Advertisement

Mangaluru ಇಂದಿನಿಂದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟ “ಶೌರ್ಯ’

12:24 AM Sep 06, 2024 | Team Udayavani |

ಮಂಗಳೂರು: ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೋ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ “ಶೌರ್ಯ’ ಕರಾಟೆ ಚಾಂಪಿಯನ್‌ಶಿಪ್‌ ನಗರದ ಕುಲಶೇಖರ ಚರ್ಚ್‌ ಮೈದಾನದಲ್ಲಿ ಸೆ. 6, 7 ಮತ್ತು 8ರಂದು ನಡೆಯಲಿದ್ದು, ದೇಶ- ವಿದೇಶದ 1,500ಕ್ಕೂ ಅಧಿಕ ಮಂದಿ ದೇಶ-ವಿದೇಶದ ಕರಾಟೆ ಪಟುಗಳು ಭಾಗವಹಿಸಲಿದ್ದಾರೆ.

Advertisement

ಈ ಕುರಿತು ವಿಧಾನಸಭಾಧ್ಯಕ್ಷ ಹಾಗೂ ಕರಾಟೆ ಚಾಂಪಿಯನ್‌ಶಿಪ್‌ ಚೀಫ್‌-ಡಿ-ಮಿಶನ್‌ ಯು.ಟಿ. ಖಾದರ್‌ ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಲೇಶ್ಯಾ, ಜೋರ್ಡಾನ್‌, ಜಪಾನ್‌, ಶ್ರೀಲಂಕಾ, ತಾಂಜಾನಿಯಾ ಮುಂತಾದ ದೇಶಗಳಿಂದ ತಂಡಗಳು ಭಾಗವಹಿಸುತ್ತಿವೆ. ಮುಖ್ಯ ತೀರ್ಪು ಗಾರರು ಕರಾಟೆಯ ಕೇಂದ್ರಸ್ಥಾನ ಜಪಾನ್‌ನಿಂದ ಆಗಮಿಸುತ್ತಿದ್ದಾರೆ.

ವಿಜೇತರಿಗೆ ಸರ್ಟಿಫಿಕೆಟ್‌ ಹಾಗೂ ಪದಕ ನೀಡಲಾಗುವುದು. ಸೆ.6ರಂದು 6ರಿಂದ 14 ವರ್ಷದೊಳಗಿನ ಎಲ್ಲ ವಿಧದ ಕಲರ್‌ ಬೆಲ್ಟ್‌ಗಳ ಕರಾಟೆ ಪಟುಗಳಿಗೆ, 7ರಂದು 14 ವರ್ಷ ಮೇಲ್ಪಟ್ಟವರಿಗೆ ಪಂದ್ಯಾಟ ನಡೆಯಲಿದೆ. 8ರಂದು ಕಪ್ಪುಬೆಲ್ಟ್ ನವರ ಪಂದ್ಯಾಟ ನಡೆಯಲಿವೆ.

ಒಟ್ಟಾರೆ 3 ಕೋ.ರೂ. ವೆಚ್ಚವಾಗ ಲಿದ್ದು, ಸರಕಾರದಿಂದ 1 ಕೋಟಿ ರೂ. ನೆರವು ಸಿಕ್ಕಿದೆ. ಭಾಗವಹಿಸುವ ಕರಾಟೆ ತಂಡಗಳಿಗೆ ಉಚಿತವಾಗಿ ವಸತಿ, ಊಟೋಪಹಾರ, ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ಕರಾಟೆಪಟುಗಳಿಗೆ ವಿಮಾನ, ರೈಲ್ವೇ, ಬಸ್‌ ನಿಲ್ದಾಣಗಳಿಂದ ಕ್ರೀಡಾ ತಾಣದ ವರೆಗೆ ಉಚಿತ ಪ್ರಯಾಣ, ಊಟ ತಿಂಡಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಪಂದ್ಯಾವಳಿಯ ಆರಂಭದ ಮೊದಲು ಕರಾವಳಿ ಕರ್ನಾಟಕದ ಬಗ್ಗೆ ಯಕ್ಷಗಾನ, ಜಾನಪದ ಗೀತೆ ಇತ್ಯಾದಿಗಳನ್ನು ದೃಶ್ಯಮಾಧ್ಯಮ ಮೂಲಕ ಪ್ರದರ್ಶಿಸಲಾಗುವುದು. ಪಂದ್ಯಾಟದ ಬಳಿಕ 2 ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್‌ ಸಾಂಸ್ಕೃತಿಕ ತಂಡ ನಡೆಸಿಕೊಡಲಿದೆ ಎಂದರು.

ಪಂದ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೆ.6 ರಂದು ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಸ್ಪೀಕರ್‌ ಯು.ಟಿ.ಖಾದರ್‌, ಬಿಷಪ್‌ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ, ಡಾ|ಎ. ಸದಾನಂದ ಶೆಟ್ಟಿ, ಶಾಸಕರಾದ ವೇದ ವ್ಯಾಸ ಕಾಮತ್‌, ಎನ್‌.ಎ.ಹ್ಯಾರಿಸ್‌ ಮುಂತಾದವರು ಪಾಲ್ಗೊಳ್ಳುವರು.

ಸಂಘಟನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ., ಪ್ರಮುಖರಾದ ರಾಜಗೋಪಾಲ್‌ ರೈ, ಕೆ.ತೇಜೋಮಯ, ವಂ| ಕ್ಲಿಫರ್ಡ್‌ ಫೆರ್ನಾಂಡಿಸ್‌, ರಾಯ್‌ ಕ್ಯಾಸ್ಟಲಿನೊ, ಸೂರಜ್‌ ಕುಮಾರ್‌ ಶೆಟ್ಟಿ, ಸುರೇಶ್‌ ಕುಮಾರ್‌ ಶೆಟ್ಟಿ, ಡಾ| ರಾಹುಲ್‌ ಟಿ.ಜಿ. ಉಪಸ್ಥಿತರಿದ್ದರು.

ಮೊದಲ ಬಾರಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿದೆ ಎಂದು ಯು.ಟಿ.ಖಾದರ್‌ ತಿಳಿಸಿದರು.

ಕೋರ್ಡೆಲ್‌ ಹಾಲ್‌ನ ಒಳಭಾಗವನ್ನು ಮ್ಯಾಟ್‌ ಹಾಕಿ ಕರಾಟೆ ಪಂದ್ಯಾಟಗಳಿಗೆ ಸಜ್ಜುಗೊಳಿಸಲಾಗಿದೆ. 1,500ರಷ್ಟು ಕರಾಟೆ ಪಟುಗಳು, ಜತೆಗೆ ತೀರ್ಪುಗಾರರು, ಟೀಂ ಮ್ಯಾನೇಜರ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಏಕಕಾಲದಲ್ಲಿ 7ರಿಂದ 9 ಪಂದ್ಯಗಳನ್ನು ನಡೆಸಬಹುದಾಗಿದೆ. ವೈಯುಕ್ತಿಕ ಕಟಾ, ಟೀಂ ಕಟಾ, ಕುಮಿಟೆ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುರೇಂದ್ರ ತಿಳಿಸಿದರು.

ಬರಲಿದ್ದಾರೆ ವಿಶ್ವ ಚಾಂಪಿಯನ್‌
ಜೋರ್ಡಾನ್‌ ತಂಡದಲ್ಲಿ ಮೂರು ಬಾರಿ ಸತತ ವಿಶ್ವ ಚಾಂಪಿಯನ್‌ ಆಗಿರುವ ಮೊಹಮ್ಮದ್‌ ಅಲ್‌ ಜಾಫರ್‌ ಪಾಲ್ಗೊಳ್ಳಲಿದ್ದಾರೆ. ಈಗಲೂ ಆನ್‌ಲೈನ್‌ ಮೂಲಕ ಕರಾಟೆಗೆ ನೋಂದಾಯಿಸಲು ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.