ಬೆಂಗಳೂರು: ಕಾವೇರಿ ನೀರಿನ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತತ್‌ಕ್ಷಣವೇ ಮಧ್ಯಪ್ರವೇಶ ಮಾಡಬೇಕು. ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂ ಕೋರ್ಟಿಗೆ ಪರಿಶೀಲನ ಅರ್ಜಿ ಸಲ್ಲಿಸಲು ಜಲಶಕ್ತಿ ಸಚಿವಾಲಯಕ್ಕೆ ಆದೇಶ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗ್ರಹಿಸಿದ್ಧಾರೆ.
ಪ್ರಧಾನಿ ಮೋದಿಯವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಅವರು ಈ ಆಗ್ರಹ ಮಾಡಿದ್ದಾರೆ. ತಟಸ್ಥವಾದ ಒಂದು ಸಮಿತಿಯನ್ನು ಉಭಯ ರಾಜ್ಯಗಳಿಗೆ ಕಳುಹಿಸಿ ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕು. ಕಾವೇರಿ ಜಲಸಂಕಷ್ಟದ ಈಗಿನ ವಾಸ್ತವಾಂಶ ಆಧಾರದ ಮೇಲೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ತಾವು ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ.
ಮಳೆ ಕೊರತೆ ಕಾರಣದಿಂದ ರೈತರು ಪರದಾಡುತ್ತಿದ್ಧಾರೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟಕ್ಕೆ ಕಾರಣವಾಗಿದೆ. ಕಾವೇರಿ ಭಾಗದ ಜನ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ವರಿಷ್ಠ ಪ್ರಧಾನಿಗಳ ಗಮನ ಸೆಳೆದಿದ್ಧಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿರುವುದನ್ನು ಸ್ವಾಗತಿಸುತ್ತೇನೆ. ರಾಜ್ಯಕ್ಕೆ ಉಂಟಾ ಗಿರುವ ಅನ್ಯಾಯ ತಪ್ಪಿಸುವ ನಿಟ್ಟಿನಲ್ಲಿ ಪ್ರಧಾನಿಯವರೇ ಮಧ್ಯಪ್ರವೇಶ ಮಾಡಿ ಪರಿಹಾರ ನೀಡುವುದು ಸೂಕ್ತ.
-ಸಿದ್ದರಾಮಯ್ಯ, ಮುಖ್ಯಮಂತ್ರಿ