Advertisement

ಗುಡ್ಡ ಕುಸಿತದಿಂದ ಅಂತಾರಾಜ್ಯ ರಸ್ತೆ ಮುಚ್ಚುಗಡೆ

10:07 PM Jul 25, 2019 | sudhir |

ಬದಿಯಡ್ಕ: ಕಳೆದ ನಾಲ್ಕು ದಿನಗಳಿಂದ ಬದಿಯಡ್ಕ ಸಮೀಪದ ಕರಿಂಬಿಲದಲ್ಲಿ ನಾಗರಿಕರಿಗೆ ಭೀತಿ ತಂದೊಡ್ಡಿದ ರಸ್ತೆ ಬದಿಯ ಗುಡ್ಡ ಕುಸಿತಗೊಂಡ ಸ್ಥಳಕ್ಕೆ ಗುರುವಾರ ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕೆ. ಸಜಿತ್‌ ಬಾಬು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.

Advertisement

ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಿದರು. ಈ ವೇಳೆ ಅವರು ಮಾತನಾಡಿ ರಸ್ತೆ ಅಗಲಗೊಳಿಸುವ ವೇಳೆ ಉಂಟಾದ ಲೋಪವು ಇಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಪ್ರಸ್ತುತ ಸ್ಥಳವು ತುಂಬಾ ಅಪಾಯಕಾರಿಯಾಗಿ ಗೋಚರಿಸುತ್ತಿದ್ದು, ಗುತ್ತಿಗೆದಾರರು, ಎಂಜಿನಿಯರ್‌ಗಳ ಜತೆ ಈ ಕುರಿತು ಚರ್ಚಿಸಲಾಗುವುದು.

ನಾಗರಿಕರ ಭೀತಿಯನ್ನು ದೂರ ಮಾಡಿ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ನಾಗರಿಕರು ಜಿಲ್ಲಾಧಿಕಾರಿಯವರಲ್ಲಿ ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಗಳು ಇಲ್ಲಿ ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ಅಗತ್ಯ ಮೇಲ್ನೋಟ ವಹಿಸದಿರುವುದರಿಂದ ಇಂತಹ ಬಹುದೊಡ್ಡ ಅಪಾಯ ಬಂದೊದಗಿದೆ. ಪಳ್ಳತ್ತಡ್ಕ, ಉಕ್ಕಿನಡ್ಕ ದಲ್ಲಿಯೂ ಇದೇ ರೀತಿ ರಸ್ತೆ ಬದಿ ಗುಡ್ಡೆ ಪ್ರದೇಶವು ಅಪಾಯಕಾರಿಯಾಗಿವೆ. ಇದರ ಬಗ್ಗೆಯೂ ಗಮನ ಹರಿಸಬೇಕೆಂದು ಬಿನ್ನವಿಸಿಕೊಂಡರು. ಶಾಲಾಮಕ್ಕಳಿಗೆ ಶಾಲೆಗಳಿಗೆ ತಲುಪಲು ಉಂಟಾಗುವ ಕಷ್ಟಗಳ ಕುರಿತಾಗಿ ಬದಿಯಡ್ಕ ನವಜೀವನ ಪ್ರೌಢಶಾಲೆಯ ನೇತƒತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡಲಾಯಿತು.

ಸ್ಥಳೀಯ ನಿವಾಸಿ ಆ್ಯಂಟನಿ ಅವರು ತಮ್ಮ ಕಷ್ಟದ ಕುರಿತಾಗಿ ಮನವಿಯನ್ನು ನೀಡಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ನ್ಯಾಯವಾದಿ.ಶ್ರೀಕಾಂತ್‌, ಸುಧಾಮ ಗೋಸಾಡ, ಅವಿನಾಶ್‌ ರೈ, ಹರೀಶ್‌ ಗೋಸಾಡ ಅಶ್ರಫ್‌ ಮುನಿಯೂರು, ರಾಜೇಶ್‌, ವಿಶ್ವನಾಥ ಪ್ರಭು, ಹನೀಫ್‌ ಪಿಎಮ್ಮೆಸ್‌Õ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಘಟನಾ ಸ್ಥಳ ಸಂದರ್ಶಿಸಿದ ಕಾಸರಗೋಡು ಶಾಸಕ ಎನ್‌ಎ ನೆಲ್ಲಿಕುನ್ನು ಸಂಬಂಧಿಸಿದ ಇಲಾಖೆಯ ಜತೆ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬದಿಯಡ್ಕ ಪಂ.ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌, ಮುಖಂಡರಾದ ಮಾಹಿನ್‌ ಕೇಳ್ಳೋಟ್‌ ಮತ್ತಿತರರು ಜತೆಗಿದ್ದರು.

ಸತತ 3ನೇ ದಿನ ರಸ್ತೆ ಸಂಚಾರ ಬಂದ್‌
ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ಸಂಪರ್ಕ ರಸ್ತೆಯ ಕರಿಂಬಿಲ ಪ್ರದೇಶದಲ್ಲಿ ಸತತ ಮೂರನೇ ದಿನವೂ ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಗುಡ್ಡ ಕುಸಿಯುವ ಭೀತಿಯಿಂದಾಗಿ ಮಂಗಳವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಕೆಡೆಂಜಿ ಹಾಗೂ ಕಾಡಮನೆಯಿಂದ ವಾಹನಗಳು ಸುತ್ತು ಬಳಸಿ ಸಂಚರಿಸುತ್ತಿವೆೆ. ಅನ್ಯದಾರಿಯನ್ನು ಬಳಸಿ ಬಸ್‌ ಸಂಚಾರ ನಡೆಸಿ ನಷ್ಟವುಂಟಾಗುತ್ತದೆ ಎಂದು ಖಾಸಗಿ ಬಸ್‌ಗಳು ತಮ್ಮ ಸಂಚಾರವನ್ನೇ ನಿಲ್ಲಿಸಿವೆ. ಸಾರ್ವಜನಿಕರು, ವಿದ್ಯಾರ್ಥಿಗಳು ನಿರ್ದಿಷ್ಟ ಸ್ಥಳಕ್ಕೆ ತಲುಪಲು ಹರಸಾಹಸಪಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next