Advertisement

ಅಂತಾರಾಷ್ಟ್ರೀಯ ಡ್ರಗ್ಸ್‌ ಉತ್ಪಾದಕ, ಪೆಡ್ಲರ್‌ ಬಂಧನ

11:51 AM Nov 20, 2020 | Suhan S |

ಬೆಂಗಳೂರು: ರಾಜ್ಯದ ಕಲಬುರಗಿಯಿಂದ ದಕ್ಷಿಣ ಭಾರತ ಮತ್ತು ಆಗ್ನೇಯ ದೇಶಗಳಿಗೆ ಮಾದಕ ವಸ್ತು ಕೆಟಾಮಿನ್‌ ಹೈಡ್ರೋಕ್ಲೊರೈಡ್‌ ಸರಬರಾಜು ಆಗುತ್ತಿದ್ದ ಸ್ಫೋಟಕ ವಿಚಾರ ಬೆಂಗಳೂರು ಕಂದಾಯ ಗುಪ್ತಚರ  ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಈ ಮೂಲಕ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಡ್ರಗ್ಸ್‌ ಪೆಡ್ಲರ್‌ವೊಬ್ಬನ ಬಂಧನವಾಗಿದೆ. ಮಹಾರಾಷ್ಟ್ರದ ಮೂಲದ ಜಿಗ್ನೇಶ್‌ ಭಾನುಶಾಲಿ (48)ಯನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಐದು ವರ್ಷಗಳಿಂದ ಮಾದಕ ವಸ್ತು ಕೆಟಾಮಿನ್‌ ಹೈಡ್ರೋಕ್ಲೊರೈಡ್‌ ಅನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ವಿಚಾರಣೆ ಬಳಿಕಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆಕಳುಹಿಸಲಾಗಿದೆ.

5 ವರ್ಷಗಳಿಂದ ಇದೇ ವೃತ್ತಿ: ಮಹಾರಾಷ್ಟ್ರದ ಥಾಣೆ ಮೂಲದ ಜಿಗ್ನೇಶ್‌ ಭಾನುಶಾಲಿ ಮಹಾರಾಷ್ಟ್ರ- ಕರ್ನಾಟಕ ಗಡಿಭಾಗ ಒಸ್ಮಾನಾಬಾದ್‌ ಒಮೆರ್ಗಾ ಜಿಲ್ಲೆಯಲ್ಲಿರುವ ಎಂಐಡಿಸಿ ಎಂಬ ಕೈಗಾರಿಕಾ ಪ್ರದೇಶದಲ್ಲಿ ಪ್ರಗತಿ ಎಲೆಕ್ಟ್ರಿಕಲ್‌ ವರ್ಕ್‌ ಎಂಬ ನಕಲಿ ಕಾರ್ಖಾನೆ ಸ್ಥಾಪಿಸಿದ್ದಾನೆ. ಆದರೆ, ಎಲೆಕ್ಟ್ರಾನಿಕ್‌ ವಸ್ತುಗಳ ಬದಲಿಗೆ ಕಾರ್ಖಾನೆಯಲ್ಲಿ ಮಾದಕ ವಸ್ತು ಕೆಟಾಮಿನ್‌ ಹೈಡ್ರೋಕ್ಲೊರೈಡ್‌ ಉತ್ಪಾದಿಸಿದ್ದ. ಐದು ವರ್ಷಗಳಿಂದ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿಯಲ್ಲಿ ಪ್ರಧಾನ ಘಟಕ: ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿದ್ದ ಮಾದಕ ವಸ್ತುವನ್ನು ರಾಜ್ಯದ ಕಲಬುರಗಿಯಲ್ಲಿರುವ ತನ್ನ ಪ್ರಧಾನ ಘಟಕಕ್ಕೆ ಕಳುಹಿಸುತ್ತಿದ್ದ. ಅಲ್ಲಿಂದ ಬೆಂಗಳೂರು,ಕೇರಳ, ಚೆನ್ನೈ, ಕೊಚ್ಚಿ, ಹೈದರಬಾದ್‌ ಹಾಗೂ ಇತರೆಡೆ ಸರಬರಾಜು ಮಾಡುತ್ತಿದ್ದ. ಅಲ್ಲದೆ, ಆಗ್ನೇಯ ದೇಶಗಳಾದ ಥೈಲ್ಯಾಂಡ್‌, ಸಿಂಗಾಪುರ,ಮಲೇಶಿಯಾಗಳಿಗೂ ಪೂರೈಕೆ ಮಾಡುತ್ತಿದ್ದ ಎಂಬುದು ಡಿಆರ್‌ಐ ತನಿಖೆಯಲ್ಲಿ ಬಯಲಾಗಿದೆ.ಕಲಬುರಗಿಯಲ್ಲಿ ಎಲ್ಲಿ ಘಟಕ ನಡೆಸ್ತುತಿದ್ದ ಎಂಬ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಕಚೇರಿ ಮೇಲೆ ದಾಳಿ: ಈ ಮಧ್ಯೆ ಡಿಆರ್‌ಐ 2018ರ ಜನವರಿ 11ರಂದು ಕಲಬುರಗಿಯಿಂದ ಹೈದರಾ ಬಾದ್‌ಗೆ ಹೋಗುತ್ತಿದ್ದ ಕಾರೊಂದನ್ನು ಪರಿಶೀಲಿಸಿದಾಗ 22.90 ಕೋಟಿ ರೂ. ಮೌಲ್ಯದ 45.9 ಕೆ.ಜಿ. ಕೆಟಾಮಿನ್‌ ಹೈಡ್ರೋಕ್ಲೊರೈಡ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಕಾರ್ಖಾನೆ ಮೇಲೆ ಜ.12ರಂದು ದಾಳಿ ನಡೆಸಲಾಗಿತ್ತು. ಆಗ ಯಾವುದೇ ಮಾದಕ ವಸ್ತು ಪತ್ತೆಯಾಗಿರಲಿಲ್ಲ.

Advertisement

ಬಳಿಕ ನಿರಂತರ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು 2018ರ ಜೂನ್‌ 6 ರಂದು ಮತ್ತೂಮ್ಮೆ ದಾಳಿ ನಡೆಸಿದ್ದರು. ಆಗ 1.9 ಕೋಟಿ ರೂ. ಮೌಲ್ಯದ 9.7 ಕೆ.ಜಿ. ಕೆಟಾಮಿನ್‌ ಪತ್ತೆಯಾಗಿತ್ತು. ಜತೆಗೆ ಮೂವರು ನೌಕರರನ್ನು ಬಂಧಿಸಲಾಗಿತ್ತು. ಈ ವಿಚಾರ ತಿಳಿದ ಆರೋಪಿ ಪರಾರಿ ಯಾಗಿದ್ದ. ಮೂವರು ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಆರೋಪಿ ಥಾಣೆ ಮೂಲದವನು ಎಂಬುದು ಗೊತ್ತಾಗಿತ್ತು. ಈ ಸಂಬಂಧ ಆತನ ಥಾಣೆ ಮನೆ ಮೇಲೆ ದಾಳಿ ನಡೆಸಿದಾಗ ಆರೋಪಿ ದೇಶಬಿಟ್ಟು ಹೋಗಿರುವುದು ಗೊತ್ತಾಗಿತ್ತು. ನಂತರ ಆರೋಪಿಯ ಚಟುವಟಿಕೆಗಳ ಮೇಲೆ ಎರಡು ವರ್ಷಗಳ ಕಾಲ ನಿರಂತರ ನಿಗಾವಹಿಸಲಾಗಿತ್ತು. ಈತ ಥೈಲ್ಯಾಂಡ್‌, ಮಲೇಶಿಯಾ, ಸಿಂಗಾಪುರದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಈತನ ವಿರುದ್ಧ  ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

ಲುಕ್‌ ಔಟ್‌ ನೋಟಿಸ್‌ ಜಾರಿ: ಎರಡೂವರೆ ವರ್ಷಗಳ ಬಳಿಕ ಆರೋಪಿ ದುಬೈನಿಂದ ಬೆಂಗಳೂರು ಮೂಲಕ ಮಹಾರಾಷ್ಟ್ರಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡು ಕಳೆದ ಶುಕ್ರವಾರ ದುಬೈನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಿ ನಿಲ್ದಾಣಕ್ಕೆ ಬರುತ್ತಿದ್ದ. ಈ ಮಾಹಿತಿ ವಲಸೆ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿತ್ತು. ವಿಮಾನ ನಿಲ್ದಾಣಕ್ಕೆ ಬಂದಾಗ ಅನುಮಾನದ ಮೇರೆಗೆ ಪಾಸ್‌ಪೋರ್ಟ್‌ ಸ್ಕ್ಯಾನ್‌ ಮಾಡಿದಾಗ ಈತನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಯನ್ನು ಬಂಧಿಸಿ ನಾಲ್ಕೈದು ದಿನಗಳ ಕಾಲ ವಿಚಾರಣೆ ನಡೆಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಪಾಸಣೆ ಇಲ್ಲ ಎಂದು ಬಂದು ಲಾಕ್‌ :  ವಿಶ್ವಾದ್ಯಂತ ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್‌ ಹಾಕಲಾಗಿತ್ತು. ಹೀಗಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಜಿಗ್ನೇಶ್‌, ಕೋವಿಡ್  ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ಇರುವುದಿಲ್ಲ ಎಂದು ಭಾವಿಸಿ ದುಬೈನಿಂದ ಬೆಂಗಳೂರಿಗೆ ಬಂದಿದ್ದಾನೆ. ಈಮಾಹಿತಿ ಪಡೆದುಕೊಂಡು ವಲಸೆ ಅಧಿಕಾರಿಗಳು ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಜಿಗ್ನೇಶ್‌ ತನ್ನ ವಿರುದ್ಧ ಡಿಆರ್‌ಐ ಅಧಿಕಾರಿಗಳು ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎಂಬುದು ಆತನಿಗೆ ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆಗ್ನೇಯ ಏಷ್ಯಾದಲ್ಲಿ ದೊಡ್ಡ ಸಂಪರ್ಕ :  ಜಿಗ್ನೇಶ್‌ ಭಾನುಶಾಲಿ ತನ್ನ ಕಾರ್ಖಾನೆಯಲ್ಲಿ ಮಾದಕ ವಸ್ತು ಉತ್ಪಾದಿಸಿ ಕಲಬುರಗಿ ಮೂಲಕ ದೇಶ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದು, ಈ ಮೂಲಕ ಆರೋಪಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್‌ ಡೀಲರ್‌ ಮತ್ತು ಪೆಡ್ಲರ್‌ಗಳ ದೊಡ್ಡಕೂಟವನ್ನೇ ರಚಿಸಿಕೊಂಡಿದ್ದಾನೆ. ಬಹುದೊಡ್ಡ ಮಟ್ಟದ ಸಂಪರ್ಕಹೊಂದಿದ್ದಾನೆ ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next