Advertisement

ಬಂತು ಮಧ್ಯಂತರ ಪರಿಹಾರ; ಮತ್ತದೇ ಅಪಸ್ವರ

11:30 PM Oct 05, 2019 | Lakshmi GovindaRaju |

ನೆರೆ ಹಾವಳಿ ಪ್ರದೇಶಗಳ ಸಂತ್ರಸ್ತರ ಸಮಸ್ಯೆ ಹಾಗೂ ಕೇಂದ್ರದ ಪರಿಹಾರದ ವಿಷಯ ಈಗ ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿ ಎರಡು ತಿಂಗಳಾದ ಬಳಿಕ ಸಾಕಷ್ಟು ಆಕ್ರೋಶ, ಟೀಕೆಗಳು ವ್ಯಕ್ತವಾದ ನಂತರ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ.ಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಸಂಸದರು, ಶಾಸಕರು, ಸಚಿವರು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದರೆ, ಈ ಅಲ್ಪ ಮೊತ್ತ ಸಂತ್ರಸ್ತರ ಪರಿಹಾರಕ್ಕೆ ಸಾಕಾಗುವುದಿಲ್ಲ. ಇದು ನೆರೆ ಪೀಡಿತರ ಕಣ್ಣೀರು ಒರೆಸುವ ಕಾರ್ಯತಂತ್ರ ಎಂದು ಪ್ರತಿಪಕ್ಷಗಳ ನಾಯಕರು ಟೀಕಿಸಿದ್ದು, ಹೆಚ್ಚಿನ ಪರಿಹಾರ ಹಣಕ್ಕೆ ಒತ್ತಾಯಿಸಿದ್ದಾರೆ. ಆಡಳಿತಾರೂಢ ಬಿಜೆಪಿ ನಾಯಕರು ಹಾಗೂ ಪ್ರತಿಪಕ್ಷಗಳ ನಾಯಕರ ನಡುವಿನ ವಾಕ್ಸಮರದ ಝಲಕ್‌ ಇಲ್ಲಿದೆ.

Advertisement

ಬೆಂಗಳೂರು: ನೆರೆಯಂತಹ ಘಟನೆಗಳು ಸಂಭವಿಸಿದಾಗ ಅತಿ ಹೆಚ್ಚು ಗೋಲ್‌ಮಾಲ್‌ ನಡೆಯುತ್ತದೆ, ಹಣ ಲೂಟಿಯಾಗುತ್ತದೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂತ್ರಸ್ತರ ಬ್ಯಾಂಕ್‌ ಖಾತೆಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಪರಿಹಾರ ವಿತರಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಯಾವುದೇ ವೈಫ‌ಲ್ಯವಾಗಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನೆರೆ ಮತ್ತು ಬರ ಕಾಣಿಸಿಕೊಂಡಿದೆ. ಒಂದೆಡೆ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಸ್ಪಂದಿಸುತ್ತಿದ್ದಂತೆ, ಮತ್ತೂಂದೆಡೆ ಕೇಂದ್ರ ಸರ್ಕಾರ 1,200 ಕೋಟಿ ರೂ.ಮಧ್ಯಂತರ ಪರಿಹಾರ ನೀಡಿದೆ. ಇದಕ್ಕಾಗಿ ಮೋದಿ, ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯದ ಕೇಂದ್ರ ಸಚಿವರು, ಒಟ್ಟಾರೆ ಮೇಲ್ವಿಚಾರಣೆ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಸಿಎಂ ಮತ್ತು ಅಧಿಕಾರಿಗಳಿಂದ ಅದ್ಭುತ ಕೆಲಸ: ಯಡಿಯೂರಪ್ಪ ಅವರು ನೆರೆಪೀಡಿತ ಪ್ರದೇಶದಲ್ಲಿ ಓಡಾಟ ನಡೆಸಿ, ಸಂತ್ರಸ್ತರ ಕಣ್ಣೊರೆಸುವ, ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ. ಮುಖ್ಯವಾಗಿ ರಾಜ್ಯದ ಎಲ್ಲ ಅಧಿಕಾರಿಗಳು ಮುಖ್ಯಮಂತ್ರಿ ಗಳೊಂದಿಗೆ ಕೈಜೋಡಿಸಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಬಳಿಕ ಉಸ್ತುವಾರಿ ಸಚಿವರು ನೆರೆ ಪ್ರದೇಶದಲ್ಲಿ 2- 3 ದಿನ ನಿಂತು ಅಧಿಕಾರಿಗಳಿಗೆ ಪ್ರೇರಣೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ತಂಡದ ಕಾರ್ಯ ನಿರ್ವಹಣೆ ಅಭಿನಂದನೀಯ ಎಂದು ಹೇಳಿದರು.

ನಾನು ನೆರೆ ಪ್ರದೇಶದವನು. ಅತಿ ಹೆಚ್ಚು ನೆರೆ ಬರುವುದು ಕರಾವಳಿ ಭಾಗಕ್ಕೆ. ವರ್ಷದಲ್ಲಿ ಎರಡು ಬಾರಿ ನೆರೆ ಬರುತ್ತದೆ. ರಾಜಕೀಯ ಕ್ಷೇತ್ರದಲ್ಲಿನ 20 ವರ್ಷದಲ್ಲಿ ಸರ್ಕಾರಗಳು ಹೇಗೆ ಸ್ಪಂದಿಸಿವೆ ಎಂಬುದನ್ನು ಅಧ್ಯಯನ ಮಾಡಿದ್ದೇನೆ. ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿದ್ದು ನೋಡಿದ್ದೇವೆ. ಪರಿಹಾರ ವಿತರಣೆಗೆ ವರ್ಷ ಕಳೆದಿದ್ದು ನೋಡಿದ್ದೇವೆ. ಕಳೆದ ಬಾರಿ ಕೊಡಗು, ಸುಳ್ಯ, ಸಂಪಾಜೆ ಭಾಗದಲ್ಲಿ ನೆರೆಯಿಂದ ಗುಡ್ಡು ಕುಸಿದು ಭಾರೀ ಹಾನಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಮನೆ ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 92,000 ಪರಿಹಾರ ಘೋಷಿಸಿದ್ದರು. ಆಗ ಆರಂಭವಾದ ಹಲವು ಮನೆಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಪ್ರಾರಂಭವಾಗಬೇಕಾದ ಕಾಮಗಾರಿ ಬಹಳಷ್ಟಿದೆ ಎಂದು ಮಾರ್ಮಿಕವಾಗಿ ನುಡಿದರು.

Advertisement

ಮೂರು ಬಾರಿ ನೆರೆ: ರಾಜ್ಯದಲ್ಲಿ ಈ ಬಾರಿ ಮೂರು ಬಾರಿ ನೆರೆ ಕಾಣಿಸಿಕೊಂಡಿತ್ತು. ಹೀಗಾಗಿ ಏಕಕಾಲಕ್ಕೆ ಸರ್ವೆ ಸಾಧ್ಯವಾಗಲಿಲ್ಲ. ದೇಶದ 13 ರಾಜ್ಯಗಳಲ್ಲಿ ಭೀಕರ ನೆರೆ ಕಾಣಿಸಿಕೊಂಡಿದೆ. 12 ರಾಜ್ಯಗಳಿಗೆ ಕೇಂದ್ರ ತಂಡ ಕಳುಹಿಸಿದೆ. ಅದರಂತೆ ರಾಜ್ಯದ ನಷ್ಟದ ಅಂದಾಜು ಹಾಗೂ ಕೇಂದ್ರ ತಂಡದ ವರದಿ ಪರಿಶೀಲಿಸಿ ಪರಿಹಾರ ಘೋಷಣೆಯಾಗಲಿದೆ. ಕೇರಳದಲ್ಲಿ ಕಳೆದ ವರ್ಷ ಜೂನ್‌, ಜುಲೈನಲ್ಲಿ ಕಾಣಿಸಿಕೊಂಡ ನೆರೆಗೆ ಪರಿಹಾರ ಬಂದಿದ್ದು ನವೆಂಬರ್‌ನಲ್ಲಿ ಎಂದು ಹೇಳಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ಉಪಸ್ಥಿತರಿದ್ದರು.

3,000 ಕೋಟಿ ರೂ.ಬಿಡುಗಡೆ: ಮನೆ ಕಳೆದುಕೊಂಡವರು ಮನೆ ನಿರ್ಮಿಸಿಕೊಳ್ಳಲು ಒಂದು ಲಕ್ಷ ರೂ.ವಿತರಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ 3,000 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ನಳಿನ್‌ ತಿಳಿಸಿದರು. ಯಡಿಯೂರಪ್ಪ ಅವರು ನೆರೆ ಪ್ರದೇಶದಲ್ಲಿ ಮನೆ ಕಳೆದುಕೊಂ ಡವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ತಕ್ಷಣದ ಪರಿಹಾರವಾಗಿ 10,000 ರೂ.ಬಿಡುಗಡೆ ಮಾಡಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರು ಇರಬಾರದು ಎಂಬ ಕಾರಣಕ್ಕೆ ಮಾಸಿಕ 5,000 ರೂ.ಬಾಡಿಗೆ ಕೂಡ ನೀಡುತ್ತಿದ್ದಾರೆ. ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಒಂದು ಲಕ್ಷ ರೂ. ಪರಿಹಾರ ವಿತರಿಸಿರುವುದು ಇತಿಹಾಸ. 4 ಲಕ್ಷ ಜನ ಎರಿಗೆ ತಲಾ 10,000 ರೂ.ನಂತೆ 100 ಕೋಟಿ ರೂ.ಗಳನ್ನು ಆರ್‌ಟಿಜಿಎಸ್‌ ಮೂಲಕ ನೀಡಲಾಗಿದೆ ಎಂದು ಹೇಳಿದರು.

ಸೂಲಿಬೆಲೆಗೆ ದೇಶದ್ರೋಹಿ ಅಂದಿಲ್ಲ: ಸದಾನಂದಗೌಡ
ಗಂಗಾವತಿ: ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ವಿರುದ್ಧ ಮಾಡಿದ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ದೇಶದ್ರೋಹಿ ಎಂದು ತಾವು ಟೀಕಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗುತ್ತಿದೆ. ಇದು ಶುದ್ಧ ಸುಳ್ಳು ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದ್ದು, ಯಾವುದೇ ಕಾರಣಕ್ಕೂ ಟೀಕೆ ಮಾಡಿದವರನ್ನು ದೇಶದ್ರೋಹಿಗಳು ಎಂದು ಜರಿಯುವಷ್ಟು ಸಣ್ಣ ಮನುಷ್ಯ ತಾವಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆ ಸಾಮಾನ್ಯ. ಆದ್ದರಿಂದ ದೇಶದ್ರೋಹದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಕೇಂದ್ರ ಕೊಟ್ಟ ಅನುದಾನ ಅರೆಕಾಸಿನ ಮಜ್ಜಿಗೆ
ಬೆಳಗಾವಿ: ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ 1,200 ಕೋಟಿ ರೂ. ಅನುದಾನ ಶೇ.10ರಷ್ಟು ನೆರೆ ಪೀಡಿತರ ಸಹಾಯಕ್ಕೆ ಸಾಕಾಗುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತ ನಾಡಿ, ಕೇಂದ್ರ ಸರ್ಕಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇವಲ 1,200 ಕೋಟಿ ಅನುದಾನ ಮಂಜೂರು ಮಾಡಿ ನೆರೆ ಪೀಡಿತರ ಕಣ್ಣೀರು ಒರೆಸುವ ಕಾರ್ಯ ಮಾಡಿದೆ ಎಂದು ಟೀಕಿಸಿದರು. ಅನುದಾನಕ್ಕಾಗಿ ನಾವೂ ಹೋರಾಟ ಮಾಡಿದ್ದು, ಅದರ ಫಲವಾಗಿಯೇ ಇಷ್ಟು ಅನುದಾನ ಬಿಡುಗಡೆ ಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ.

ನಮ್ಮ ಪ್ರತಿಭಟನೆಗೆ ಮಣಿದು ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದು ಹೋಗಿದ್ದಾರೆ. ನೆರೆ ಸಂತ್ರಸ್ತರ ನಿರ್ಲಕ್ಷ ಮುಂದುವರಿದರೆ ಮತ್ತೆ ಪ್ರತಿಭಟನೆಯ ಮಾರ್ಗದಿಂದ ಮುಖ್ಯಮಂತ್ರಿಗಳನ್ನು ಇಲ್ಲಿಗೆ ಕರೆಸುತ್ತೇವೆ ಎಂದರು.ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿಗಳು ಮನೆ ಕಟ್ಟಿಕೊಳ್ಳಲು ಐದು ಲಕ್ಷ ರೂ.ಪರಿಹಾರ ಘೋಷಿಸಿ ದ್ದಾರೆ. ಇದು ಸರ್ಕಾರದ ಆದೇಶವಾಗಬೇಕು, ಕೇವಲ ಬಾಯಿ ಮಾತು ನಡೆಯುವುದಿಲ್ಲ. ಈಗಾಗಲೇ ಅಂಗಡಿಕಾರರಿಗೆ 10,000 ರೂ.ನೀಡುವ ಆದೇಶ ನೀಡಿದ್ದರು. ಅದು ತಕ್ಷಣ ಜಾರಿಗೆ ಬರಬೇಕು. ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಕೇಂದ್ರದ ಅನುದಾನ ಒತ್ತಾಯಿಸಿ ಕಾಂಗ್ರೆಸ್‌ ಪಕ್ಷ ಅಧಿವೇಶನದಲ್ಲಿಯೂ ಧ್ವನಿ ಎತ್ತಲಿದೆ. ಡಿಸೆಂಬರ್‌ ತಿಂಗಳಲ್ಲಾದರೂ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.

ಗೋಕಾಕ ಉಪಚುನಾವಣೆಗೆ ಸಿದ್ಧತೆ ನಡೆದಿದೆ. ಅಶೋಕ ಪೂಜಾರಿ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿದೆ. ಆದರೆ, ಇದುವರೆಗೆ ಯಾವುದೂ ಅಂತಿಮವಾಗಿಲ್ಲ. ಸದ್ಯ ಲಖನ್‌ ಜಾರಕಿಹೊಳಿ ಮಾತ್ರ ಟಿಕೆಟ್‌ ರೇಸಿನಲ್ಲಿದ್ದಾರೆ.
-ಸತೀಶ ಜಾರಕಿಹೊಳಿ, ಶಾಸಕ

ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ: ಇಬ್ರಾಹಿಂ
ಬೆಂಗಳೂರು: ರಾಜ್ಯದಲ್ಲಿ ನೆರೆ ಹಾಗೂ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕುರಿತು ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕೆಂದು ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಠ 5 ಸಾವಿರ ಕೋಟಿ ರೂ. ನೆರವು ನೀಡಬೇಕಿತ್ತು. ಆದರೆ 1,200 ಕೋಟಿ ರೂ. ಮಾತ್ರ ನೀಡಿದೆ. ಅಲ್ಲದೆ, ಕೃಷಿ, ತೋಟಗಾರಿಕೆ ಬೆಳೆ ನಾಶ, ಆಸ್ತಿ-ಪಾಸ್ತಿ ನಷ್ಟವುಂಟಾಗಿರುವುದರಿಂದ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೋದಿಗೆ ಕರ್ನಾಟಕದ ಮೇಲೆ ಯಾಕೆ ಕೋಪ ಎಂಬುದು ಅರ್ಥವಾಗುತ್ತಿಲ್ಲ. ಪಾಪ, ಯಡಿಯೂರಪ್ಪ ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಅವರು ಮುಖ್ಯಮಂತ್ರಿಯಾದ ನಂತರ ಪ್ರಧಾನಿಯವರ ಬಳಿ ಹೋಗಿ ಮಾತನಾಡಲೇ ಇಲ್ಲ. “ಕೈ ಸಾ ಹೈ ಮನ್‌ ಕಿ ಬಾತ್‌’ ಅಂತಾದ್ರೂ ಹೋಗಿದ್ದರೆ ಕೇಳಬಹುದಿತ್ತು ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಹಾಗೂ ಸಂತೋಷ್‌ ಅವರ ಜಗಳದಲ್ಲಿ ರಾಜ್ಯ ಬಡವಾಗಿದೆ. ಇತ್ತ ನೆರೆ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳು ಬಂದ್‌ ಆಗಿವೆ. ಆ ಬಗ್ಗೆ ಸಚಿವರು ತಲೆಕೆಡಿಸಿಕೊಂಡಿಲ್ಲ. ನಾನು ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ವಿ.ಶ್ರೀನಿವಾಸಪ್ರಸಾದ್‌ ಅವರನ್ನು ಅಭಿನಂದಿಸುತ್ತೇನೆ. ರಾಜ್ಯದ ವಸ್ತುಸ್ಥಿತಿ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ಹೇಳಿದರು.

ಸದ್ಯಕ್ಕೆ ಉಸಿರಾಡಲು ಎಷ್ಟು ಬೇಕೋ ಅಷ್ಟು ಕೊಟ್ಟಿದ್ದಾರೆ
ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿ ಹಾರ ವಿಚಾರದಲ್ಲಿ ಸ್ಪಂದಿಸಿದೆ. ಸದ್ಯಕ್ಕೆ ಉಸಿರಾಡಲು ಎಷ್ಟು ಬೇಕೋ ಅಷ್ಟನ್ನು ಕೊಟ್ಟಿದೆ ಎಂದು ಮುಖ್ಯ ಮಂತ್ರಿ ಯವರ ರಾಜ ಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಹೇಳಿ ದ್ದಾರೆ. ವಿಧಾನ ಸೌಧ ದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರದಿಂದ 1,200 ಕೋಟಿ ರೂ. ಬಿಡುಗಡೆ ಯಾಗಿ ರುವುದು ಆಶಾಕಿರಣ. ಇದಕ್ಕಾಗಿ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ನೆರೆ ಉಂಟಾಗಿರುವ ಪ್ರದೇಶದ ಶಾಲೆ, ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಉಳಿದುಕೊಂಡು ವಾಸ್ತವ್ಯ ಮಾಡಬೇಕು. ಆಗ, ಅಲ್ಲಿನ ಸಮಸ್ಯೆ ಗೊತ್ತಾಗು ತ್ತದೆ. ನಾನೂ ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಿದ್ದೇನೆ ಎಂದು ತಿಳಿಸಿದರು.

ಕೇಂದ್ರದಿಂದ ಈಗ ಮಧ್ಯಂತರ ಅನುದಾನ ಬಂದಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರದಿಂದ ಇನ್ನಷ್ಟು ಅನುದಾನ ಬರಲಿದೆ.
-ಜಗದೀಶ ಶೆಟ್ಟರ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next