ಬೆಂಗಳೂರು: ಎರಡು ವರ್ಷದ ಹಿಂದೆ ನಡೆದಿದ್ದ ಕಾರ್ತಿಕ ರಾಜ ಎಂಬುವವರ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲಾಗುತ್ತದೆ ಎಂಬ ಬೆದರಿಕೆ ಹಾಕಿದ ಆರೋಪ ಪ್ರಕರಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನ್‌ಕುಮಾರ್ ಕಟೀಲ್ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ಕೋಣಾಜೆ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.ಈ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ನಳಿನ್‌ಕುಮಾರ್ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್, ಅರ್ಜಿದಾರರ ವಿರುದ್ಧ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದು, ಅವರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರಗಳನ್ನು ಪೊಲೀಸರು ಒದಗಿಸಿಲ್ಲ. ಹೀಗಾಗಿ, ಪ್ರಕರಣದ ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.
ವಾದ-ಪ್ರತಿವಾದ ಆಲಿಸಿ ನ್ಯಾಯಪೀಠ, ಅರ್ಜಿದಾರ ನಳಿನ್ ಕುಮಾರ್ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು. ಕಾರ್ತಿಕ ರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಜನವರಿ 1ರಂದು ಕೊಣಾಜೆ ಠಾಣೆಗೆ ಹೋಗಿದ್ದ ನಳಿನ್ ಕುಮಾರ ಕಟೀಲ್, ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಿಸಬೇಕಾಗುತ್ತದೆ ಎಂಬ ಬೆದರಿಕೆ ಒಡ್ಡಿದ ಆರೋಪ ಪ್ರಕರಣ ಎದುರಿಸುತ್ತಿದ್ದರು.