Advertisement

ವಿಶ್ವ ವಿವಿ ಆ್ಯತ್ಲೆಟಿಕ್ಸ್‌ : ದ್ಯುತಿ ಚಿನ್ನದ ದಾಖಲೆ

12:26 AM Jul 11, 2019 | Sriram |

ನಪೊಲಿ (ಇಟಲಿ): ಭಾರತದ ಶ್ರೇಷ್ಠ ಓಟಗಾರ್ತಿ ದ್ಯುತಿ ಚಂದ್‌ ಇಟಲಿಯಲ್ಲಿ ನಡೆದ ವಿಶ್ವ ವಿಶ್ವವಿದ್ಯಾನಿಲಯ ಕೂಟದ 100 ಮೀ. ವೇಗದ ಓಟದಲ್ಲಿ ದಾಖಲೆಯ ಚಿನ್ನದ ಪದಕ ಗೆದ್ದಿದ್ದಾರೆ. 11.32 ಸೆಕೆಂಡ್ಸ್‌ ಗಳಲ್ಲಿ ಗುರಿ ತಲುಪಿ ಹಲವಾರು ದಾಖಲೆ ಬರೆದಿದ್ದಾರೆ.

Advertisement

ಜಾಗತಿಕ ಮಟ್ಟದ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಆ್ಯತ್ಲೀಟ್‌ ಎಂಬುದು ದ್ಯುತಿ ಸಾಧನೆ. ಈ ಕೂಟದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಹಾಗೂ ಈ ಕೂಟದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಪದಕ ಗೆದ್ದ ಭಾರತದ 2ನೇ ಸ್ಪರ್ಧಿ. 2005ರ ವಿಶ್ವ ವಿವಿ ಕೂಟದ ಪುರುಷರ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಭಾರತದ ಇಂದ್ರಜಿತ್‌ ಸಿಂಗ್‌ ಚಿನ್ನ ಗೆದ್ದಿದ್ದರು. ಮಾತ್ರವಲ್ಲ, ದ್ಯುತಿ ಜಾಗತಿಕ ಮಟ್ಟದ ವೇಗದ ಓಟದಲ್ಲಿ ಚಿನ್ನ ಗೆದ್ದ ಭಾರತದ 2ನೇ ಸಾಧಕಿಯಾಗಿದ್ದಾರೆ. ಹಿಮಾ ದಾಸ್‌ ಕಳೆದ ವರ್ಷ ವಿಶ್ವ ಕಿರಿಯರ ಆ್ಯತ್ಲೆಟಿಕ್ಸ್‌ ಕೂಟದ 400 ಮೀ. ಓಟದಲ್ಲಿ ಚಿನ್ನ ಜಯಿಸಿದ್ದರು.

23 ವರ್ಷದ ದ್ಯುತಿ 11.32 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು. ರೇಸ್‌ನ ಆರಂಭದಿಂದಲೂ ದ್ಯುತಿ ಮುನ್ನಡೆ ಕಾಯ್ದುಕೊಂಡು ಚಿನ್ನದ ನಗು ಬೀರಿದರು. ಸ್ವಿಜರ್ಲೆಂಡ್‌ನ‌ ಡೆಲ್‌ ಪಾಂಟ್‌ (11.33 ಸೆಕೆಂಡ್ಸ್‌) ಬೆಳ್ಳಿ ಪದಕ, ಜರ್ಮನಿಯ ಲಿಸಾ ಕ್ವಾಯಿ (11.39 ಸೆಕೆಂಡ್ಸ್‌) ಕಂಚಿನ ಪದಕವನ್ನು ಪಡೆದುಕೊಂಡರು.

ವಿವಾದ ಬಳಿಕ ಸಿಡಿದೆದ್ದ ದ್ಯುತಿ
ಕೆಲವು ದಿನಗಳ ಹಿಂದೆ ದ್ಯುತಿ ಸಲಿಂಗಕಾಮಿ ಎನ್ನುವ ಸುದ್ದಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎಲ್ಲವನ್ನೂ ಮೆಟ್ಟಿನಿಂತು ಸಾಧನೆಯಿಂದ ಗಮನ ಸೆಳೆದಿದ್ದಾರೆ. “ಕಠಿನ ಪರಿಶ್ರಮ, ಹಿರಿಯರ ಆಶೀರ್ವಾದದ ಬಲದಿಂದ ವಿಶ್ವ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿದೆ’ ಎಂದು ಗೆಲುವಿನ ಅನಂತರ ದ್ಯುತಿ ಪ್ರತಿಕ್ರಿಯಿಸಿದ್ದಾರೆ.

“ದ್ಯುತಿ, ನಿಮ್ಮ ಸಾಧನೆಯಿಂದ ನಮಗೆಲ್ಲ ಹೆಮ್ಮೆಯಾಗಿದೆ. ನಿಮ್ಮ ಸಾಧನೆ ಹೀಗೆಯೇ ಮುಂದುವರಿಯಲಿ, ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆಲ್ಲುವಂತಾಗಲಿ’
ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

Advertisement

“ಅದ್ಭುತ ಆ್ಯತ್ಲೀಟ್‌ಒಬ್ಬರಿಂದ ಕಂಡುಬಂದ ಅತ್ಯದ್ಭುತ ಸಾಧನೆ ಇದಾಗಿದೆ. ಅಭಿ ನಂದನೆಗಳು… ಚಿನ್ನದ ಪದಕಕ್ಕೆ ನೀವು ಅರ್ಹರು’.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next