Advertisement
ಎಚ್‌ಐವಿ ಸೋಂಕಿತ ವ್ಯಕ್ತಿ ಕೂಡ ಸಾಮಾನ್ಯವಾಗಿ ಇಂಥದೇ ಸಂದರ್ಭಗಳನ್ನು ಎದುರಿಸುತ್ತಾನೆ. ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎನ್ನುವಂತೆ ಎಚ್‌ಐವಿ ಸೋಂಕಿತ ವ್ಯಕ್ತಿ ತನ್ನ ಕುಟುಂಬದ, ಸಮಾಜದ ದೃಷ್ಠಿಯಲ್ಲಿ ಕಳಂಕಿತನಾಗುತ್ತಾನೆ. ಎಲ್ಲರ ಅವಗಣನೆಗೆ ಒಳಗಾಗುತ್ತಾನೆ. ಅವರಲ್ಲಿ ಮನೆ ಮಾಡಿದ ಭಯವನ್ನು ಹೋಗಲಾಡಿಸಿ, ಅವರಲ್ಲಿ ಜೀವನೋತ್ಸಾಹವನ್ನು ತುಂಬುವ ಆವಶ್ಯಕತೆ ಇರುತ್ತದೆ. ಇವರನ್ನು ಸಮಾಜ ಮುಖೀಗಳನ್ನಾಗಿ ಮಾಡುವಲ್ಲಿ “ಆಪ್ತಸಮಾಲೋಚನೆ’ಯು ನದಿಯಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕಂತಯೇ ಸರಿ.
Related Articles
Advertisement
ಆಪ್ತಸಮಾಲೋಚನೆಯ ಹಂತಗಳು
ಒಬ್ಬ ಸೋಂಕಿತ ವ್ಯಕ್ತಿ ಆಪ್ತಸಮಾಲೋಚಕನ ಹತ್ತಿರ ಬಂದಾಗ ಆತನಲ್ಲಿ ಹಲವಾರು ಗೊಂದಲಗಳಿರುತ್ತವೆ. ಮೊದಲ ಹಂತದಲ್ಲಿ ಸಮಾಲೋಚಕರು ಆ ವ್ಯಕ್ತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದರಿಂದ ಸಮಾಲೋಚಕನ ಮೇಲೆ ಆತನಿಗೆ ವಿಶ್ವಾಸ, ಭರವಸೆ, ಆತ್ಮೀಯತೆಯ ಭಾವನೆ ಮೂಡುತ್ತದೆ. ಸೋಂಕಿತನಿಗೆ ತನ್ನಲ್ಲಿ ಮಡುಗಟ್ಟಿದ ದುಃಖ, ಒತ್ತಡಗಳನ್ನು ಹೊರಹಾಕಲು ಸೂಕ್ತ ವಾತಾವರಣ ಇಲ್ಲಿ ನಿರ್ಮಾಣವಾಗುತ್ತದೆ.
ಎರಡನೆಯ ಹಂತದಲ್ಲಿ ಸಮಾಲೋಚಕರು ಸೋಂಕಿತ ಹೊಂದಿರಬಹುದಾದ ಸಮಸ್ಯೆಯ ವಿಮರ್ಷೆಯನ್ನು ಮಾಡುತ್ತಾರೆ. ಎಚ್‌ಐವಿ ಸೋಂಕಿತನಲ್ಲಿರುವ ಭಯ, ಮಾನಸಿಕ ಒತ್ತಡ, ಸಾಮಾಜಿಕ ಕಳಂಕ, ಕಾಯಿಲೆ ಉಲ್ಬಣಗೊಳ್ಳುವ ಆತಂಕ, ಭವಿಷ್ಯದ ಕುರಿತಾಗಿ ಅಸ್ಥಿರತೆ ಹೀಗೆ ಇತರ ತಪ್ಪು ತಿಳುವಳಿಕೆಯಿಂದ ಅವರನ್ನು ಹೊರ ತರುತ್ತಾರೆ. ಸೋಂಕಿತ ಕೂಡ ತನ್ನ ಮನೋಬಲ, ಸೂಕ್ತ ಚಿಕಿತ್ಸೆ, ಸುರಕ್ಷಾ ಕ್ರಮಗಳಿಂದ ಸಾಮಾನ್ಯರಂತೆ ಬದುಕಲು ಸಾಧ್ಯವಿದೆ ಎಂಬ ಆತ್ಮ ವಿಶ್ವಾಸವನ್ನು ಮೂಡಿಸುತ್ತಾರೆ.
ಸೋಂಕಿತ ಯಾವ ಮೂಲದಿಂದ ಎಚ್‌ಐವಿ ಸೋಂಕನ್ನು ಪಡೆದಿರಬಹುದೆಂದು ಸಮಾಲೋಚನೆಯ ಮೂಲಕ ತಿಳಿದುಕೊಂಡು, ಅಪಾಯಕರ ಚಟುವಟಿಕೆಗಳಿಂದ ದೂರವಿರುವಲ್ಲಿ ಹಾಗೂ ಸಂಗಾತಿಗೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳನ್ನು ತಿಳಿಸುತ್ತಾರೆ. ಇಲ್ಲಿ ಎಚ್‌ಐವಿ ಕುರಿತಂತೆ ಮಾಹಿತಿಯನ್ನು ನೀಡುವುದಷ್ಟೇ ಅಲ್ಲದೆ ಕ್ಲೈಂಟ್‌ನ ಭಾವನೆಗಳಿಗೆ ಸ್ಪಂದಿಸಿ ಮಾನಸಿಕ ಬೆಂಬಲವನ್ನು ನೀಡಲಾಗುತ್ತದೆ. ಒಂದು ಹಂತದಿಂದ ಮತ್ತೂಂದು ಹಂತಕ್ಕೆ ವ್ಯವಸ್ಥಿತ ರೀತಿಯಲ್ಲಿ ಕ್ಲೈಂಟ್ ಪ್ರಗತಿ ಹೊಂದಲು ಸಲಹೆಯನ್ನು ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆ ಪಡೆಯುವ ಕುರಿತಂತೆ ಮಾರ್ಗದರ್ಶನ, ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ ಅವರಲ್ಲಿರುವ ನಕಾರಾತ್ಮಕ ಭಾವನೆಯನ್ನು ಅಲಿಸಿ ಸಕಾರಾತ್ಮಕ ಭಾವನೆಯನ್ನು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.
ಎಚ್‌ಐವಿ ಹರಡದಂತೆ ಕ್ರಮ ಕೈಗೊಳ್ಳಲು ಹಾಗೂ ಸೋಂಕಿತರಿಗೆ ಮಾನಸಿಕ ಬೆಂಬಲವನ್ನು ನೀಡುವ ಉದ್ದೇಶದಿಂದ ಆಪ್ತಸಮಾಲೋಚನಾ ಕೇಂದ್ರಗಳು ದೇಶಾದ್ಯಂತ ಇಂದು ಕೆಲಸ ಮಾಡುತ್ತಿವೆ. ಇಂದು ದೇಶಾದ್ಯಂತ ಸುಮಾರು 15,000 ಎಚ್‌ಐವಿ ಆಪ್ತಸಮಾಲೋಚನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸಾವಿನೆಡೆಗೆ ಮುಖ ಮಾಡುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ರೋಗ ಹರಡುವಿಕೆಯೂ ನಿಯಂತ್ರಣಕ್ಕೆ ಬಂದಿದೆ. ಬಾಳಿ ಬದುಕಬೇಕಾದ ಜೀವಗಳು ಸಾವಿನತ್ತ ಸಾಗದಂತೆ ಅಭಯ ಹಸ್ತವನ್ನು ಚಾಚುವಲ್ಲಿ ಆಪ್ತ ಸಮಾಲೋಚನೆ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ. ಎಲ್ಲ ಆಪ್ತಸಮಾಲೋಚಕರಿಗೊಂದು ಸಲಾಂ.
ಗೌರಿ ಚಂದ್ರಕೇಸರಿ
ಶಿವಮೊಗ್ಗ