ಬೆಂಗಳೂರು: ಕೋರ್ಟ್ ತೀರ್ಪು ಇಲ್ಲದೆಯೂ ಒಳಮೀಸಲಾತಿ ಜಾರಿ ಮಾಡಬಹುದು. ತಿದ್ದುಪಡಿ ತಂದು ಒಳಮೀಸಲಾತಿ ಕಲ್ಪಿಸುವ ಅವಕಾಶ ಸಂವಿಧಾನದಲ್ಲಿದೆ. ಆದರೆ ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ತೋರದೆ ಜನರನ್ನು ಮೂರ್ಖರನ್ನಾಗಿಸಲು ಹೊರಟಿವೆ. ಒಳಮೀಸಲಾತಿ ವಿಚಾರದಲ್ಲಿ ಎದೆಗಾರಿಕೆ ತೋರಬೇಕಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.
ಅಖಿಲ ಕರ್ನಾಟಕ ಆದಿ ಜಾಂಬವ ಸಂಘವು ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಘದ 45ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಲೇಖಕ ಪಿ.ಎಂ.ಚಿಕ್ಕವೆಂಕಟಸ್ವಾಮಿ ಮೇಲಾಗಾಣಿ ಅವರ “ಶ್ರೀ ಆದಿ ಜಾಂಬವ-ಮತಂಗ-ಮಾತಂಗೀ ಅತ್ರಿ ಅನಸೂಯ-ವಸಿಷ್ಠ ಅರಂದತಿಯರ ಇತಿಹಾಸ’ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದ್ದರು.
ನನಗೆ ಸ್ಥಾನಮಾನ ಮುಖ್ಯವಲ್ಲ. ಜಾತಿಯ ಒಳಿತು ಮುಖ್ಯ.ಆ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿ ಬಗ್ಗೆ ಧೈರ್ಯದಿಂದ ಮಾತನಾಡುತ್ತೇನೆ. ಒಳಮೀಸಲಾತಿ ಕಲ್ಪಿಸುವ ಕುರಿತ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ಹೇಳಿದ್ದೆ. ಒಳಮೀಸಲಾತಿ ಜಾರಿಯಾಗಿಲ್ಲ ಎಂಬ ಸಿಟ್ಟಿನಿಂದ ಮೈಸೂರಿನಲ್ಲಿ ಕೆಲವು ಹೇಳಿಕೆ ನೀಡಿದ್ದೆ ಎಂದರು.
ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದರೆ ಮಾತ್ರ ಒಳ ಮೀಸಲಾತಿ ಸಂವಿಧಾನಬದ್ಧವಾಗುತ್ತದೆ. ಬಿಜೆಪಿ ಸಹಿತ ಎಲ್ಲ ಪಕ್ಷಗಳೂ ಈ ಬಗ್ಗೆ ಬದ್ಧತೆ ಪ್ರದರ್ಶಿಸಬೇಕು. ಈಗಾಗಲೇ ಒಳಮೀಸಲಾತಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ತೀರ್ಪಿನ ಈ ಬಗ್ಗೆ ಹೆಚ್ಚಿನ ಗಮನ ಇಟ್ಟಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬರಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಶಾಮನೂರು ಶಿವಶಂಕರಪ್ಪ ಕೂಗಿಗೆ ಇರುವ ಬೆಲೆ ನಮಗಿಲ್ಲ
ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾದರೆ 92 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಸಿಡಿದೇಳುತ್ತಾರೆ. ಅವರ ಕೂಗಿಗೆ ರಾಜಕೀಯ ಮನ್ನಣೆ ಕೂಡ ಸಿಗುತ್ತದೆ. ಆದರೆ ಮಾದಿಗರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮ್ಮ ಕೂಗಿಗೆ ಯಾವುದೇ ಬೆಲೆಯಿಲ್ಲ. ಮಾದಿಗ ಸಮುದಾಯ ಒಟ್ಟಾಗದೇ ಇರುವುದು ಇದಕ್ಕೆಲ್ಲ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.