Advertisement

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಾದರಿಯ ಸ್ಟೇಡಿಯಂ

07:30 AM Mar 22, 2018 | |

ಮಂಗಳೂರು: ಸ್ಮಾರ್ಟ್‌ ಸಿಟಿಯಾಗಿ ಪರಿವರ್ತನೆಗೊಳ್ಳುವ ಮಂಗಳೂರಿಗೆ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್‌ ಕ್ರೀಡೆಯ ಸುಸಜ್ಜಿತ ಅಂತಾರಾಷ್ಟ್ರೀಯ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಮಾ. 22ರಂದು ಸಂಜೆ 4 ಗಂಟೆಗೆ ನಗರದ ಉರ್ವದಲ್ಲಿ ಶಿಲಾನ್ಯಾಸ ನೆರವೇರಲಿದೆ. 

Advertisement

ಶಾಸಕ ಜೆ.ಆರ್‌. ಲೋಬೋ ಅವರ ಕನಸಿನಂತೆ, ಉರ್ವ ಮಾರುಕಟ್ಟೆ ಸಮೀಪದಲ್ಲಿ ಸುಮಾರು 6.5 ಕೋ.ರೂ. ವೆಚ್ಚದಲ್ಲಿ ನೂತನ “ಮಂಗಳಾ ಬ್ಯಾಡ್ಮಿಂಟನ್‌ ಆ್ಯಂಡ್‌ ಕಬಡ್ಡಿ ಸ್ಟೇಡಿಯಂ’ ನಿರ್ಮಾಣಗೊಳ್ಳಲಿದ್ದು, ಕ್ರೀಡಾ ಖಾತೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. 

ಮಂಗಳೂರಿನಲ್ಲಿ  ಸದ್ಯ “ಶ್ರೀನಿವಾಸ್‌ ಮಲ್ಯ ಒಳಾಂಗಣ ಕ್ರೀಡಾಂಗಣ’ವಿದ್ದು, ಇದರಲ್ಲಿ 4 ಬ್ಯಾಡ್ಮಿಂಟನ್‌ ಕೋರ್ಟ್‌ಗಳಿವೆ. ಇಲ್ಲಿಗೆ ತರಬೇತಿ ಗೆಂದು ಬರುವ ಆಸಕ್ತ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದ್ದು, ಎಲ್ಲರಿಗೂ ತರಬೇತಿ ನೀಡಲು ಸಾಧ್ಯ ವಾಗುತ್ತಿಲ್ಲ. ಇದರಿಂದಾಗಿ ಅನೇಕ ಕ್ರೀಡಾಪಟುಗಳು ತರಬೇತಿ ಪಡೆಯುವ ಅವಕಾಶವನ್ನು ಕಳೆದು ಕೊಳ್ಳಬೇಕಾಗುತ್ತದೆ. 

ಈ ಸಮಸ್ಯೆಯನ್ನು ಮನಗಂಡು, ಮಂಗಳೂರಿನಲ್ಲಿ ಸುಸಜ್ಜಿತ  ಮಲ್ಟಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣ ಮಾಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಯುವಜನ ಮತ್ತು ಕ್ರೀಡಾ ಇಲಾಖೆ, ಸ್ಥಳೀಯ ಕ್ರೀಡಾಪಟುಗಳು, ಶಾಸಕ ಜೆ.ಆರ್‌. ಲೋಬೋ ಅವರು ಕೆಲವು ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಸರಕಾರ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದೆ. 

ಮಂಗಳೂರಿನಲ್ಲಿ ಸದ್ಯ ಸುಸಜ್ಜಿತ ಒಳಾಂಗಣ ಕಬಡ್ಡಿ ಕ್ರೀಡಾಂಗಣವಿಲ್ಲ. ಆದರೂ ಕರಾವಳಿ ಭಾಗದಲ್ಲಿ ಹಲವಾರು ಕಬಡ್ಡಿ ಆಟಗಾರರು ಸಾಧನೆ ಬರೆದಿದ್ದಾರೆ. ಕರಾವಳಿಯ ಸುಕೇಶ್‌ ಹೆಗ್ಡೆ, ರಿಶಾಂಕ್‌ ದೇವಾಡಿಗ, ಪ್ರಶಾಂತ್‌ ರೈ, ಸಚಿನ್‌, ಮಮತಾ ಪೂಜಾರಿ ಸೇರಿದಂತೆ ಅನೇಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಕಬಡ್ಡಿ ಆಟಗಾರರಿಗೆ ಹೊಸ ವೇದಿಕೆ ದೊರೆಯಬೇಕು ಎಂಬ ಆಶಯದಿಂದ ನೂತನ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. 

Advertisement

ಸ್ಟೇಡಿಯಂಗಳ ವೈಶಿಷ್ಟ್ಯ
ಅಂತಾರಾಷ್ಟ್ರೀಯ ಸ್ಥಾನಮಾನ ಹೊಂದಿರುವ ಒಳಾಂಗಣ ಕ್ರೀಡಾಂಗಣ ಉರ್ವದಲ್ಲಿ ನಿರ್ಮಾಣವಾಗಲಿದೆ. ಕಬಡ್ಡಿ, ಬ್ಯಾಡ್ಮಿಂಟನ್‌ ಆಟಕ್ಕೆ ಇಲ್ಲಿ ಅವಕಾಶವಿದೆ. ಸಿಂಥೆಟಿಕ್‌ ಕೋರ್ಟ್‌, ಅಂತಾರಾಷ್ಟ್ರೀಯ ಮಾದರಿಯ ಬೆಳಕಿನ ವ್ಯವಸ್ಥೆ, ಮಲ್ಟಿ ಜಿಮ್‌, ಲಾಕರ್‌ ವ್ಯವಸ್ಥೆ, ಆಡಳಿತ ಕಚೇರಿ ಬ್ಲಾಕ್‌, ಕಾನ್ಫರೆನ್ಸ್‌ ಹಾಲ್‌, ಅತಿಥಿ ಗೃಹ, ಕೆಫೆಟೇರಿಯಾ ವ್ಯವಸ್ಥೆ ಇರಲಿದೆ. 4,000 ಜನರು ಕುಳಿತುಕೊಳ್ಳಲು ಅವಕಾಶವಿರುವ ವೀಕ್ಷಕರ ಗ್ಯಾಲರಿ ಹಾಗೂ ಕಬಡ್ಡಿ ವೀಕ್ಷಣೆಗೆ 1,500 ಜನರು ಕುಳಿತುಕೊಳ್ಳುವ ಗ್ಯಾಲರಿ ವ್ಯವಸ್ಥೆ ಈ ಸ್ಟೇಡಿಯಂನಲ್ಲಿರಲಿದೆ ಎಂದು ಶಾಸಕ ಜೆ.ಆರ್‌.ಲೋಬೋ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next