Advertisement

ಮಿತನೀರು ಬಳಸುವ ಕೈಗಾರಿಕೆ ಸ್ಥಾಪನೆಯಾಗಲಿ

02:45 PM Feb 27, 2021 | Team Udayavani |

ಚಿಕ್ಕಬಳ್ಳಾಪುರ: ನೀರಾವರಿ ಸೌಲಭ್ಯವಂಚಿತ ಅದರಲ್ಲೂ ವಿಶೇಷವಾಗಿ ಬರಪೀಡಿತ ಜಿಲ್ಲೆಯಲ್ಲಿ ಅಕ್ಷರಜಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸುಗಟೂರು ಗ್ರಾಮದ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಮರನಾರಾಯಣ ಅವರನ್ನು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಈ ನಿಟ್ಟಿನಲ್ಲಿ ಉದಯವಾಣಿ ಸಂದರ್ಶನ ನೀಡಿದ್ದಾರೆ.

Advertisement

ಪ್ರಶ್ನೆ: ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಹೇಗೆ ಬಂತು?

ಅಮರನಾರಾಯಣ: ಕಾಲೇಜು ದಿನಗಳಿಂದ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಂಡಿದ್ದೆ. ಕುವೆಂಪು ಅವರು ಬರೆದಿರುವ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂಬ ಪುಸ್ತಕವನ್ನು ಓದಿದ ನಂತರ ಜೀವನದಲ್ಲಿ ಹೊಸ ತಿರುವು ಪಡೆದುಕೊಂಡೆ. ನಾಡಿನ ಹೆಸರಾಂತ ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಓದುವ ಮೂಲಕ ಕನ್ನಡದ ಬಗ್ಗೆ ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡೆ.

ಪ್ರಶ್ನೆ: ನಿಮ್ಮ ಬಾಲ್ಯದ ಜೀವನ ಹೇಗಿತ್ತು?

ಅಮರನಾರಾಯಣ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸುಗಟೂರು ಗ್ರಾಮದಲ್ಲಿ ಬಾಲ್ಯ ಕಳೆಯಿತು. ಅಜ್ಜ ಅಜ್ಜಿ ಅವರಿಂದ ಪರಿಸರ ಕಾಳಜಿ ಬಂತು. ಪ್ರಾಥಮಿಕ ಶಿಕ್ಷಣ ಗ್ರಾಮದಲ್ಲಿ ಪೂರ್ಣಗೊಳಿಸಿ ಬಳಿಕ ಬೆಂಗಳೂರಿನ ಮಾವಳ್ಳಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ಯುನೈಟೆಡ್‌ ಮಿಷನ್‌ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಸೆಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಮುಗಿಸಿ ವಿವಿಪುರಂ ಕಾನೂನು ಕಾಲೇಜಿನಲ್ಲಿ ಎಲ್‌.ಎಲ್‌.ಬಿ ಪದವಿ ಪಡೆದೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟ್‌ರ್‌ ಪದವಿ ಪಡೆದುಕೊಂಡೆ.

Advertisement

ಪ್ರಶ್ನೆ: ಆಧುನಿಕ ಯುಗದಲ್ಲಿ ಕನ್ನಡ ಭಾಷೆಗೆ ಭವಿಷ್ಯ ಇದೆಯೇ?

ಅಮರನಾರಾಯಣ: ಖಂಡಿತ ಇದೆ. ಆದರೇ ಕನ್ನಡಿಗರಾದ ನಾವೆಲ್ಲರು ಕನ್ನಡ ಭಾಷೆ-ಸಾಹಿತ್ಯ-ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಆಂಗ್ಲ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ಉದ್ಯೋಗ ಲಭಿಸುತ್ತದೆಯೆಂಬ ಭ್ರಮೆಯಿಂದ ಹೊರಬರಬೇಕು.

ಪ್ರಶ್ನೆ: ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುಹೋಗುತ್ತಿರುವುದಕ್ಕೆ ಕಾರಣವೇನು?

ಅಮರನಾರಾಯಣ: ಖಾಸಗಿ ಶಾಲೆಗಿಂತಲೂ ನುರಿತ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡುತ್ತಾರೆ. ಆರ್ಥಿಕವಾಗಿ ಸದೃಢರಾಗಿರುವ ಜನ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಾರೆ. ಬಡವರು ಮತ್ತು ಮಧ್ಯಮ ವರ್ಗದವರು ಸರ್ಕಾರಿ ಶಾಲೆಯಲ್ಲಿ ದಾಖಲು ಮಾಡುತ್ತಿದ್ದಾರೆ. ಹೀಗಾಗಿ ಪೋಷಕರಲ್ಲಿ ಸಹ ಆಂಗ್ಲ ಭಾಷೆಯ ವ್ಯಾಮೋಹ ದೂರ ಹೋಗಬೇಕು.

ಪ್ರಶ್ನೆ: ಹೆಚ್‌.ಎನ್‌.ವ್ಯಾಲಿ ಯೋಜನೆ ಬಗ್ಗೆ ತಮ್ಮ ನಿಲುವೇನು?

ಅಮರನಾರಾಯಣ: ಜಲ ತಜ್ಞರ ಪ್ರಕಾರ ಉದ್ದೇಶಿತ ಯೋಜನೆಯ ನೀರು ಮೂರು ಹಂತದಲ್ಲಿ ಶುದ್ಧೀಕರಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಸರ್ಕಾರ ಸಹ ತೆರೆದ ಮನಸ್ಸಿನಿಂದ ಕೆಲಸ ಮಾಡಿ ಬರಪೀಡಿತ ಜಿಲ್ಲೆಗೆ ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

ಪ್ರಶ್ನೆ: ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಕ್ಷೇತ್ರಗಳ ಅಭಿವೃದ್ಧಿಗೆ ಯಾವ ಯೋಜನೆ ಸೂಕ್ತ?

ಅಮರನಾರಾಯಣ: ಜಿಲ್ಲೆಯಲ್ಲಿ ವಿಶ್ವ ವಿಖ್ಯಾತ ನಂದಿಬೆಟ್ಟವಿದೆ. ಅನೇಕ ಚಾರಣ ಮಾಡುವ ಸ್ಥಳಗಳಿವೆ. ವಿಶೇಷವಾಗಿ ನೀರಿಗೆ ಕೊರತೆಯಿದ್ದರೂ ಸಹ ಕಲೆ-ಕಲಾವಿದರು, ಸಾಹಿತ್ಯಕ್ಕೆ ಬರವಿಲ್ಲ. ಶ್ರೀಮಂತ ಜನಪದ ಕಲೆಯನ್ನು ಹೊಂದಿದೆ ಮಧ್ಯ ಯೂರೋಪ್‌ ರಾಷ್ಟ್ರದಲ್ಲಿರುವ ಲಿಮಾಸೋಲ್‌ ಎಂಬ ದೇಶದಲ್ಲಿರುವ 150 ಹೋಟೆಲ್‌ಗ‌ಳಲ್ಲಿ ವಿಶ್ರಾಂತಿ ಪಡೆಯುವ ಪ್ರವಾಸಿಗರಿಗೆ ಸಮೀಪದ ಗ್ರಾಮಗಳಲ್ಲಿರುವ ಕಲೆ ಮತ್ತು ಮನರಂಜನೆ ಪರಿಚಿಯಿಸುವ ಕೆಲಸ ಮಾಡಲಾಗುತ್ತದೆ.

ಪ್ರಶ್ನೆ: ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಹೇಗೆ?

ಅಮರನಾರಾಯಣ: ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಗಡಿ ಜಿಲ್ಲೆಯಲ್ಲಿ ಕನ್ನಡ ನೆಲ,ಜಲ,  ಭಾಷೆಯ ಬಗ್ಗೆ ಹೆಚ್ಚಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಗ್ರಾಪಂ ಹಾಗೂ ಹೋಬಳಿ ಸಹಿತ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು.

ಪ್ರಶ್ನೆ: ಪರಿಸರ ಪ್ರೇಮಿಯಾಗಿರುವ ತಮ್ಮ ಯೋಜನೆ ಏನು?

ಅಮರನಾರಾಯಣ: ಪರಿಸರ ಸಂರಕ್ಷಣೆ ಕೇವಲ ಒಬ್ಬರು ಇಬ್ಬರಿಂದ ಸಾಧ್ಯವಿಲ್ಲ ಮನೆಯಿಂದಲೇ ಪರಿಸರ ಪ್ರೇಮ ಬೆಳೆಯಬೇಕು. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು.

ಪ್ರಶ್ನೆ: ಜಿಲೆಟಿನ್‌ ದುರಂತದ ಬಗ್ಗೆ ತಮ್ಮ ಅಭಿಪ್ರಾಯ ಏನು?

ಅಮರನಾರಾಯಣ: ವ್ಯವಸ್ಥೆಯ ವೈಫಲ್ಯದಿಂದ ಈ ದುರಂತ ಸಂಭವಿಸಿದೆ. ಯಾರೊಬ್ಬರನ್ನು ಟೀಕಿಸುವ ಬದಲಿಗೆ ಮೊದಲು ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು.

ಪ್ರಶ್ನೆ: ಕೈಗಾರಿಕೆಗಳ ಸ್ಥಾಪನೆಗೆ ತಮ್ಮ ನಿಲುವೇನು?

ಅಮರನಾರಾಯಣ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳ ಸ್ಥಾಪನೆ ಹೆಚ್ಚಾಗಿ ಆಗಬೇಕು. ವಿಶೇಷವಾಗಿ ಮಿತ ನೀರು ಬಳಕೆ ಮಾಡಿ ನಡೆಸುವಂತಹ ಕೈಗಾರಿಕೆಗಳು ಸ್ಥಾಪನೆ ಆಗಬೇಕು.

ಜಿಲ್ಲೆಯ ಜನರಿಗೆ ನಿಮ್ಮ ಸಂದೇಶ ಏನು? :

ಅಮರನಾರಾಯಣ: ಗಡಿ ಜಿಲ್ಲೆಯಾಗಿರುವ ಜಿಲ್ಲೆಯಲ್ಲಿ ಕನ್ನಡದ ಜೊತೆಗೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆ,ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸೌಹಾರ್ದತೆಯಿಂದ ಭಾಷೆಯನ್ನು ಅಭಿವೃದ್ಧಿಗೊಳಿಸಿ ಜಿಲ್ಲಾದ್ಯಂತ ಕನ್ನಡಪರ ವಾತಾವರಣ ನಿರ್ಮಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next