Advertisement

ಅಂತರಂಗದ ದೀಪ ಪ್ರಜ್ವಲಿಸುವುದು ಧರ್ಮ: ಒಡಿಯೂರು ಶ್ರೀ

12:42 AM Apr 09, 2019 | Team Udayavani |

ಕಾಸರಗೋಡು: ದೇಗುಲಗಳೆಂದರೆ ಶಾಶ್ವತವಾದ ನಂದಾದೀಪವಿದ್ದಂತೆ. ದೀಪ ಬೆಳಗಿಸುವುದೆಂದರೆ ದೇವರ ಕಾರ್ಯಕ್ಕೆ ಚಾಲನೆ ಸಿಕ್ಕಿತು ಎಂದರ್ಥ. ಹಾಗೆಯೇ ಪ್ರತಿಯೊಬ್ಬರೂ ಬಹಿರಂಗದ ದೀಪವನ್ನು ಬೆಳಗಿಸುವಂತೆ ಅಂತರಂಗದ ದೀಪವನ್ನು ಸದಾ ಪ್ರಜ್ವಲಿಸುವಂತೆ ಮಾಡುವುದು ಧರ್ಮ. ನಮಗೆಲ್ಲ ಬೇಕಾಗಿರುವುದು ಆಧ್ಯಾತ್ಮದ ಬೆಳಕು. ಈ ಬೆಳಕು ನಿರಂತರ ಬೆಳಗುವಂತಾದರೆ ನಮ್ಮಿಂದ ಸತ್ಕಾರ್ಯ ಮಾಡಲು ಪ್ರೇರಣೆ ಲಭಿಸಿದಂತೆ. ನಮ್ಮ ಸಂಪತ್ತಿನ ಒಂದು ಪಾಲು ದೇವರ ಕಾರ್ಯಕ್ಕೆ ದಾನ ಮಾಡುವ ಮನಸ್ಸು ಇದರಿಂದ ಸೃಷ್ಟಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಪಿಲಿಕುಂಜೆಯ ಶ್ರೀ ಜಗದಂಬಾ ದೇವೀ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ನೂತನ ಗೋಪುರ ಸಮರ್ಪಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿ ಸ್ವಾಮೀಜಿ ಅವರು ಮಾತನಾಡಿದರು.
ಕ್ಷೇತ್ರ ಜೀರ್ಣೋದ್ಧಾರ ಹಾಗೂ ಇಂತಹ ಗೋಪುರ ನಿರ್ಮಾಣಗಳಿಗೆ ದಾನಿಗಳ ಉದಾರತೆಯೇ ಕಾರಣ. ದಾನಿಗಳೊಂದಿಗೆ ಸೇವಾ ತತ್ಪರರು ಕೈಜೋಡಿಸುವಾಗ ಅಲ್ಲಿ ಸಾರ್ಥಕ ಕಾರ್ಯಗಳು ನೆರವೇರಲು ಸಾಧ್ಯ. ಇದರ ಪ್ರತ್ಯಕ್ಷ ಉದಾಹರಣೆಯನ್ನು ಈ ಜಗದಂಬಾ ದೇವಿ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ.

ಧರ್ಮದ ಆಚರಣೆಯ ಸಂದೇಶ ನೀಡುವ ದೇವಾಲಯಗಳನ್ನು ಸಂರಕ್ಷಿಸುವುದು ಕೂಡ ನಮ್ಮ ಕರ್ತವ್ಯ. ಭಕ್ತಿ ಭಾವದ ಎಣ್ಣೆಯಿಂದ ಧರ್ಮವೆಂಬ ದೀಪವನ್ನು ಸದಾ ಸಮಾಜದಲ್ಲಿ ಬೆಳಗಿಸುವ ಕಾರ್ಯಕ್ಕೆ ಇಂತಹ ಕಾರ್ಯಕ್ರಮದಿಂದ ಪ್ರೇರಣೆ ಲಭಿಸಲಿ ಎಂದು ಸ್ವಾಮೀಜಿಯವರು ಆಶೀರ್ವದಿಸಿದರು.

ಸಮರ್ಪಣೆಯಿಂದ ಜೀವನ ಸಾರ್ಥಕ. ಭಕ್ತರ ಸಮರ್ಪಣೆಯ ಮನೋಭಾವ ವೃದ್ಧಿಗೊಂಡಿರುವುದರಿಂದಲೇ ಇಂದು ಕ್ಷೇತ್ರಗಳ ಪುನರ್‌ ನಿರ್ಮಾಣಗಳು ಯಶಸ್ವಿ ಯಾಗಲು ಕಾರಣವಾಗಿದೆ. ಕ್ಷೇತ್ರಗಳ ವ್ಯವಸ್ಥಿತ ನಿರ್ವಹಣೆಗೆ ಇಂತಹ ಗೋಪುರಗಳು ಪೂರಕವಾಗಿವೆೆ. ಇದಕ್ಕಾಗಿ ದುಡಿದ ಶ್ರೀದೇವಿಯ ಭಕ್ತರು ಅಭಿನಂದನಾರ್ಹರು ಎಂದು ಆರ್‌ಎಸ್‌ಎಸ್‌ ಮುಖಂಡ ಗೋಪಾಲ ಚೆಟ್ಟಿಯಾರ್‌ ಹೇಳಿದರು.

ಸರ್ವ ಭಾಷೆಯ ಮಾತೃ ರೂಪವೇ ಸಂಸ್ಕೃತ. ಆದ ಕಾರಣ ನಾನು ಸಂಸ್ಕೃತ ಭಾಷೆಯಿಂದಲೇ ಭಾಷಣ ಆರಂಭಿಸಿದ್ದೇನೆ ಎಂದ ಸನಲ್‌ ಕುಮಾರ್‌ ಅವರು ಅನಂತರ ಮಲಯಾಳದಲ್ಲಿ ಭಾಷಣ ಮಾಡಿದರು.

Advertisement

ಲೆಕ್ಕಪರಿಶೋಧಕ ಸಂದೀಪ್‌, ಶ್ರೀ ಜಗದಂಬಾ ದೇವಿ ಕ್ಷೇತ್ರದ ಗೌರವಾಧ್ಯಕ್ಷ ಯು.ಎಸ್‌. ಬಾಲನ್‌ ಉಪಸ್ಥಿತರಿದ್ದರು. ಜಗದಂಬಾ ದೇವೀ ಕ್ಷೇತ್ರ ಅಧ್ಯಕ್ಷ ಎಸ್‌.ಜೆ.ಪ್ರಸಾದ್‌ ಅಧ್ಯಕ್ಷತೆ ವಹಿಸಿದರು.

ಕೆ.ಎನ್‌. ವೇಣುಗೋಪಾಲ್‌ ಸ್ವಾಗತಿಸಿ ದರು. ಸುಜಿತ್‌ ಪಿಲಿಕುಂಜೆ ವಂದಿಸಿದರು. ಪಯಸ್ವಿನಿ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next