ಬೆಂಗಳೂರು: ಟ್ವೀಟರ್ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ಆದೇಶಗಳನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಆರೋಪದ ಮೇಲೆ ಟ್ವೀಟರ್ (ಎಕ್ಸ್‌ಕಾರ್ಪ್)ಗೆ 50 ಲಕ್ಷ ರೂ. ದಂಡ ವಿಧಿಸಿ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಮಧ್ಯಾಂತರ ತಡೆ ನೀಡಿದೆ.
ಈ ವಿಚಾರವಾಗಿ ಎಕ್ಸ್‌ಕಾರ್ಪ್ (ಟ್ವೀಟರ್) ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಎಂ.ಜಿ.ಎಸ್ ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ, ದಂಡದ ಆದೇಶಕ್ಕೆ ತಡೆ ನೀಡಿತು.
ಮೇಲ್ಮನವಿದಾರರು (ಎಕ್ಸ್‌ಕಾರ್ಪ್) ಪರ ವಕೀಲರು, ಎಕ್ಸ್‌ಕಾರ್ಪ್‌ಗೆ 50 ಲಕ್ಷ ರೂ. ದಂಡ ವಿಧಿಸಿದ್ದ ನ್ಯಾಯಾಲಯ ತಮ್ಮ ಕಕ್ಷಿದಾರ ಸಂಸ್ಥೆಯ ಪ್ರಾಮಾಣಿಕತೆ ಸಾಬೀತುಪಡಿಸಲು ಒಂದು ವಾರದಲ್ಲಿ 25 ಲಕ್ಷ ರೂ. ನ್ಯಾಯಲಯದಲ್ಲಿ ಠೇವಣಿ ಇಡುವಂತೆ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ. ಅದರಂತೆ 25 ಲಕ್ಷ ರೂ. ಪಾವತಿಸಲು ಎಕ್ಸ್‌ಕಾರ್ಪ್ ಸಿದ್ಧವಿದ್ದು, ಅದಕ್ಕೆ ಒಂದು ವಾರದ ಬದಲಿಗೆ ಇನ್ನೊಂದಿಷ್ಟು ಹೆಚ್ಚಿನ ಸಮಯ ಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕೋಟಿಗಟ್ಟಲೇ ವಹಿವಾಟು ನಡೆಸುವ ಇಷ್ಟೊಂದು ದೊಡ್ಡ ಕಂಪೆನಿಗೆ ದಂಡದ ಮೊತ್ತ ದೊಡ್ಡದೇನಲ್ಲ. ಎಕ್ಸ್‌ಕಾಪ್ ವಾರಕ್ಕೆ ಹಲವು ಕೋಟಿ ರೂ. ವ್ಯವಹಾರ ನಡೆಸುತ್ತದೆ. ದಂಡದ ಹಣವನ್ನು ಒಂದೇ ದಿನದಲ್ಲಿ ಪಾವತಿಸಬಹುದು. ಹಾಗಾಗಿ ಒಂದು ವಾರ ಕಾಲಾವಕಾಶ ಸಾಕು ಎಂದು ಮೌಖೀಕವಾಗಿ ಹೇಳಿತು. ಅಲ್ಲದೇ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಒಂದು ವೇಳೆ ತಡೆಯನ್ನು ತೆರವು ಮಾಡಲು ಬಯಸಿದ್ದಲ್ಲಿ ಅದಕ್ಕೂ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.