ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ನಿಯೋಜಿತ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಶ್ವವಿದ್ಯಾಲಯ ಸ್ಥಾಪನೆ ಕಾರ್ಯ ಚುರುಕುಗೊಳಿಸುವಂತೆ ಸಂಸದ ಕರಡಿ ಸಂಗಣ್ಣ ಅವರಿಗೆ ಗಂಗಾವತಿ ನಾಗರೀಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಮಂಜುನಾಥ ಸ್ವಾಮೀ ಹಿರೇಮಠ ಮಾತನಾಡಿ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಂದಿಲ್ಲಾ ಒಂದು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ ಅದರಲ್ಲೂ ನೆರೆಯ ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಎರಡೆರಡು ವಿಶ್ವವಿದ್ಯಾಲಯಗಳಿದ್ದು ಕೊಪ್ಪಳ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇಲ್ಲ ಕೇಂದ್ರ ಸರಕಾರ ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಅಂತರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾಪ ಮಾಡಿದ್ದು ತಾವು ಸಹ ಸ್ಥಳ ಪರಿಶೀಲನೆ ಮಾಡಿ ಕೇಂದ್ರಕ್ಕೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿದ್ದು ವಿವಿ ಸ್ಥಾಪನೆಯ ಪ್ರಸ್ತಾಪ ಬೇಗನೆ ಕಾರ್ಯಗತ ಮಾಡಬೇಕು.
ಸೂಕ್ತವಾಗಿದೆ: ಏಕೆಂದರೆ ಜಿಲ್ಲೆ ಅದರಲ್ಲೂ ಗಂಗಾವತಿ ತಾಲೂಕು ವಿಶ್ವವಿದ್ಯಾಲಯ ಸ್ಥಾಪನೆಗೆ ಅತ್ಯಂತ ಪ್ರಶಸ್ತವಾಗಿದೆ. ತುಂಗಭದ್ರಾ ನದಿ ತೀರದ ಆನೆಗೊಂದಿ ಪ್ರದೇಶವು ವಿಶ್ವಪರಂಪರೆಯ ತಾಣವಾದ ಹಂಪಿಯ ಒಂದು ಭಾಗವೇ ಆಗಿದ್ದು ಭೌಗೋಳಿಕವಾಗಿ, ಚಾರಿತ್ರಿಕವಾಗಿ , ಪೌರಾಣಿಕವಾಗಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಇದು ರಾಮಾಯಣ ಕಾವ್ಯದ ಕಿಷ್ಕಂದೆ ರಾಜ್ಯವೆಂದು ಹೆಸರುವಾಸಿಯಾಗಿದೆ. ಈ ಸ್ಥಳ ಹನುಮನು ಜನಿಸಿದ ನೆಲೇವಿಡು, ವೀರ ಕಂಪಿಲರಾಯ ಗಂಡುಗಲಿ ಕುಮಾರರಾಮರು ಆಳಿದ ಗಂಡುಮೆಟ್ಟಿನ ವೀರಭೂಮಿಯಿದು, ದಕ್ಷಿಣ ಭರತದ ಶ್ರೇಷ್ಟ ವಿಜಯನಗರ ಸಾಮ್ರಾಜ್ಯ ಉದಿಸಿದ್ದು ಇಲ್ಲಿಯ ಆನೆಗೊಂದಿಯಲ್ಲಿ .ಇಂತ ಐತಿಹಾಸಿಕ ಹಿನ್ನಲೆಯುಳ್ಳ ನದಿ-ಬೆಟ್ಟಗಳ ಸಾಲುಗಳ, ರಾಮ-ಸೀತೆಯರು ನಡೆದಾಡಿದ ಆಂಜನೇಯ, ಶಬರೀ ಬಾಳಿದ ನೆಲವಿದು. ದೇಶದ ಪಂಚ ಸರೋವರಗಳಲ್ಲಿ ಒಂದಾದ ಪಂಪಾಸರೋವರ, ಅಂಜನಾದ್ರಿ ಬೆಟ್ಟ ಹೀಗೆ ಹಲವು ಪ್ರಖ್ಯಾತ ಸ್ಥಳಗಳಿದ್ದು ವಿವಿ ಸ್ಥಾಪನೆಗೆ ಪ್ರಾಶ್ಯಸ್ತವಾಗಿದೆ.
3000 ವರ್ಷ ಇತಿಹಾಸ ಇರುವಂತಹ ಹಿರೇಬೆಣಕಲ್ ಗ್ರಾಮದ ಶಿಲಾಯುಗದ ಸಮಾಧಿಗಳಿರುವ ಬೆಟ್ಟಕ್ಕೆ ಸಂಬಂಧಿಸಿದ ಏಳು ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಿ, ಅಳಿವಿನಂಚಿನಲ್ಲಿರುವ ಶಿಲಾಯುಗದ ಗೋರಿಗಳು ಮತ್ತು ಗುಹಾಚಿತ್ರಗಳನ್ನು ಸಂರಕ್ಷಿಸಿ ರಾಷ್ಟ್ರಮಟ್ಟದಲ್ಲಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕಾಗಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ ವೀರನಗೌಡ ಎಸ್ ಪಾಟೀಲ್, ಪ್ರಕಾಶ್ ಚಂದ್ ಚೋಪಡಾ, ಉಗಮ ರಾಜ್ ಜೈನ್, ವಾಗೇಶ ಕುಮಾರ, ಡಾ. ಎ.ಸತೀಶ ಕುಮಾರ, ಪ್ರತಾಪ್ ಸೂರ್ಯ ಶಾಸ್ತ್ರಿ, ನೇತ್ರಾಜಿ ಗುರುವಿನ ಮಠ, ಹೆಚ.ಎಂ.ಮಂಜುನಾಥ ವಕೀಲರು, ಬಿ.ಎಂ.ರಮೇಶ್ ಉಪಸ್ಥಿತರಿದ್ದರು.