿ ಲೀ ಎಂಬವರು ಇದನ್ನು ನಿರ್ಮಿಸಿದ್ದರು ಎನ್ನಲಾಗುತ್ತಿದೆ. ಇದಕ್ಕಾಗಿ ಈ ಪ್ರದೇಶಕ್ಕೆ ಲೀ ವೆಲ್ ಎಂಬ ಹೆಸರು ಬಂದಿತ್ತು. ಆದರೆ ಹಲವು ವರ್ಷಗಳ ಅನಂತರ ಈ ಬಾವಿಯನ್ನು ಕಸ, ಮಣ್ಣು ಹಾಕಿ ಮುಚ್ಚಲಾಗಿತ್ತು. ಬಳಿಕ ಅಲ್ಲಿ ಡಾಮರು ರಸ್ತೆ ನಿರ್ಮಿಸಲಾಗಿತ್ತು. ಪಕ್ಕದಲ್ಲಿ ಬಸ್‌ನಿಲ್ದಾಣವನ್ನು ಹಲವು ವರ್ಷದ ಹಿಂದೆ ಮಂಗಳೂರು ಪಾಲಿಕೆ ನಿರ್ಮಿಸಿತ್ತು’ ಎಂದು ಸ್ಥಳೀಯ ಅಂಗಡಿಯವರು “ಸುದಿನ’ ಜತೆಗೆ ಮಾತನಾಡಿದರು.
“ಲೀ ವೆಲ್‌ನಲ್ಲಿ ಬಾವಿ ಇದ್ದದ್ದನ್ನು ನನ್ನ ತಂದೆ ನೋಡಿದ್ದು, ಆಗ ಬಾವಿಯ ಮೇಲೆ ಕಟ್ಟೆ ಕಟ್ಟಿದ್ದರಂತೆ. ಆಗ ವಾಹನ ಸಂಚಾರ ಕೂಡ ಇಲ್ಲಿಗೆ ಕಡಿಮೆ ಇತ್ತು. ಕೆಲವರು ಇದೇ ಬಾವಿಗೆ ಹಾರಿ ಆತ್ಮಹತ್ಯೆ ಕೂಡ ಮಾಡಿದ್ದರು ಎಂದು ನನ್ನ ತಂದೆ ಹೇಳಿದ ನೆನಪು’ ಎನ್ನುತ್ತಾರೆ ಸ್ಥಳೀಯ ಹಿರಿಯರೊಬ್ಬರು.
ಪುರಾತತ್ವ ಇಲಾಖೆಗೆ ಪತ್ರ
ಬೋಳಾರದ ಲೀ ವೆಲ್‌ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡುತ್ತಿದ್ದ ಸಂದರ್ಭ ಹಳೆಯ ಕಾಲದ ಬಾವಿ ದಿಢೀರ್ ಆಗಿ ಕಾಣಿಸಿಕೊಂಡಿದೆ. ಶತಮಾನದ ಹಿಂದೆ ಇಲ್ಲಿ ಬಾವಿ ಇದ್ದ ಬಗ್ಗೆ ಹಾಗೂ ಇದೇ ಬಾವಿಯ ಮೂಲಕವೇ ಆ ಊರಿಗೆ “ಲೀ ವೆಲ್’ ಎಂಬ ಹೆಸರು ಬಂದ ಬಗ್ಗೆ ಸ್ಥಳೀಯರು ತಿಳಿಸುತ್ತಿರುವ ಹಿನ್ನೆಲೆಯಲ್ಲಿ ಇದರ ಪೂರ್ಣ ವಿವರಗಳನ್ನು ನೀಡುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,, ಆಯುಕ್ತರು, ಮನಪಾ