Advertisement
2018ರ ಮೇನಲ್ಲಿ ಸರ್ಫಿಂಗ್ ಫೆಸ್ಟಿವಲ್ ನಡೆಸಲು ಕೆನರಾ ಸರ್ಫಿಂಗ್ ಮತ್ತು ವಾಟರ್‌ನ್ಪೋರ್ಟ್ಸ್ ಪ್ರಮೋಶನ್ ಕೌನ್ಸೆಲ್ ಮತ್ತು ಮಂತ್ರ ಸರ್ಫಿಂಗ್ ಕ್ಲಬ್ ಸಹಯೋಗದಲ್ಲಿ ಪ್ರಸ್ತಾವನೆ ಸಿದ್ಧಗೊಂಡಿತ್ತು. ಆದರೆ ಕಳೆದ ಮೇನಲ್ಲಿ ತೀವ್ರ ಮಳೆ ಇದ್ದ ಕಾರಣ ದ.ಕ. ಜಿಲ್ಲಾಡಳಿತ ಸರ್ಫಿಂಗ್ ನಡೆಸಲು ಅನುಮತಿ ನಿರಾಕರಿಸಿತ್ತು. ಈ ಬಾರಿ ಇಂಟರ್‌ನ್ಯಾಶನಲ್ ಸರ್ಫಿಂಗ್ ಫೆಸ್ಟಿವಲ್ ನಡೆಸಲು ಪ್ರಸ್ತಾವನೆ ಕಳುಹಿಸಿದರೂ ಕೂಡ ರಾಜ್ಯ ಸರಕಾರ ಚುನಾವಣೆ ನೆಪವೊಡ್ಡಿ ಪಂದ್ಯಾವಳಿಗೆ ಅನುಮತಿ ನೀಡಿಲ್ಲ. ಹೀಗಾಗಿ, ದ.ಕ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ, ಸರ್ಫಿಂಗ್ ನಕ್ಷೆಯಲ್ಲಿ ಗುರುತಿಸಲ್ಪಡುವ ಅವಕಾಶ ಎರಡನೇ ಬಾರಿಗೂ ಕೈತಪ್ಪಿ ಹೋದಂತಾಗಿದೆ.
2017ರಲ್ಲಿ ಸಸಿಹಿತ್ಲುವಿನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ರಾಷ್ಟ್ರೀಯ ಸರ್ಫಿಂಗ್ ಉತ್ಸವ ಏರ್ಪಡಿಸಲಾಗಿತ್ತು. ದೇಶ- ವಿದೇಶದ ಸರ್ಫಿಂಗ್ ಪಟುಗಳು ಇದರಲ್ಲಿ ಭಾಗವಹಿಸಿದ್ದರು. ಅಲ್ಲಿಯವರೆಗೆ ಯಾರಿಗೂ ಪರಿಚಯ ಇರದಿದ್ದ, ನದಿ-ಸಮುದ್ರ ಸೇರುವ ಸುಂದರ ಪ್ರದೇಶ ಸಸಿಹಿತ್ಲು ಆ ಕಾರಣದಿಂದ ಜನಪ್ರಿಯಗೊಂಡಿತ್ತು. ಅಂದಿನ ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಅವರು ಸರ್ಫಿಂಗ್ ಪಂದ್ಯಾವಳಿ ಉದ್ಘಾಟಿಸಿ ಪ್ರತೀವರ್ಷ ಸರ್ಫಿಂಗ್ ನಡೆಸುವ ಬಗ್ಗೆ ತಿಳಿಸಿದ್ದರು.
Related Articles
ಸರ್ಫಿಂಗ್ ಪಂದ್ಯಾವಳಿಗೆ ಸರಕಾರ ಈ ಬಾರಿ ಅನುಮತಿ ನೀಡಲಿಲ್ಲ. ಈ ಬಗ್ಗೆ ವಿಶೇಷ ಪ್ರಯತ್ನ ನಡೆಯಿತಾದರೂ ಅದು ಫಲ ಕಾಣಲಿಲ್ಲ. ಆದರೂ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಬದುಕು ಸಿಗಬೇಕು ಎಂಬ ಕಾರಣದಿಂದ ಈ ಬಾರಿ ಇನ್ನೊಂದು ವಿನೂತನ ಪ್ರಯತ್ನಕ್ಕೆ ಕೈಹಾಕಲಾಗಿದೆ. ಸರ್ಫಿಂಗ್ ಉತ್ಸವ ನಡೆಸುವ ಅವಕಾಶ ತಪ್ಪಿದರೂ ಸ್ಟಾಂಡಪ್ ಪ್ಯಾಡಲಿಂಗ್(ಸಪ್) ಸ್ಪರ್ಧೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸಸಿಹಿತ್ಲುವಿನ ಸಮುದ್ರ-ನದಿಯಲ್ಲಿ ಇದನ್ನು ನಡೆಸಲಾಗುವುದು ಎನ್ನುತ್ತಾರೆ ಸರ್ಫಿಂಗ್ ಪಂದ್ಯಾವಳಿ ಆಯೋಜನೆಯ ಪ್ರಮುಖರಾದ ಯತೀಶ್ ಬೈಕಂಪಾಡಿ.
Advertisement
ಅನುಮತಿ ಇಲ್ಲಈ ಬಾರಿ ಸರ್ಫಿಂಗ್ ಪಂದ್ಯಾವಳಿ ನಡೆಸಲು ಸರಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಪಂದ್ಯಾವಳಿ ನಡೆಸಲಾಗುತ್ತಿಲ್ಲ. ಮುಂದೆ ಸರಕಾರದ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
– ಶಶಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ