ಬೆಂಗಳೂರು: ಆನ್‌ಲೈನ್‌ನಲ್ಲೇ ಬಾಡಿಗೆಗೆ ಪಡೆದ ಕ್ಯಾಮೆರಾ, ಲೆನ್ಸ್‌ಗಳನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಹೈಟೆಕ್ ವಂಚಕ ಈಗ ಜೈಲು ಪಾಲಾಗಿದ್ದಾನೆ. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳ ವಿವಿಧ ನಗರದಲ್ಲಿ ವಂಚಿಸಿ ತಲೆ ಮರೆಸಿಕೊಂಡಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಕಾರ್ತಿಕ್ ಅಡ್ಡಗರ್ಲ (27) ಸಂಪಿಗೆ ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಎಂಜಿನಿಯರಿಂಗ್ ಪದವೀಧರನಾಗಿರುವ ಕಾರ್ತಿಕ್, ಮೂರು ವರ್ಷಗಳಿಂದ ಆನ್‌ಲೈನ್ ವಂಚನೆಯಲ್ಲೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ ಹಲವರಿಗೆ ವಂಚಿಸಿ ಲಕ್ಷಾಂತರ ರೂ. ಲಪಟಾಯಿಸಿದ್ದ. ವಂಚನೆ ಪ್ರಕರಣವೊಂದರ ಬೆನ್ನತ್ತಿದ್ದ ಸಂಪಿಗೆಹಳ್ಳಿ ಪೊಲೀಸರು, ಕಾರ್ತಿಕ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಜತೆಗೆ ಆರೋಪಿಯಿಂದ 12 ಲಕ್ಷ ರೂ. ಮೌಲ್ಯದ ಕ್ಯಾಮೆರಾ, ಲೆನ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ.
ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಮಾರುಹೋಗಿದ್ದ ಕಾರ್ತಿಕ್, ಸುಲಭವಾಗಿ ಹಣ ಗಳಿಸಲು ಹಾಗೂ ವಿಲಾಸಿ ಜೀವನ ನಡೆಸಲು ಆನ್‌ಲೈನ್ ವಂಚನೆಗಿಳಿದಿದ್ದ. ಆನ್‌ಲೈನ್‌ನಲ್ಲೇ ಸರಕುಗಳನ್ನು ಬಾಡಿಗೆಗೆ ನೀಡುವ ಜಾಲತಾಣಗಳಲ್ಲಿ ಬಾಡಿಗೆ ಪಡೆದುಕೊಳ್ಳುತ್ತಿದ್ದ ವಸ್ತುಗಳನ್ನು ಇತರರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ.
ಒಂದೇ ನಗರದಲ್ಲಿದ್ದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೊಲ್ಕತ್ತಾಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ. ಪ್ರತಿಬಾರಿ ವಿಮಾನ ಪ್ರಯಾಣ, ಪ್ರತಿಷ್ಠಿತ ತಾರಾ ಹೋಟೆಲ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದ. ವಂಚನೆಯ ಮೊತ್ತ ಎರಡು- ಮೂರು ಲಕ್ಷ ರೂ. ಮೀರುತ್ತಿದ್ದಂತೆ ಜಾಗ ಖಾಲಿ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇತ್ತೀಚೆಗೆ ನಗರದ ಲೋಹಿತ್ ಸೋಲಂಕಿ ಎಂಬುವವರು ‘rಛಿnಠಿsಜಚrಛಿ.cಟಞ’ ತಾಣದಲ್ಲಿ ತಮ್ಮ ಬಳಿಯಿದ್ದ 2.76 ಲಕ್ಷ ರೂ.ಮೌಲ್ಯದ ಕೆನಾನ್ ಎಸ್‌ಎಲ್‌ಆರ್ ಡಿಜಿಟಲ್ ಕ್ಯಾಮೆರಾ ಹಾಗೂ 1.38 ಲಕ್ಷ ರೂ. ಬೆಲೆಯ ಜೂಮ್ ಲೆನ್ಸ್ ಬಾಡಿಗೆಗೆ ನೀಡುವುದಾಗಿ ಪ್ರಕಟಿಸಿದ್ದರು. ಅದರಂತೆ ಕೆಲದಿನಗಳ ಮಟ್ಟಿಗೆ ಬಾಡಿಗೆಗೆ ಪಡೆದ ಕಾರ್ತಿಕ್ ಹಿಂತಿರುಗಿಸಿರಲಿಲ್ಲ. ಪೋನ್ ಕರೆ ಮಾಡಿದರೆ ಕಾರ್ತಿಕ್ ನೀಡಿದ್ದ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.
ಹೀಗಾಗಿ ಲೋಹಿತ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ, ಆರೋಪಿ ಗಾಂಧಿನಗರದ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ಬಗ್ಗೆ ಮಾಹಿತಿ ಗೊತ್ತಾಯಿತು. ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತ ಅಂತಾರಾಜ್ಯ ಆನ್‌ಲೈನ್ ವಂಚಕ ಎಂಬುದು ಬೆಳಕಿಗೆ ಬಂದಿತು ಎಂದು ಅಧಿಕಾರಿ ವಿವರಿಸಿದರು.
ಬಾಡಿ ವಾರೆಂಟ್ ಅರ್ಜಿ: ಆರೋಪಿ ಕಾರ್ತಿಕ್ ಈ ಹಿಂದೆಯೂ ನಗರದಲ್ಲಿ ಹಲವರಿಗೆ ವಂಚಿಸಿದ್ದು, ದೂರು ನೀಡುತ್ತಾರೆ ಎಂದು ಗೊತ್ತಾದ ಕೂಡಲೇ ಸೆಟಲ್‌ಮೆಂಟ್ ಮಾಡಿಕೊಂಡಿದ್ದಾನೆ. ನಗರ ಪೊಲೀಸರು ವಿಚಾರಣೆ ಮುಗಿದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಹಲವು ದೇಶದ ಹಲವು ನಗರಗಳಲ್ಲಿ ವಂಚನೆ ಎಸಗಿದ್ದಾನೆ. ಹೀಗಾಗಿ ಮಾಹಿತಿ ತಿಳಿದ ಕೂಡಲೇ ಮುಂಬೈ ಹಾಗೂ ಆಂಧ್ರ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆಯಲು ನ್ಯಾಯಾಲಯದಲ್ಲಿ ಬಾಡಿವಾರೆಂಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.