Advertisement
ಪತ್ರಿಕಾಗೋಷ್ಠಿಯಲ್ಲಿ ತಾಯಿ ಶಬ್ನಂ, ಪತ್ನಿ ಹ್ಯಾಜೆಲ್ ಕೀಚ್ ಕೂಡ ಉಪಸ್ಥಿತರಿದ್ದರು. ಮಗನ ಮಾತು ಆಲಿಸುತ್ತ ಶಬ್ನಂ ಕೂಡ ಕಣ್ಣೀರು ಸುರಿಸಿದ ದೃಶ್ಯ ಕಂಡುಬಂತು
“ಕಳೆದ 25 ವರ್ಷಗಳ ಕಾಲ ನಾನು ಈ 22 ಯಾರ್ಡ್ ಎಂಬ ಪರಿಮಿತಿಯೊಳಗೆ ಬದುಕನ್ನು ಕಂಡುಕೊಂಡಿದ್ದೆ. ಇದರಲ್ಲಿ 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೆ. ಈಗ ಇಲ್ಲಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜತೆಗೆ ಐಪಿಎಲ್‌ಗೂ ಗುಡ್‌ಬೈ ಹೇಳುತ್ತಿದ್ದೇನೆ. ಕೆಲವು ವಿದೇಶಿ ಲೀಗ್‌ಗಳಲ್ಲಷ್ಟೇ ಆಡುವುದು ನನ್ನ ಯೋಜನೆ’ ಎನ್ನುವ ಮೂಲಕ 37ರ ಹರೆಯದ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ನಿರ್ಗಮನವನ್ನು ಸಾರಿದರು. ಭಾರತೀಯ ಕ್ರಿಕೆಟಿನ ಸಾಹಸಮಯ ಅಧ್ಯಾಯವೊಂದು ಕೊನೆಗೊಂಡಿತು. “ನಾನು ಇಂದು ಇಲ್ಲಿ ಇದ್ದೇನೆಂದರೆ ಅದಕ್ಕೆ ಕ್ರಿಕೆಟೇ ಕಾರಣ. ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಭಾರತದ ಪರ 400 ಪಂದ್ಯಗಳನ್ನು ಆಡಿದ ನಾನು ನಿಜಕ್ಕೂ ಅದೃಷ್ಟಶಾಲಿ. ಕ್ರಿಕೆಟ್ ಆರಂಭಿಸಿದಾಗ ನಾನು ಇದನ್ನೆಲ್ಲ ಊಹಿಸಿಯೇ ಇರಲಿಲ್ಲ. ಇನ್ನು ಮುಂದೆ ಕ್ರಿಕೆಟ್ ಹೊರತಾದ ಬದುಕನ್ನು ಆಸ್ವಾದಿಸಬೇಕು…’ ಎಂದರು.
Related Articles
“ಕ್ರಿಕೆಟ್‌ನೊಂದಿಗೆ ನನ್ನದು ವಿಶಿಷ್ಟ ಸಂಬಂಧ. ಛಲ, ಹೋರಾಟ, ಪತನ, ಇಲ್ಲಿಂದ ಮತ್ತೆ ಮೇಲೆದ್ದು ನಿಲ್ಲುವುದನ್ನೆಲ್ಲ ಹೇಳಿಕೊಟ್ಟದ್ದೇ ಈ ಕ್ರಿಕೆಟ್. ನಾನು ಯಶಸ್ಸು ಕಂಡದ್ದಕ್ಕಿಂತ ಬಿದ್ದದ್ದೇ ಹೆಚ್ಚು. ಆದರೆ ಕೊನೆಯ ಉಸಿರಿರುವ ತನಕವೂ ಕೈಚೆಲ್ಲಬಾರದು ಎಂಬ ಬದುಕಿನ ಬಹು ದೊಡ್ಡ ಪಾಠವನ್ನು ಈ ಕ್ರಿಕೆಟ್ ಹೇಳಿಕೊಟ್ಟಿತು. ನನ್ನ ದೇಶವನ್ನು ಪ್ರತಿನಿಧಿಸಲಾರಂಭಿಸಿದ ಬಳಿಕ ಎಲ್ಲವನ್ನೂ ನಾನು ಕ್ರಿಕೆಟಿಗೆ ಅರ್ಪಿಸಿ ಬಿಟ್ಟೆ…’ ಎಂದು ಯುವಿ ಹೇಳುತ್ತ ಹೋದರು.
Advertisement
ಕ್ರಿಕೆಟಿನ ಸ್ಮರಣೀಯ ಗಳಿಗೆತಮ್ಮ ಕ್ರಿಕೆಟ್ ಬದುಕಿನ ಸ್ಮರಣೀಯ ಹಾಗೂ ಕಹಿಗಳಿಗೆಗಳನ್ನೂ ಯುವರಾಜ್ ಸಿಂಗ್ ಹೇಳಿಕೊಂಡರು. ಇವುಗಳೆಂದರೆ, “2011ರ ವಿಶ್ವಕಪ್ ಗೆಲುವು-4 ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವ, ಇಂಗ್ಲೆಂಡ್ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸಿಡಿಸಿದ 6 ಸಿಕ್ಸರ್, 2004ರಲ್ಲಿ ಪಾಕಿಸ್ಥಾನ ವಿರುದ್ಧ ಲಾಹೋರ್‌ನಲ್ಲಿ ಬಾರಿಸಿದ ಟೆಸ್ಟ್ ಬಾಳ್ವೆಯ ಮೊದಲ ಶತಕ… ಎಲ್ಲವೂ ಕನಸಿನಂತಿದೆ’ ಎಂದು ಹೇಳಿದರು. “ಶ್ರೀಲಂಕಾ ಎದುರಿನ 2014ರ ಟಿ20 ಫೈನಲ್‌ನಲ್ಲಿ 21 ಎಸೆತಗಳಿಂದ 11 ರನ್ ಗಳಿಸಿದ್ದು ಕೆಟ್ಟ ಇನ್ನಿಂಗ್ಸ್ ಆಗಿತ್ತು. ಆಗಲೇ ನನ್ನ ಕ್ರಿಕೆಟ್ ಮುಗಿಯಿತು ಎಂಬ ತೀರ್ಮಾನಕ್ಕೆ ಬಂದಿದ್ದೆ’ ಎಂದರು. ನೆಚ್ಚಿನ ಕ್ರಿಕೆಟಿಗರನ್ನೂ ಈ ಸಂದರ್ಭದಲ್ಲಿ ಯುವರಾಜ್ ಹೆಸರಿಸಿದರು. “ಸೌರವ್ ಗಂಗೂಲಿ ಮತ್ತು ಧೋನಿ ನನ್ನ ನೆಚ್ಚಿನ ನಾಯಕರು. ಮುರಳೀಧರನ್ ಮತ್ತು ಮೆಕ್‌ಗ್ರಾತ್ ನಾನು ಎದುರಿಸಿದ ಕಠಿನ ಬೌಲರ್‌ಗಳಾಗಿದ್ದರು’ ಎಂದರು. ಕ್ಯಾನ್ಸರ್ ಗೆದ್ದ ಧೀರ
ಯುವರಾಜ್ ಸಿಂಗ್ ಓರ್ವ ಧೀರೋದಾತ್ತ ಕ್ರೀಡಾಳು ಎಂಬುದಕ್ಕೆ ಅವರು ಕ್ಯಾನ್ಸರ್ ಗೆದ್ದ ಸಾಹಸವೇ ಸಾಕ್ಷಿ. 2011ರ ವಿಶ್ವಕಪ್ ವೇಳೆಯಲ್ಲೇ ಈ ಮಾರಿ ಅವರನ್ನು ಆಕ್ರಮಿಸಿತ್ತು. ಫೈನಲ್ ಪಂದ್ಯದ ಹಿಂದಿನ ದಿನ ಅವರು ರಕ್ತ ಕಾರಿದ್ದರು ಎಂಬುದೂ ಸುದ್ದಿಯಾಗಿತ್ತು. ಈ ಬಗ್ಗೆ ಯುವರಾಜ್ ಪ್ರತಿಕ್ರಿಯಿಸಿದ್ದು ಹೀಗೆ: “ಆ ರೋಗಕ್ಕೆ ಶರಣಾಗುವುದಿಲ್ಲ, ಅದಕ್ಕೆ ನನ್ನನ್ನು ಸೋಲಿಸಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರ ನನ್ನದಾಗಿತ್ತು. ಕೊನೆಗೆ ನಾನೇ ಗೆದ್ದೆ…’ “ಕ್ಯಾನ್ಸರ್ ಗೆದ್ದು ಮರಳಿ ಟೀಮ್ ಇಂಡಿಯಾ ಜೆರ್ಸಿ ಧರಿಸಿ ಆಡುವಂತಾದದ್ದು ನನ್ನ ಪಾಲಿನ ಸ್ಮರಣೀಯ ಗಳಿಗೆ. ದೇವರು ದೊಡ್ಡವನು…’ ಎನ್ನುವಾಗ ಯುವಿ ಕಣ್ಣಲ್ಲಿ ಅದೇನೋ ಮಿಂಚು ಸರಿದಾಡಿತ್ತು! ಯೋ ಯೋ ಟೆಸ್ಟ್
ಫೇಲ್ ಆದರೆ ವಿದಾಯ ಪಂದ್ಯ!
ಬಿಸಿಸಿಐ ಮೇಲೆ ದೊಡ್ಡ ಅಪವಾದವೊಂದಿದೆ. ಅವರು ವಿಶ್ವ ಮಟ್ಟದಲ್ಲಿ ಮಿಂಚಿದ ಯಾವುದೇ ಸ್ಟಾರ್ ಕ್ರಿಕೆಟಿಗರಿಗೆ “ವಿದಾಯ ಪಂದ್ಯ’ ಏರ್ಪಡಿಸುವುದಿಲ್ಲ ಎಂದು!
ದ್ರಾವಿಡ್, ಲಕ್ಷ್ಮಣ್, ಸೆಹವಾಗ್, ಗಂಭೀರ್… ಹೀಗೆ ಅನೇಕರು ತೀವ್ರ ನಿರಾಸೆಯಿಂದ ತಮ್ಮ ಕ್ರಿಕೆಟ್ ಬದುಕನ್ನು ಮುಗಿಸಿದ್ದಾರೆ. ಇವರಲ್ಲಿ ಕೆಲವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯ ಯಾವಾಗ ನಡೆಯಿತು ಎಂಬುದೇ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿಲ್ಲ. ಈ ಸಾಲಿಗೆ ಹೊಸ ಸೇರ್ಪಡೆ ಯುವರಾಜ್ ಸಿಂಗ್. ಹಾಗೆಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಆದರೆ ಇದರ ನೈಜ ಕಾರಣವನ್ನು ಯುವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. “ನೀವು ಯೋ ಯೋ ಟೆಸ್ಟ್‌ನಲ್ಲಿ ಅನುತ್ತೀರ್ಣರಾದರೆ ನಿಮಗೆ ಖಂಡಿತವಾಗಿಯೂ ವಿದಾಯ ಪಂದ್ಯದ ಅವಕಾಶ ನೀಡುತ್ತೇವೆ ಎಂದು ಬಿಸಿಸಿಐ ನನಗೆ ತಿಳಿಸಿತ್ತು. ಆದರೆ ನಾನು ಯೋ ಯೋ ಟೆಸ್ಟ್‌ನಲ್ಲಿ ತೇರ್ಗಡೆಯಾದೆ. ವಿದಾಯ ಪಂದ್ಯ ಕನಸಾಗಿಯೇ ಉಳಿಯಿತು…’ ಎಂದರು. ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಮಿಂಚು
ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರ ಕ್ರಿಕೆಟ್ ಪ್ರತಿಭೆ ಮೊದಲು ಅನಾವರಣಗೊಂಡದ್ದು 2000ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯಲ್ಲಿ. ಶ್ರೀಲಂಕಾದಲ್ಲಿ ನಡೆದ ಈ ಕೂಟದಲ್ಲಿ ಯುವಿ 33.83ರ ಸರಾಸರಿಯಲ್ಲಿ 203 ರನ್ ಬಾರಿಸಿದರು. ಎಡಗೈ ಸ್ಪಿನ್ ಬೌಲಿಂಗ್ ಮೂಲಕವೂ ಗಮನ ಸೆಳೆದರು. ಮರು ವರ್ಷವೇ ಟೀಮ್ ಇಂಡಿಯಾಕ್ಕೆ ಲಗ್ಗೆ ಹಾಕಿದರು! ದ್ವಿತೀಯ ಏಕದಿನದಲ್ಲೇ ಬ್ಯಾಟಿಂಗ್ ಅಬ್ಬರ
2000ದ ಋತು ಕ್ರಿಕೆಟ್ ಪಾಲಿಗೆ ಅಸಹನೀಯವಾಗಿತ್ತು. ಆಗ ಮ್ಯಾಚ್ ಫಿಕ್ಸಿಂಗ್ ಭೂತ ಭಾರತದ ಹೆಗಲನ್ನೂ ಏರಿತ್ತು. ಸೌರವ್ ಗಂಗೂಲಿ ಪಡೆ ಇದನ್ನೆಲ್ಲ ತೊಡೆದು ಹಾಕಿ ಆಸ್ಟ್ರೇಲಿಯ ವಿರುದ್ಧ ಐಸಿಸಿ ನಾಕೌಟ್ ಪಂದ್ಯವನ್ನಾಡುತ್ತಿತ್ತು. 12ನೇ ನಂಬರ್ ಜೆರ್ಸಿ ಧರಿಸಿದ ಯುವರಾಜ್‌ಗೆ ಇದು ಕೇವಲ 2ನೇ ಪಂದ್ಯವಾಗಿತ್ತು. ಘಟಾನುಘಟಿ ಬೌಲರ್‌ಗಳ ಎದುರು 80 ಎಸೆತಗಳಲ್ಲಿ 84 ರನ್ ಬಾರಿಸಿ ಅಬ್ಬರಿಸಿದರು. ಲಾರ್ಡ್ಸ್‌ನಲ್ಲಿ
ನಾಟ್‌ವೆಸ್ಟ್ ಜಯಭೇರಿ
ಅದು ಜುಲೈ 2000. ಇಂಗ್ಲೆಂಡ್ ಎದುರಿನ ನಾಟ್‌ವೆಸ್ಟ್ ಸರಣಿಯ ಫೈನಲ್ ಹಣಾಹಣಿ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ 325 ರನ್ನುಗಳ ಬೃಹತ್ ಮೊತ್ತ ದಾಖಲಿಸಿತ್ತು. ಇಂಥ ಕಠಿನ ಚೇಸಿಂಗ್ ವೇಳೆ ಯುವರಾಜ್ ಸಿಂಗ್-ಮೊಹಮ್ಮದ್ ಕೈಫ್ ಸೇರಿಕೊಂಡು ಭಾರತಕ್ಕೆ 2 ವಿಕೆಟ್ ಗೆಲುವು ತಂದಿತ್ತಿದ್ದನ್ನು ಮರೆಯುವಂತಿಲ್ಲ. ಇದರಲ್ಲಿ ಯುವಿ ಕೊಡುಗೆ 69 ರನ್. 2011ರ
“ಡ್ರೀಮ್ ವರ್ಲ್ಡ್ ಕಪ್’
ಭಾರತದ ಸುದೀರ್ಘ ವಿಶ್ವಕಪ್ ಬರಗಾಲವನ್ನು ನೀಗಿಸಿದ್ದು 2011ರ ಪಂದ್ಯಾವಳಿ. ಇದು ಯುವರಾಜ್ ಪಾಲಿಗೆ ಹೆಚ್ಚು ಸ್ಮರಣೀಯ. ಒಂದು ಶತಕ, 4 ಅರ್ಧ ಶತಕ, 15 ವಿಕೆಟ್, 4 ಪಂದ್ಯಶ್ರೇಷ್ಠ ಪ್ರಶಸ್ತಿ, ಕೊನೆಗೆ ಸರಣಿಶ್ರೇಷ್ಠ ಸಮ್ಮಾನ! ವಿಶ್ವಕಪ್ ಕೂಟವೊಂದರಲ್ಲಿ 300 ಪ್ಲಸ್ ರನ್ ಜತೆಗೆ 15 ವಿಕೆಟ್ ಸಂಪಾದಿಸಿದ ಮೊದಲ ಆಲ್‌ರೌಂಡರ್ ಎಂಬ ಗರಿಮೆ. ಯುವರಾಜ್ ಸಿಂಗ್ ನೈಜ ವರ್ಲ್ಡ್ ಚಾಂಪಿಯನ್ ಆಗಿ ಮೆರೆದಿದ್ದರು. ತಂದೆಗಿಂತ ಭಿನ್ನ ಕ್ರಿಕೆಟಿಗ
1981ರ ಡಿಸೆಂಬರ್ 12ರಂದು ಚಂಡೀಗಢದಲ್ಲಿ ಜನಿಸಿದ ಯುವರಾಜ್ ಸಿಂಗ್ ಕ್ರಿಕೆಟ್ ಕುಟುಂಬದ ಕುಡಿ. ಮಧ್ಯಮ ವೇಗಿಯಾಗಿದ್ದ ತಂದೆ ಯೋಗರಾಜ್ ಸಿಂಗ್ ಭಾರತವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಒಂದು ಕಾಲದಲ್ಲಿ ಕಪಿಲ್‌ದೇವ್ ಅವರ ಬೌಲಿಂಗ್ ಜತೆಗಾರನಾಗಿದ್ದರು. ಉತ್ತಮ ಕ್ಷೇತ್ರರಕ್ಷಕನೂ ಆಗಿದ್ದರು. ಆದರೆ ಯುವರಾಜ್ ಸಿಂಗ್ ಸವ್ಯಸಾಚಿಯಾಗಿ ಬೆಳೆದರು. ಎಡಗೈ ಸ್ಪಿನ್ ಮೂಲಕ ಆಗಾಗ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಿದೆ. ತಂದೆ ಯೋಗರಾಜ್‌ಗಿಂತ ಭಿನ್ನ ಕ್ರಿಕೆಟಿಗನಾಗಿದ್ದ ಯುವಿ, ಹೊಡಿಬಡಿ ಬ್ಯಾಟ್ಸ್‌ಮನ್ ಆಗಿ ವಿಶ್ವ ಮಟ್ಟದಲ್ಲಿ ಬೆಳೆದರು. ಮಗನಿಗೆ ಅನ್ಯಾಯವಾದಾಗಲೆಲ್ಲ ಯೋಗರಾಜ್ ಎಲ್ಲರ ಮೇಲೆರಗಿ ಹೋಗುತ್ತಿದ್ದರು. ಬಿಸಿಸಿಐ, ಧೋನಿ ವಿರುದ್ಧ ನೇರ ಆರೋಪ ಮಾಡಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದರು. ಯುವರಾಜ್‌ಗೆ ತಂದೆಗಿಂತ ಹೆಚ್ಚಾಗಿ ತಾಯಿ ಶಬ್ನಂ ಬೆಂಬಲ ನೀಡುತ್ತಿದ್ದರು. ಯುವರಾಜ್ ಪತ್ನಿ ಹೇಜಲ್ ಕೀಚ್ ಬ್ರಿಟನ್ ಮೂಲದ ರೂಪದರ್ಶಿ. ವಿವಾಹದ ಬಳಿಕ ಇವರ ಹೆಸರು ಗುರ್ಬಸಂತ್ ಕೌರ್ ಎಂದಾಗಿದೆ. ನಿಮ್ಮದೊಂದು ಅದ್ಭುತ ಕ್ರಿಕೆಟ್ ಪಯಣ ಯುವಿ. ತಂಡಕ್ಕೆ ಅಗತ್ಯ ಬಿದ್ದಾಗಲೆಲ್ಲ ನೀವು ನಿಜವಾದ ಚಾಂಪಿಯನ್ ಆಗಿ ಹೊರ ಹೊಮ್ಮುತ್ತಿದ್ದಿರಿ. ಅಂಗಳ ಹಾಗೂ ಅಂಗಳದಾಚೆಯ ಎಲ್ಲ ಏಳುಬೀಳುಗಳನ್ನು ಸಮರ್ಥವಾಗಿ ನಿಭಾಯಿಸಿದ ನಿಮ್ಮ ಛಲ ನಿಜಕ್ಕೂ ಅಸಾಮಾನ್ಯ. ನಿಮ್ಮ ಸೆಕೆಂಡ್ ಇನ್ನಿಂಗ್ಸ್‌ಗೆ ಬೆಸ್ಟ್ ಆಫ್ ಲಕ್.
-ಸಚಿನ್ ತೆಂಡುಲ್ಕರ್ ದೇಶಕ್ಕಾಗಿ ನೀಡಿದ ಅವಿಸ್ಮರಣೀಯ ಕೊಡುಗೆಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸು ತ್ತೇನೆ. ಪಾಜಿ! ನೀವು ನಮಗೆ ಹಲವು ನೆನಪುಗಳನ್ನು ಮತ್ತು ಗೆಲುವುಗಳನ್ನು ದಕ್ಕಿಸಿಕೊಟ್ಟಿದ್ದೀರಿ. ನೀವೊಂದು ಪರಿಪೂರ್ಣ ಚಾಂಪಿಯನ್.
–ವಿರಾಟ್ ಕೊಹ್ಲಿ ನಿಮ್ಮ ಜತೆ ಆಡಿದ ದಿನಗಳು ಅವಿಸ್ಮರಣೀಯವಾದುದು. ನೀವು ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆ. ಆಟದ ಕುರಿತಾಗಿ ನೀವು ತೋರಿದ ಪ್ರೀತಿ, ಬದ್ಧತೆ ಹಾಗೂ ನಿಮ್ಮ ಸಂಕಷ್ಟದ ದಿನಗಳಲ್ಲಿ ನೀವು ಹೋರಾಡಿದ ಬಗೆ ಅದ್ವಿತೀಯವಾದುದು.
– ಲಕ್ಷ್ಮಣ್ ನಿವೃತ್ತಿ ಜೀವನದ ಶುಭಾಶಯಗಳು. ಹಲವು ಏಳು-ಬೀಳುಗಳನ್ನು ಕಂಡಿದ್ದ ನಿಮ್ಮ ಜೀವನದಲ್ಲಿ ನೀಲಿ ವಸ್ತ್ರ ಹೊಸತನವನ್ನು ಸೃಷ್ಟಿಸಿತು. ಕ್ಯಾನ್ಸರ್ ಬಳಿಕ ನೀವು ತಂಡದಲ್ಲಿ ಆಡಿದ ರೀತಿ ಅವೋಘವಾದುದು.
-ಕೆವಿನ್ ಪೀಟರ್‌ಸನ್ ಆದರೆ ಯುವರಾಜ್ ಅವರಂತಹ ಓರ್ವ ಆಟಗಾರನನ್ನು ಕಾಣಲು ಕಷ್ಟ. ಕ್ಯಾನ್ಸರ್ ವಿರುದ್ಧ ಹೋರಾಡಿದ ಬಳಿಕ ನೀವು ಬೌಲರ್‌ಗಳ ವಿರುದ್ಧ ಹೋರಾಡಿದ ರೀತಿ ಕ್ರೀಡಾಸಕ್ತರ ಮನವನ್ನು ಗೆದ್ದಿತ್ತು. ನಿಮ್ಮಿಂದ ಅದೆಷ್ಟೋ ಕ್ಯಾನ್ಸರ್ ಪೀಡಿತರು ಜೀವನದಲ್ಲಿ ಧೈರ್ಯವನ್ನು ಕಂಡುಕೊಂಡಿದ್ದರು.
-ವೀರೇಂದ್ರ ಸೆಹವಾಗ್ ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಓರ್ವ ಅತ್ಯುನ್ನತ ಆಟಗಾರ ಯುವಿ. ಅನಾರೋಗ್ಯದ ವಿರುದ್ಧ ಹೋರಾಡಿದ ಬಳಿಕ ನಿಮ್ಮಲ್ಲಿ ಧೈರ್ಯ ಹೆಚ್ಚಾಗಿದ್ದನ್ನು ವಿಶ್ವಕಪ್‌ನಲ್ಲಿ ರುಜುವಾತು ಪಡಿಸಿದ್ದೀರಿ.
-ಮೊಹಮ್ಮದ್ ಕೈಫ್ ನೀವು ಸ್ಫೂರ್ತಿ ಮತ್ತು ಅಪಾರ ಆತ್ಮವಿಶ್ವಾಸದ ಮೂಲಕ ಅಸಂಖ್ಯ ನೆನಪುಗಳ ಮೂಲಕ ಹೃದಯ ಗೆದ್ದವರು. ಖ್ಯಾತಿವೆತ್ತ ನಿಮ್ಮ ಕ್ರೀಡಾ ಜೀವನಕ್ಕಾಗಿ ನಾನು ಅಭಿನಂದಿಸುತ್ತೇನೆ.
-ಜಸ್‌ಪ್ರೀತ್ ಬುಮ್ರಾ ನಿವೃತ್ತ ಬದುಕನ್ನು ಆನಂದಿಸಿ ಲೆಜೆಂಡ್-ಸ್ಟುವರ್ಟ್ ಬ್ರಾಡ್