ಗದಗ: ಗಂಡು ಮಗುವಿನಂತೆ ಹೆಣ್ಣು ಮಗುವಿಗೂ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಹೆಣ್ಣು, ಗಂಡೆಂಬ ತಾರತಮ್ಯ ಮಾಡದೇ, ಇಬ್ಬರನ್ನೂ ಸಮನಾಗಿ ಕಾಣಬೇಕು ಎಂದು ಜಿಪಂ ಸಿಇಒ ಡಾ| ಆನಂದ ಕೆ. ಹೇಳಿದರು.
ಜಿಪಂ ಸಭಾಂಗಣದಲ್ಲಿ “ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ. ಪ್ರತಿ ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸಿ ಉತ್ತೇಜನನೀಡಬೇಕು. ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಸಮಾಜದಲ್ಲಿ ಹೆಣ್ಣು ಮಗುವಿನ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಜನರು ಹೊರ ಬರಬೇಕು. ಹೆಣ್ಣು ಮನೆಯ ಹುಣ್ಣಲ್ಲ, ಹೊನ್ನುಆಗಿದ್ದು, ಹೆಣ್ಣು ಮಕ್ಕಳನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿ, ಹಿಂದಿನ ಪುರುಷ ಪ್ರಧಾನ ಸಮಾಜದಿಂದ ಮುಕ್ತಿ ಹೊಂದಿ, ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರಪಾತ್ರ ಬಹುಮಖ್ಯವಾಗಿದ್ದು, ಹೆಣ್ಣು ಮಗುವೆಂಬ ಕೀಳರಿಮೆಯಿಂದ ಹೊರಬರಬೇಕು. ಹೆಣ್ಣು ಮಗು ಉಳಿಸಿ ಪ್ರೋತ್ಸಾಹಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಮಾತನಾಡಿ, ಜಗತ್ತಿನಾದ್ಯಂತ ಗಂಡು ಮತ್ತು ಹೆಣ್ಣಿನ ನಡುವಿನ ಜನನ ಪ್ರಮಾಣದ ಅಂತರ ಕಾಪಾಡುವುದೇ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಉದ್ದೇಶವಾಗಿದೆ. ಈ ಬಾರಿಯ ಘೋಷವಾಕ್ಯ “ಹೆಣ್ಣು ಮಕ್ಕಳು ನನ್ನ ಧ್ವನಿ, ನನ್ನ ಸಮಾನ’ ಆಗಿದೆ. ಹೆಣ್ಣುಮಕ್ಕಳನ್ನು ಪೋಷಿಸುವ ಮೂಲಕ ಹೆಣ್ಣು ಜೀವ ಉಳಿಸುವುದು ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ. ಮಾತನಾಡಿ, ಹೆಣ್ಣು ಮಗುವಿನ ಜನನ ಪ್ರಮಾಣ ಹೆಚ್ಚಿಸುವುದಕ್ಕಾಗಿ 2008-09ನೇ ಸಾಲಿನಿಂದ ಅಭಿಯಾನ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಮಗುವಿನ ಜನನ ಪ್ರಮಾಣ2018-19ರಲ್ಲಿ ಸಾವಿರಕ್ಕೆ 976, 2019-20ರಲ್ಲಿ 948, 2020-21ನೇ ಸಾಲಿನ ಮಧ್ಯಂತರದಲ್ಲಿ 990 ಹೆಣ್ಣು ಜನನ ಪ್ರಮಾಣವಿರುವುದು ಆಶಾದಾಯಕ ಎಂದು ಹೇಳಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಬಿ.ಎಂ. ಗೊಜನೂರ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ನಿರೂಪಣಾಧಿ ಕಾರಿ ಎಚ್.ಎಚ್. ಕುಕನೂರ, ವಯಸ್ಕರ ಶಿಕ್ಷಣಾಧಿ ಕಾರಿ ಮಂಗಳಾ ತಾಪಸ್ಕರ್ ಭಾಗವಹಿಸಿದ್ದರು.