ಬಳ್ಳಾರಿ: ಕರ್ನಾಟಕ-ಆಂಧ್ರ ಪ್ರದೇಶದ ಅಂತಾರಾಜ್ಯ ಗಡಿವಿವಾದಕ್ಕೆ ಸಂಬಂಧಿಸಿದಂತೆ ಗಡಿಗುರುತುಗಳನ್ನು ಪತ್ತೆಹಚ್ಚಲು ಎರಡನೇ ಬಾರಿಗೆ ಶನಿವಾರ ಸರ್ವೆ ಕಾರ್ಯ ಆರಂಭಿಸಲಾಗಿದೆ.
ಬಳ್ಳಾರಿಗೆ ಆಗಮಿಸಿದ ಡೆಹರಾಡೂನ್‌ನ ಸರ್ವೆ ಆಫ್ ಇಂಡಿಯಾದ ಅ ಧಿಕಾರಿಗಳ ತಂಡ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಉಭಯ ರಾಜ್ಯಗಳ ಅ ಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ನಂತರ ಅಂತಾರಾಜ್ಯ ಗಡಿಯಲ್ಲಿರುವ ಗ್ರಾಮಗಳಲ್ಲಿ ಸರ್ವೆ ಕಾರ್ಯ ಆರಂಭಿಸಿತು.
ಸರ್ವೆ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್ ಪವನ್‌ಕುಮಾರ್ ಪಾಂಡೆ ನೇತೃತ್ವದಲ್ಲಿ ಕರ್ನಾಟಕದ ಸರ್ವೆ ಸೆಟ್ಲಮೆಂಟ್ ಕಮೀಷನರ್ ಮನೀಷ್ ಮೌದ್ಗಿಲ್, ಅರಣ್ಯ ಇಲಾಖೆಯ ಸಿಸಿಎಫ್ ಬಿಸ್ವಜಿತ್ ಮಿಶ್ರಾ, ನೆರೆಯ ಆಂಧ್ರಪ್ರದೇಶದ ಸರ್ವೆ ಇಲಾಖೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅ ಧಿಕಾರಿಗಳು ನಗರದ ಸರ್ಕಾರಿ ಅತಿಥಿಗೃಹದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 2:30ರ ವರೆಗೆ ಸರ್ವೆ ಹೇಗೆ ನಡೆಯಬೇಕೆಂಬುದರ ವಿಚಾರವನ್ನು ಸುದೀರ್ಘವಾಗಿ ಚರ್ಚಿಸಿದರು. ಬಳಿಕ ಅಂತರಾಜ್ಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತುಮಟಿ, ವಿಠuಲಾಪುರ, ಓಬಳಾಪುರಂ ಹಾಗೂ ವಿಜಿಎಂ ಗಣಿಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಗಳ ಸರಿಹದ್ದುಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಕಳೆದ ಜೂನ್‌ನಲ್ಲಿ ಅಂತಾರಾಜ್ಯ ಗಡಿಗುರುತು ಪತ್ತೆಗಾಗಿ ಸರ್ವೆ ನಡೆಸಿದ್ದರು. ಆದರೆ, ಕಳೆದವಾರ ಡೆಹರಾಡೂನ್‌ನಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಆಂಧ್ರ ಪ್ರದೇಶದ ಅ ಧಿಕಾರಿಗಳು ತಮ್ಮಲ್ಲಿ ಟ್ರಾವರ್ಸ್ ಮ್ಯಾಪ್ ಇದೆ ಎಂದು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡೆಹರಾಡೂನ್‌ನ ಸರ್ವೆ ಆಫ್ ಇಂಡಿಯಾದ ಅ ಧಿಕಾರಿಗಳು ಎರಡನೇ ಬಾರಿಗೆ ಸರ್ವೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮೂರು ದಿನ ಸರ್ವೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಆ. 17 ರಂದು ಬೆಂಗಳೂರು ಅಥವಾ ಹೈದ್ರಾಬಾದ್‌ನಲ್ಲಿ ಸರ್ವೆ ಆಫ್ ಇಂಡಿಯಾದ ಅ ಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.