ವಾಡಿ (ಚಿತ್ತಾಪುರ): ಕೋಟಿ ರೂಪಾಯಿ ಬೆಲೆ ಬಾಳುವ ಅಪಾರ ಪ್ರಮಾಣದ ಗಾಂಜಾವನ್ನು ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯ ಕುಲುಮೆಗೆ ಚೆಲ್ಲಿ ಭಸ್ಮಗೊಳಿಸುವ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಿತು.
ಕಲಬುರಗಿ ಜಿಲ್ಲೆಯಾಧ್ಯಂತ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾವನ್ನು ಇತರೆಡೆ ಸಾಗಾಣಿಕೆ ಮಾಡುವ ಜತೆಗೆ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ದ್ರವ್ಯವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮೀಟಿಯ ಅನುಮತಿ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಸಮ್ಮುಖದಲ್ಲಿ ರವಿವಾರ ಪಟ್ಟಣದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ದಹನ ಘಟಕಕ್ಕೆ ತರಲಾಗಿತ್ತು. 74.50 ಲಕ್ಷ ರೂ. ಮೌಲ್ಯದ 745.410 ಕೆಜಿ ಗಾಂಜಾವನ್ನು ಮಾದಕ ದ್ರವ್ಯ ವಿಲೇವಾರಿ ಸಮಿತಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಬೆಂಕಿಯ ಕುಲುಮೆಗೆ ಹಾಕಿಸಿ ಸಂಪೂರ್ಣ ನಾಶಪಡಿಸಿದರು.
ಅಕ್ರಮವಾಗಿ ಗಾಂಜಾ ಬೆಳೆಯುವುದು ಮತ್ತು ಸಾಗಾಣಿಕೆ ಮಾಡುವುದು ಅಪರಾಧ ಕೃತ್ಯವಾಗಿದೆ. ಮಾನವ ಮೆದುಳಿನ ಮೇಲೆ ಸವಾರಿ ಮಾಡುವ ಮಾದಕ ದ್ರವ್ಯವನ್ನು ಜನರಿಗೆ ಮಾರಾಟ ಮಾಡುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಪರಾಧ ಕೃತ್ಯಗಳಿಗೆ ಮತ್ತು ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲಾಗಿದೆ. ಇದರ ನಡುವೆಯೂ ಗಾಂಜಾ, ಮಟಕಾ, ಜೂಜಾಟ, ಬೆಟ್ಟಿಂಗ್ ನಂತಹ ಮನೆಮುರುಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಅಂತಹವರಿಗೆ ಸುಮ್ಮನೆ ಬಿಡುವುದಿಲ್ಲ. ಜನರು ಗಾಂಜಾ ನಶೆಯಿಂದ ದೂರವಿರಬೇಕು. ಮಟಕಾ ಅಥವ ಇತರ ಅಕ್ರಮ ದಂಧೆಕೋರರು ಕಂಡು ಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಆ ಮೂಲಕ ಸ್ವಸ್ಥ ಸಮಾಜ ಕಟ್ಟಲು ಪಣ ತೊಡಬೇಕು ಎಂದು ಎಸ್‌ಪಿ ಇಶಾ ಪಂತ್ ಕರೆ ನೀಡಿದ್ದಾರೆ.
ಆಳಂದ ಡಿವೈಎಸ್‌ಪಿ ರವೀಂದ್ರ ಶಿರೂರ, ಚಿಂಚೋಳಿ ಡಿವೈಎಸ್‌ಪಿ ಬಸವೇಶ್ವರ ಹೀರಾ, ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ವಾಡಿ ಠಾಣೆಯ ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಎಸಿಸಿ ಎಚ್‌ಆರ್ ವಿಭಾಗದ ಮುಖ್ಯಸ್ಥ ಟಿ.ನಾಗೇಶ್ವರರಾವ್, ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಪೆದ್ದಣ್ಣ ಬಿಡಾಳ, ಸಂತೋಷ ಕುಲಕರ್ಣಿ ಸೇರಿದಂತೆ ಪರಿಸರ ವಿಭಾಗದ ಅಧಿಕಾರಿಗಳು ಇದ್ದರು.