ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಕ್ಕೆ
ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ
ಮಧ್ಯಂತರ ತಡೆಯಾಜ್ಞೆ ನೀಡಿದೆ.
ತನ್ನ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ಆ ಸಂಬಂಧ ಅಧೀನ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕೋರಿ ರವಿ ಬೆಳಗೆರೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರವಿ ಬೆಳಗೆರೆ ಪರ ವಕೀಲ ವಾದಿಸಿ, ಪ್ರಕರಣವನ್ನು ದಾಖಲಿಸಿರುವ ಕ್ರಮ ಕಾನೂನಾತ್ಮಕವಾಗಿಲ್ಲ. ಹೀಗಾಗಿ ಕೆಳ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ, ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು. ತಮ್ಮ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣ ಕಾನೂನು ಬಾಹಿರ. ಪೊಲೀಸರ ತನಿಖೆ ಅಸಮಂಜಸ ಸಂಗತಿಗಳಿಂದ ಕೂಡಿದೆ. ಹಾಗೆಯೇ ಸಾಕ್ಷ್ಯಾಧಾರಗಳ ಕೊರತೆಯಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿ ರವಿ ಬೆಳಗೆರೆ ಕಳೆದ ನ.14ರಂದು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.