ಬೆಂಗಳೂರು: ಭಯೋತ್ಪಾದನೆ ಹಾಗೂ ಉಗ್ರಗಾಮಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರ ದಾಖಲೆಗಳಲ್ಲಿ ಪತ್ತೆಯಾಗಿರುವ “ಕೋಡ್‌ವರ್ಡ್ ಗಳನ್ನು ಬೇಧಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಇದನ್ನೂ ಓದಿ:ದುಷ್ಕರ್ಮಿಗಳ ದಾಳಿ: ಸಿಪಿಐ ಶ್ರೀಮಂತ ಇಲ್ಲಾಳ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ
ಸಿಕ್ಕಿಬಿದ್ದಿರುವ 15 ಮಂದಿಯನ್ನು ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬಂಧನಕ್ಕೊಳಗಾದ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದ ವೇಳೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ಈ ಪೈಕಿ ಕೆಲವೊಂದು ಡೈರಿಗಳು ಪತ್ತೆಯಾಗಿದ್ದವು. ಆ ಡೈರಿಯಲ್ಲಿದ್ದ ಕೆಲ “ಕೋಡ್‌ವರ್ಡ್’ಗಳು ಕಂಡು ಬಂದಿವೆ.
ಇದೀಗ ಆ ಕೋಡ್‌ವರ್ಡ್ ಏನನ್ನು ಸೂಚಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ. ಇದರಲ್ಲಿ ಮುಖ್ಯವಾಗಿ “ಟ್ರೈನಿಂಗ್ ಟುಬಿ ಆರ್ಗನೈಸ್ಡ್’ (ತರಬೇತಿ ಆಯೋಜಿಸಬೇಕು) ಎಂದು ಉಲ್ಲೇ ಖೀಸಿದ್ದ ದಾಖಲೆಯೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ, ಯಾವ ತರಬೇತಿ ? ಯಾವಾಗ ತರಬೇತಿ ? ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ. ಭಯೋತ್ಪಾದನಾ ಕೃತ್ಯ ಎಸಗುವ ತರಬೇತಿ ಇರಬಹುದಾ ? ಕೋಮುಗಲಭೆ ಗಲಭೆ ಸೃಷ್ಟಿಸುವ ತರಬೇತಿ ಇರಬಹುದಾ? ಸ್ಫೋಟಕ ತಯಾರಿಸುವ ತರ ಬೇತಿ ಇರಬಹುದಾ ? ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿದ್ದು, ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು: ಪ್ರಮುಖ ಆರೋಪಿಗಳಾದ ನಾಸೀರ್ ಪಾಷಾ ಹಾಗೂ ಮೊಹಮ್ಮದ್ ಅಶ್ರಫ್ನಿಂದ ಪೂರ್ವ ವಿಭಾಗ ಪೊಲೀಸರು ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಇವರು ಇತರ ಆರೋಪಿಗಳೊಂದಿಗೆ ದೇಶ ವಿರೋಧಿ ಕೃತ್ಯಗಳಿಗೆ ಸಂಬಂಧಿಸಿದ ಪ್ರಚೋದನಾಕಾರಿ ಅಂಶಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವರ ಬ್ಯಾಂಕ್ ದಾಖಲೆ ಪರಿಶೀಲಿಸಿ ವಿದೇಶಗಳಿಂದ ಎಷ್ಟು ಪ್ರಮಾಣದಲ್ಲಿ ಫಂಡಿಂಗ್ ಆಗಿದೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.