Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಂತರಿಕ ಸಮೀಕ್ಷೆ

08:12 PM May 29, 2021 | Team Udayavani |

ವರದಿ : ದತ್ತು ಕಮ್ಮಾರ

Advertisement

ಕೊಪ್ಪಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಬೇಕೇ? ಬೇಡವೇ? ಎನ್ನುವ ಕುರಿತಂತೆ ಶಾಲೆ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಆಂತರಿಕ ಸಮೀಕ್ಷೆ ಆರಂಭಿಸಿದೆ.

ಕಲಬುರಗಿ ಆಯುಕ್ತರ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್‌ ಫಾರಂ ಮೂಲಕ ಸಮೀಕ್ಷಾ ವರದಿ ಸಂಗ್ರಹಿಸುತ್ತಿದೆ. ಇಡೀ ಜಗತ್ತಿನಲ್ಲಿ ಮಹಾಮಾರಿ ಕೊರೊನಾ ಆರ್ಭಟಿಸಿ ಜನ ಜೀವನವನ್ನೇ ತಲ್ಲಣಗೊಳಿಸಿದೆ. ಎಲ್ಲ ಕ್ಷೇತ್ರಗಳು ತತ್ತರಿಸಿ ಹೋಗಿವೆ. ಇದಕ್ಕೆ ಶಿಕ್ಷಣ ಇಲಾಖೆಯು ಹೊರತಾಗಿಲ್ಲ. ಕಳೆದ ಎರಡು ವರ್ಷದಿಂದ ಕೊರೊನಾ ಕರಿ ನೆರಳಿನಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ.

ಒಂದೆಡೆ ಸರಿಯಾದ ಪಾಠ ಬೋಧನೆ ಇಲ್ಲ. ಇನ್ನೊಂದೆಡೆ ಮಕ್ಕಳ ಕಲಿಕೆಗೂ ಸಂಕಷ್ಟ. ಭವಿಷ್ಯಕ್ಕೂ ಕುತ್ತು ಬಂದೊದಗಿದೆ. ಅದರಲ್ಲೂ ಸೋಂಕು ಹೆಚ್ಚಳದಿಂದಾಗಿ ಸರ್ಕಾರವು ಲಾಕ್‌ಡೌನ್‌ ಘೋಷಣೆ ಮಾಡಿದ್ದು ಪ್ರಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೇಗೆ ನಡೆಸಬೇಕು ಎನ್ನುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಪರೀಕ್ಷೆ ನಡೆಸಿದರೆ ಸಹಸ್ರಾರು ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಯೇನು ಎನ್ನುವ ಪ್ರಶ್ನೆಯೂ ಎದುರಾಗಿದೆ. ಈ ಮಧ್ಯೆಯೂ ಅವರ ಭವಿಷ್ಯದ ಬಗ್ಗೆಯೂ ಸರ್ಕಾರ ಚಿಂತನೆಯಲ್ಲಿ ಮುಳುಗಿದೆ. ಸರ್ಕಾರವೂ ಇನ್ನೂ ಪರೀಕ್ಷೆಯನ್ನು ರದ್ದುಪಡಿಸಬೇಕೋ? ಬೇಡವೋ? ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಈ ಮಧ್ಯೆಯೂ ಶಿಕ್ಷಣ ಇಲಾಖೆಯು ಶಾಲೆಗಳ ಮುಖ್ಯ ಶಿಕ್ಷಕರಿಂದ, ವಿದ್ಯಾರ್ಥಿ-ಪಾಲಕರಿಂದಲೂ ಆಂತರಿಕ ಸಮೀಕ್ಷೆಯನ್ನು ಆರಂಭಿಸಿದೆ.

ಜಿಲ್ಲೆಯಲ್ಲಿ 310 ಪ್ರೌಢ ಶಾಲೆಗಳಿದ್ದು, ಅವುಗಳಲ್ಲಿ ಅನುದಾನ, ಅನುದಾತ ರಹಿತ, ಸರ್ಕಾರಿ ಶಾಲೆಗಳೂ ಒಳಗೊಂಡಿವೆ. ಪ್ರಸಕ್ತ ವರ್ಷದಲ್ಲಿ 20,960 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ಕೆಲವರು ಆನ್‌ ಲೈನ್‌ ತರಗತಿ ನಡೆಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದರೆ, ಇನ್ನು ಕೆಲವು ವಿದ್ಯಾರ್ಥಿಗಳು ತಾವೇ ಸ್ವಯಂ ಅಭ್ಯಾಸದಿಂದಲೂ ಸಂಕಷ್ಟದ ಸ್ಥಿತಿಯಲ್ಲಿ ಪರೀಕ್ಷೆಗೆ ತಯಾರಿಯಲ್ಲಿದ್ದಾರೆ. ಆದರೆ ಸರ್ಕಾರವು ಪರೀಕ್ಷೆ ನಡೆಸಲು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಈಚೆಗೆ ನಡೆದ ಕಲಬುರಗಿ ಶಿಕ್ಷಣ ಇಲಾಖೆ ಆಯುಕ್ತರ ವೆಬಿನಾರ್‌ ಸಭೆಯಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಗೂಗಲ್‌ ಫಾರಂ ಲಿಂಕ್‌ ಕಳುಹಿಸುವ ಮೂಲಕ ಶಾಲೆಯ ಮುಖ್ಯ ಶಿಕ್ಷಕರ ಅಭಿಪ್ರಾಯ, 10ನೇ ತರಗತಿ ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ಅಭಿಪ್ರಾಯ ಸಂಗ್ರಹಿಸುತ್ತಿದೆ. ಇದೊಂದು ಆಂತರಿಕ ಸಮೀಕ್ಷೆಯಾಗಿದ್ದು ಇಲ್ಲಿ ಪಾಲಕರಿಗೆ ಪರೀಕ್ಷೆ ಬೇಕೋ? ಬೇಡವೋ? ಎನ್ನುವ ಪ್ರಶ್ನೆಗಳನ್ನು ಪ್ರಸ್ತಾಪಿಸಲಾಗಿದೆ. ಬೇಕು ಎನ್ನುವ ಶಿಕ್ಷಕರ ಅಭಿಪ್ರಾಯ, ಬೇಡ ಎನ್ನುವ ಶಿಕ್ಷಕರ ಅಭಿಪ್ರಾಯ, ವಿದ್ಯಾರ್ಥಿ, ಪಾಲಕರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಕರ, ವಿದ್ಯಾರ್ಥಿಗಳ, ಪಾಲಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಿಗೆ ಗೂಗಲ್‌ ಫಾರಂ ಲಿಂಕ್‌ ಕಳುಹಿಸಿದೆ. ಇದೇ ಮೇ 30ರೊಳಗೆ ಆಂತರಿಕ ಸಮೀಕ್ಷೆ ನಡೆಸಲಿದ್ದು ಬಳಿಕ ರಾಜ್ಯ ಇಲಾಖೆಗೂ ಇದೇ ಮಾಹಿತಿ ರವಾನೆಯಾಗಲಿದೆ. ಆಗ ಸರ್ಕಾರವು ಈ ಬಗ್ಗೆ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next