Advertisement

ಗಡಿನಾಡ ನಿರ್ದೇಶಕನ “ಬಾಂಧವ್ಯ’ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಪುರಸ್ಕಾರ

12:12 AM Oct 14, 2019 | Sriram |

ಕಾಸರಗೋಡು: ಸಾಮಾಜಿಕ ಸಂದೇಶ ಸಾರುವ ಹೃಸ್ವ ಚಿತ್ರವೊಂದನ್ನು ನಿರ್ಮಿಸಿ ಆ ಮೂಲಕ ಇಡೀ ಜಗತ್ತಿಗೆ ಅದರೊಳಗಿನ ಹಿರಿಮೆಯನ್ನು ಪರಿಚಯಿಸಲು ಹೊರಟ ಕಿರು ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ಪುರಸ್ಕಾರ ಒಲಿದು ಬಂದಿರುವುದು ಅಕ್ಷರಶ: ಗರಿಮೆ ಮೂಡಿಸಿದೆ.

Advertisement

ಜೈಪುರದಲ್ಲಿ ನಡೆದ 6ನೇ ಪಿಂಕಿ ಸಿಟಿ ಇಂಟರ್‌ ನೇಶನಲ್‌ ಶಾರ್ಟ್‌ ಫಿಲಂ ಫೇಸ್ಟಿವಲ್‌ನಲ್ಲಿ ಉತ್ತಮ ಸಾಮಾಜಿಕ ಸಂದೇಶ ಸಾರುವ ಕಿರು ಚಿತ್ರ ಎಂಬ ಪುರಸ್ಕಾರಕ್ಕೆ ಗಡಿನಾಡ ಪ್ರತಿಭಾನ್ವಿತ ರಂಜಿತ್‌ ಅಡ್ಯನಡ್ಕ ನಿರ್ಮಿಸಿ ನಿರ್ದೇಶಿಸಿದ “ಬಾಂಧವ್ಯ’ ಎಂಬ ಹೃಸ್ವ ಚಿತ್ರ ಪಾತ್ರವಾಗಿದೆ.

ಏನಿದು ಬಾಂಧವ್ಯ: ಆಧುನಿಕ ಜಗತ್ತಿನಲ್ಲಿ ಸ್ನೇಹ, ಸಂಬಂಧಗಳ ಬೆಲೆ ಕಡಿಮೆಯಾಗುತ್ತಲೇ ಇದೆ ಎನ್ನುವ ಆತಂಕಕಾರಿ ವಿಷಯವನ್ನಾಧರಿಸಿ ಏನು ಅರಿಯದ ಮುಗ್ಧ ಮಕ್ಕಳು ಸಂಬಂಧಗಳ ಜಂಜಾಟದಲ್ಲಿ ಯಾವ ರೀತಿಯಲ್ಲಿ ಬಲಿಯಾಗುತ್ತಿದ್ದಾರೆ ಎಂಬುವುದನ್ನು ನವಿರು ಭಾವನೆಯಿಂದ ನಿರೂಪಿಸುವ ಕಾರಣದಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಬಾಂಧವ್ಯ ಎಂಬ ಈ ಕಿರುಚಿತ್ರದ ಮೂಲಕ ನೀಡುವಲ್ಲಿ ಚಿತ್ರ ತಂಡ ಸಫಲವಾಗಿದೆ. ಈಗಿನ ಕಾಲದಲ್ಲಿ ಮೊಬೈಲ್‌ ನಿಂದ ಎಷ್ಟು ಒಳ್ಳೆಯ ವಿಚಾರಗಳು ಸಿಗುತ್ತೋ ಅಷ್ಟೇ ಕೆಟ್ಟ ವಿಚಾರಗಳು ಸಿಗುತ್ತವೆ. ಆದ್ರೆ ಈ ಮೊಬೈಲ್‌ ಭೂತ ಏನೂ ಅರಿಯದ ಮಗುವಿನ ಸಂಬಂಧಗಳ‌ನ್ನು ಯಾವ ರೀತಿ ಬದಲಾಯಿಸುತ್ತದೆ ಅನ್ನುವುದೇ ಈ ಬಾಂಧವ್ಯ ಚಿತ್ರಕಥೆಯ ತಿರುಳು.

ಪ್ತಬುದ್ಧ ತಂಡದ ಪ್ರಯತ್ನ : ಗಡಿನಾಡಾದ ಅಡ್ಯನಡ್ಕದ ರಂಜಿತ್‌ ಎಂಬ ಯುವ ನಿರ್ದೇಶಕ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿದ ಬಾಂಧವ್ಯ ಎನ್ನುವ ಈ ಕಿರು ಚಿತ್ರವನ್ನು ಅಂಜು ಕ್ರಿಯೇಷನ್ಸ್‌ ನಿರ್ಮಿಸಿ ಕಳೆದ ಅಗೋಸ್ತು 8ರಂದು ಯೂಟ್ಯೂಬ್‌ ಮೂಲಕ ಬಿಡುಗಡೆಗೊಳಿಸಿದೆ. ಅಡ್ಯನಡ್ಕದ ನಾರಾಯಣ ಪೂಜಾರಿ-ಕುಸುಮಾದಂಪತಿಯ ಪುತ್ರನಾದ ಈ ಯುವ ನಿರ್ದೇಶಕ ಎರಡು ವರ್ಷಗಳ ಹಿಂದೆ “ಇಂಡಿಯನ್‌ ಆರ್ಮಿ’ ಎಂಬ ದೇಶ ಪ್ರೇಮದ ಕಿರು ಚಿತ್ರ ನಿರ್ಮಿಸಿದ ಅನುಭವಜನ್ಯರಾಗಿದ್ದಾರೆ. ಕಈ ಕಿರುಚಿತ್ರದ ಛಾಯಾಗ್ರಹಣವನ್ನು ಮೋಹನ್‌ ಪಡ್ರೆ ಕಲಾತ್ಮಕವಾಗಿ ಸೆರೆ ಹಿಡಿದಿದ್ದು ಈಗಾಗಲೇ ಪೆನ್ಸಿಲ್‌ ಬಾಕ್ಸ್‌ ಎಂಬ ಚಲನಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾ ನಿರ್ದೇಶಕನ ಪಟ್ಟ ಕಟ್ಟಿಕೊಂಡಿರುವ ಮೋಹನ್‌ ಪಡ್ರೆಯವರ ಕಲಾತ್ಮಕ ಚಿತ್ರಣದ ಕೈಚಳಕ ಇದರಲ್ಲೂ ಎದ್ದು ಕಾಣುತ್ತಿದೆ. ಇದರ ಸಂಭಾಷಣೆ ಹಾಗೂ ಸಹ ನಿರ್ದೇಶನವನ್ನು ಅಕ್ಷತ್‌ ವಿಟ್ಲ ನಿರ್ವಹಿಸಿದ್ದು ಸಂಗೀತ ಹಾಗೂ ಸಂಕಲನ ಕಾರ್ಯವನ್ನು ಲಕುಮಿ ವಿಶ್ವಾಲ್‌ನ ನಾಗಾರ್ಜುನ್‌ ಮಂಗಲ್ಪಾಡಿ ಅವರು ನಡೆಸಿದ್ದಾರೆ.

ಹಲವು ಪ್ರತಿಭಾವಂತರ ಸಂಗಮ
ಕನ್ನಡ ಹಿಂದಿ, ತಮಿಳು, ತೆಲುಗು ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿರುವ “ಕಣ್ಮಣಿ’ ಧಾರಾವಾಹಿ ಖ್ಯಾತಿಯ ಬೇಬಿಶ್ರೀ ಹಾಗೂ ತುಳು ರಂಗಭೂಮಿಯ ಪ್ರಬುದ್ಧ ನಟ, ನಿರ್ದೇಶಕ ಹರ್ಷ ರೈ ಪುತ್ರಕಳ ಮುಖ್ಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಎನ್ನಿಲೆಕ ಆಪುಜಿ, ಅಜ್ಜಿಗ್‌ ಏರ್ಲಾ ಇಜ್ಜಿ, ಕನಕಟ್ಟೊಡಿc, ಕರಿಯೆ ಕಟ್ಟಿ ಕರಿಮಣಿ, ಪ್ರೀತಿ ಉಪ್ಪಡ್‌, ಅವು ಪನಿಯರೆ ಆಪುಜಿ ಮೊದಲಾದ ನಾಟಕದಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ ಹರ್ಷ ರೈ ಅವರು ರಂಗ ಕಹಳೆ ನಿರ್ಮಾಣದ ಸಿ.ಲಕ್ಷ¾ಣ್‌ ನಿರ್ದೇಶಿಸಿದ “ಸಂತೆ’ ಚಲನಚಿತ್ರದಲ್ಲೂ ಅಭಿನಯಿಸಿದ್ದು ಅವರ ಕೌಶಲ ಬಾಂಧವ್ಯದ ಯಶಸ್ವಿಗೆ ಮೈಲುಗಲ್ಲಾಗಿದೆ. ಮೂರೇ ಪಾತ್ರವನ್ನು ಆಧಾರಿಸಿಕೊಂಡಿರುವ ಈ ಚಿತ್ರದಲ್ಲಿ ಕಲಾವಿದೆ ಚಂದ್ರಕಲಾ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next