Advertisement

ಕುತೂಹಲಕಾರಿ ಇತಿಹಾಸ: ದ್ವೀಪ ರಾಷ್ಟ್ರದ ಕ್ರಿಕೆಟ್ ಹಡಗು ಹೀಗೆ ಯಾಕೆ ಮುಳುಗುತ್ತಿದೆ?

01:17 PM Jul 28, 2021 | ಕೀರ್ತನ್ ಶೆಟ್ಟಿ ಬೋಳ |
ಶ್ರೀಲಂಕಾ ಎಂಬ ಪುಟ್ಟ ರಾಷ್ಟ್ರದ ಕ್ರಿಕೆಟ್ ಇತಿಹಾಸವೇ ಅತ್ಯಂತ ಕುತೂಹಲಕಾರಿ. ಹಲವು ಎಡರು ತೊಡರುಗಳ ಮಧ್ಯೆ ಎದ್ದು ನಿಂತು ವಿಶ್ವಕಪ್ ಜಯಸಿದ ತಂಡ, ಅಸೂಯೆ, ಬಲಿಷ್ಠರ ದಮನಕಾರಿ ನೀತಿಗಳ ವಿರುದ್ದ ನಿಂತ ಕ್ರಾಂತಿಕಾರಿ ಅರ್ಜುನ ರಣತುಂಗರಂತಹ ನಾಯಕರಿದ್ದ ತಂಡ, ಸಿಂಹಳೀಯರ ಮಧ್ಯೆ ತಮಿಳು ಹುಡುಗನೊಬ್ಬ 800 ವಿಕೆಟ್ ಪಡೆದಂತಹ ತಂಡ, ಸತತ ವಿಶ್ವಕಪ್ ಗಳಲ್ಲಿ ಫೈನಲ್ ತಲುಪಿದ ತಂಡ, ಏಕದಿನ ಕ್ರಿಕೆಟ್ ನ ಪವರ್ ಪ್ಲೇಗೆ ಹೊಸ  ಭಾಷ್ಯ ಬರೆದ ತಂಡ ಇದೇ ದ್ವೀಪ ರಾಷ್ಟ್ರ ಶ್ರೀಲಂಕಾ....
Now pay only for what you want!
This is Premium Content
Click to unlock
Pay with

ಶ್ರೀಲಂಕಾ ಕ್ರಿಕೆಟ್ ಎಂದರೆ ಮೊದಲು ಸನತ್ ಜಯಸೂರ್ಯ, ಅರ್ಜುನ ರಣತುಂಗ, ಮುತ್ತಯ್ಯ ಮುರಳೀಧರನ್, ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆಯಂತಹ ದಿಗ್ಗಜ ಆಟಗಾರರ ಹೆಸರು ನೆನಪಾಗುತ್ತಿತ್ತು. ಆದರೆ ಇದೀಗ ಕಳಪೆ ಆಟ, ಅಸಭ್ಯ ವರ್ತನೆ, ಮಂಡಳಿಯ ವಿರುದ್ಧ ಗಲಾಟೆ ಇದೇ ಕೇಳಿ ಬರುತ್ತಿದೆ. ದ್ವೀಪ ರಾಷ್ಟ್ರದ ಕ್ರಿಕೆಟ್ ಹಡಗು ಹೀಗೆ ಯಾಕೆ ಮುಳುಗುತ್ತಿದೆ? ಅಸಲಿ ಕಾರಣವೇನು? ಲಂಕನ್ ಕ್ರಿಕೆಟ್ ನ ಭವಿಷ್ಯವೇನು? ಮುಂದೆ ಓದಿ.

Advertisement

ಶ್ರೀಲಂಕಾ ಎಂಬ ಪುಟ್ಟ ರಾಷ್ಟ್ರದ ಕ್ರಿಕೆಟ್ ಇತಿಹಾಸವೇ ಅತ್ಯಂತ ಕುತೂಹಲಕಾರಿ. ಹಲವು ಎಡರು ತೊಡರುಗಳ ಮಧ್ಯೆ ಎದ್ದು ನಿಂತು ವಿಶ್ವಕಪ್ ಜಯಸಿದ ತಂಡ, ಅಸೂಯೆ, ಬಲಿಷ್ಠರ ದಮನಕಾರಿ ನೀತಿಗಳ ವಿರುದ್ದ ನಿಂತ ಕ್ರಾಂತಿಕಾರಿ ಅರ್ಜುನ ರಣತುಂಗರಂತಹ ನಾಯಕರಿದ್ದ ತಂಡ, ಸಿಂಹಳೀಯರ ಮಧ್ಯೆ ತಮಿಳು ಹುಡುಗನೊಬ್ಬ 800 ವಿಕೆಟ್ ಪಡೆದಂತಹ ತಂಡ, ಸತತ ವಿಶ್ವಕಪ್ ಗಳಲ್ಲಿ ಫೈನಲ್ ತಲುಪಿದ ತಂಡ, ಏಕದಿನ ಕ್ರಿಕೆಟ್ ನ ಪವರ್ ಪ್ಲೇಗೆ ಹೊಸ  ಭಾಷ್ಯ ಬರೆದ ತಂಡ ಇದೇ ದ್ವೀಪ ರಾಷ್ಟ್ರ ಶ್ರೀಲಂಕಾ. ಆದರೆ ಇಂದು.. ಸ್ವತಃ ಆ ದೇಶದ ಅಭಿಮಾನಿಗಳೇ ತಮ್ಮ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ  ಬೆಂಕಿಯಂಡೆ ಉಗುಳುತ್ತಿದ್ದಾರೆ. ಎಲ್ಲವೂ ಕಾಲಚಕ್ರ!

ಕಳೆದ ಕೆಲವು ವರ್ಷಗಳಿಂದ ಕೆಲವು ದೇಶಗಳು ಕ್ರಿಕೆಟ್ ನಲ್ಲಿ ಉನ್ನತಿ ಸಾಧಿಸಿದರೆ, ಮತ್ತೆ ಕೆಲವು ದೇಶಗಳ ಕ್ರಿಕೆಟ್ ಬೆಳವಣಿಗೆ ಕುಂಠಿತವಾಗುತ್ತಿದೆ. ಅವುಗಳ ಪಟ್ಟಿಯಲ್ಲಿ ಮೊದಲು ಕೇಳಿ ಬರುವ ಹೆಸರು ಶ್ರೀಲಂಕಾ. 2011ರ ಏಕದಿನ ವಿಶ್ವಕಪ್ ನ ಫೈನಲ್ ತಲುಪಿದ್ದ ಶ್ರೀಲಂಕಾ ಮತ್ತೆರಡು ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಹಂತಕ್ಕೂ ಕಾಲಿರಿಸಿಲ್ಲ. ಈ ಹತ್ತು ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್ ತನ್ನ ಹಿಂದಿನ ಚಾರ್ಮ್ ಕಳೆದುಕೊಂಡು ಬಂದಿದೆ.

ಕಾರಣಗಳೇನು?

ದಿಗ್ಗಜರ ವಿದಾಯ

Advertisement

ಲಂಕಾ ತಂಡದ ದಿಗ್ಗಜರಾದ ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆ ಮತ್ತು ತಿಲಕರತ್ನೆ ದಿಲ್ಶನ್ ವಿದಾಯದ ಬಳಿಕ ಲಂಕಾ ಬ್ಯಾಟಿಂಗ್ ತನ್ನ ಬಲ  ಕಳೆದುಕೊಂಡಿತು. ಭಾರತ ತಂಡ ಸಚಿನ್ ತೆಂಡೂಲ್ಕರ್, ಸೆಹವಾಗ್, ದ್ರಾವಿಡ್ ಮುಂತಾದವರ ವಿದಾಯದ ಬಳಿಕ ಸರಿಯಾದ ಬದಲಿ ಆಟಗಾರರನ್ನು ಅವರ ಜಾಗಕ್ಕೆ ತುಂಬಿತ್ತು. ಹೀಗಾಗಿ ದೊಡ್ಡ ವ್ಯತ್ಯಾಸವಾಗಲಿಲ್ಲ. ಆದರೆ ನೆರೆಯ ರಾಷ್ಟ್ರದಲ್ಲಿ ದಿಗ್ಗಜರು ಬಿಟ್ಟುಹೋದ ಜಾಗ ತುಂಬಲು ಅಂತಹ ಸಶಕ್ತ ಆಟಗಾರರು ಸಿಗಲೇ ಇಲ್ಲ. ಅಥವಾ ಅವಕಾಶ ಪಡೆದವರು ಅದನ್ನು ಉಪಯೋಗಿಸಲಿಲ್ಲ. ಒಟ್ಟಿನಲ್ಲಿ ದಿಗ್ಗಜರ ವಿದಾಯ ಮಾತ್ರ ಲಂಕಾಗೆ ಇನ್ನೂ ಅರಗಿಸಲಾಗದ ತುತ್ತಾಗಿದೆ.

ಮೊನಚು ಕಳೆದುಕೊಂಡ ಬೌಲಿಂಗ್

ವೇಗಿ ಚಾಮಿಂಡ ವಾಸ್ ನಂತರ ಅವರ ಸ್ಥಾನ ತುಂಬಿದವರು ಲಸಿತ್ ಮಲಿಂಗ. ಆರಂಭದಲ್ಲಿಯೇ ಯಶಸ್ಸು ಪಡೆದ ಮಲಿಂಗ ಲಂಕಾ ಬೌಲಿಂಗ್ ಪಡೆಯ ಸಾರಥಿಯಾಗಿದ್ದರು. ಆದರೆ ವಯಸ್ಸಾದಂತೆ ಮಲಿಂಗ ಬೌಲಿಂಗ್ ಕೂಡಾ ತನ್ನ ವೇಗ ಮತ್ತು ಪ್ರಖರತೆಯನ್ನು ಕಳೆದುಕೊಂಡಿತು. ಮುರಳೀಧರನ್ ನಂತರ ಅವರ ಸ್ಥಾನಕ್ಕೆ ಬಂದ ರಂಗನ ಹೆರಾತ್ ಟೆಸ್ಟ್  ಗೆ ಸೀಮಿತವಾದರು. (  ಸದ್ಯ ವಿದಾಯ ಹೇಳಿದ್ದಾರೆ)  ಆದರೆ ಅಜಂತ ಮೆಂಡಿಸ್, ಸೂರಜ್ ರಣದೀವ್ ಮುಂತಾದವರು ಅಷ್ಟಾಗಿ ಪ್ರಭಾವ ಬೀರಲಿಲ್ಲ. ಹೀಗಾಗಿ ವರ್ಷ ಕಳೆದಂತೆ ಲಂಕಾ ಕ್ರಿಕೆಟ್ ನ ಬೌಲಿಂಗ್ ಕೂಡಾ ತನ್ನ ಮೊನಚು ಕಳೆದುಕೊಳ್ಳುತ್ತಿದದೆ.

ಅನುಭವದ ಕೊರತೆ

ಹಿರಿಯ ಆಟಗಾರರ ವಿದಾಯದ ಬಳಿಕ ಲಂಕಾ ತಂಡಕ್ಕೆ ಅನುಭವಿಗಳ ಕೊರತೆಯೂ ಕಾಡಿತು. ಪಂದ್ಯದಲ್ಲಿ ಪರಿಸ್ಥಿತಿಯನ್ನು ಹೇಗೆ ಉತ್ತಮವಾಗಿ ಎದುರಿಸಬೇಕು ಎಂದು ನಿರ್ಧರಿಸುವಲ್ಲಿ ತಂಡವು ಆಗಾಗ್ಗೆ ಸಂಕಷ್ಟವನ್ನು ಅನುಭವಿಸಿದೆ.

ಕೆಲವೊಮ್ಮೆ ಆರಂಭದಲ್ಲಿ ವಿಕೆಟ್ ಕಳೆದುಕೊಂಡ ನಂತರ ರಕ್ಷಣಾತ್ಮಕವಾಗಿ  ಆಡದೇ ಅನಗತ್ಯ ಹೊಡೆತಗಳ ಮೊರೆ ಹೋಗಿ ಕ್ಷಣ ಕಾಲದಲ್ಲಿ ಎಲ್ಲಾ ವಿಕೆಟ್ ಕಳೆದುಕೊಳ್ಳುತ್ತದೆ. ಉತ್ತಮ ಪಿಚ್ ಗಳಲ್ಲಿ ತಂಡ ಕಡಿಮೆ ರನ್ ಗೆ ಆಲ್ ಔಟ್ ಆಗುತ್ತಿದೆ. ಕೆಲವು ಆಟಗಾರರಿಗೆ ಆಟವೆನ್ನುವುದು ದ್ವಿತೀಯ ಆಯ್ಕೆಯಾಗಿದೆ. ಹಣ ಮತ್ತು ಮೋಜು ಮಸ್ತಿಯೇ ಅವರ ಪ್ರಮುಖ ಆದ್ಯತೆ. ಕ್ರಿಕೆಟ್ ಗಾಗಿ ತುಡಿತ ಈಗಿನ ಆಟಗಾರರಲ್ಲಿ ಕಾಣಿಸುತ್ತಿಲ್ಲ ಎಂದು  ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಬೇಸರ ವ್ಯಕ್ತ ಪಡಿಸುತ್ತಾರೆ.

ಚಂಡಿಮಾಲ್- ಮ್ಯಾಥ್ಯೂಸ್ ವೈಫಲ್ಯ

ಮಹೇಲಾ-ಸಂಗ ವಿದಾಯದ ಬಳಿಕ ಲಂಕಾ ತಂಡದ ಪ್ರಮುಖ ಆಟಗಾರರ ಜವಾಬ್ದಾರಿ ವಹಿಸಿಕೊಂಡಿದ್ದು ಆ್ಯಂಜಲೋ ಮ್ಯಾಥ್ಯೂಸ್ ಮತ್ತು ದಿನೇಶ್ ಚಂಡಿಮಾಲ್. ಲಂಕಾದ ಆಲ್ ರೌಂಡರ್ ಮ್ಯಾಥ್ಯೂಸ್ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಠ ಆಲ್ ರೌಂಡರ್ ಆಗಿದ್ದರು. ಬ್ಯಾಟ್ಸಮನ್ ದಿನೇಶ್ ಚಂಡಿಮಾಲ್ ಆರಂಭದ ದಿನಗಳಲ್ಲಿ ಭಾರತದ ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಲಾಗುತ್ತಿತ್ತು. ಅಷ್ಟರ ಮಟ್ಟಿಗಿತ್ತು ಇವರ ಪ್ರದರ್ಶನ. ಆದರೆ ಅದನ್ನು ಮುಂದುವರಿಸಲಿಲ್ಲ. ತಮ್ಮ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ತಂಡದಲ್ಲಿ ಎದುರು ನಿಂತು ಮುನ್ನಡೆಸಬೇಕಾದ ಈ ಹಿರಿಯರು ಸ್ಥಿರ ಆಟವಿಲ್ಲದೆ ಜವಾಬ್ದಾರಿಯಿಂದ ವಿಮುಖವಾಗಿದ್ದೇ ಹೆಚ್ಚು.

ಬಲವಿಲ್ಲದ ದೇಶಿ ಕ್ರಿಕೆಟ್

ವಿರಾಟ್ ಕೊಹ್ಲಿ ನೇತೃತ್ವದ ಪ್ರಮುಖ ತಂಡ ಇಂಗ್ಲೆಂಡ್ ಸರಣಿಯಲ್ಲಿದ್ದರೆ ಬಿಸಿಸಿಐ ಮತ್ತೊಂದು ತಂಡವನ್ನು ಲಂಕಾಗೆ ಕಳುಹಿಸಿದೆ. ಅದೂ ಬಲಿಷ್ಠ ತಂಡ. ಭಾರತದಲ್ಲಿ ಇಂತಹ ಪ್ರತಿಭಾನ್ವಿತ ಆಟಗಾರರ ಸೃಷ್ಠಿಗೆ ಪ್ರಮುಖ ಕಾರಣವೆಂದರೆ ದೇಶಿಯ ಕ್ರಿಕೆಟ್. ಭಾರತದಲ್ಲಿ ಪ್ರತಿ ರಾಜ್ಯಗಳಲ್ಲಿ ಕ್ರಿಕೆಟ್ ಗೆ ಉತ್ತಮ ಬೆಂಬಲ ನೀಡಲಾಗುತ್ತದೆ. ಸ್ಪರ್ಧಾತ್ಮಕ, ಉತ್ತಮ ದರ್ಜೆಯ ಕ್ರಿಕೆಟ್ ಆಡಿಸಲಾಗುತ್ತಿದೆ. ಆದರೆ ಲಂಕಾದಲ್ಲಿ ಇದರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ವಿಭಿನ್ನ ಪರಿಸ್ಥಿತಿಯ ಅರಿವಿಲ್ಲದ, ಉನ್ನತ ದರ್ಜೆಯ ಸ್ಪರ್ಧಾತ್ಮಕ ಆಟದ ಪರಿಚಯವಿಲ್ಲದ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಷ್ಟಪಡುತ್ತಿದ್ದಾರೆ.

ಆಡಳಿತ ದುಸ್ಥಿತಿ

ಶ್ರೀಲಂಕಾ ಕ್ರಿಕೆಟ್‌ನ ಚುನಾವಣಾ ವ್ಯವಸ್ಥೆಯು ಪುರಾತನವಾದುದು. ಸುಮಾರು 140 ಕ್ಕೂ ಹೆಚ್ಚು ಸದಸ್ಯರು ಆಡಳಿತ ಮಂಡಳಿಯನ್ನು ಆಯ್ಕೆ ಮಾಡುತ್ತಾರೆ, ಅವರಲ್ಲಿ ಹಲವರು ಕ್ಲಬ್‌ಗಳು ಮತ್ತು ಸಂಘಗಳಿಂದ ಬಂದವರು. ಅದರಲ್ಲೂ ಅನೇಕ ಕ್ಲಬ್ ಗಳು ಇದೀಗ ನಿಷ್ಕ್ರಿಯವಾಗಿದೆ. ಅಷ್ಟೇ ಅಲ್ಲದೆ ಹಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಇದರ ಉಳಿದಿದ್ದಾರೆ. ಇಲ್ಲಿ ಕ್ರಿಕೆಟ್ ಗಿಂತ ಹೆಚ್ಚಾಗಿ ರಾಜಕೀಯವೇ ನಡೆಯುತ್ತದೆ.

ರಾಷ್ಟ್ರದ ಕ್ರೀಡಾ ಕಾನೂನಿನ ಪ್ರಕಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಮೇಲ್ವಿಚಾರಣೆ ಮಾಡುವ ದೇಶದ ಕ್ರೀಡಾ ಮಂತ್ರಿಗಳು ಬಹುಶಃ ಸಾಂವಿಧಾನಿಕ ಮಟ್ಟದಲ್ಲಿ ಬದಲಾವಣೆಯನ್ನು ತರಲು ಸಹಾಯ ಮಾಡಬಹುದು. ಆದರೆ ಪ್ರಸ್ತುತ ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅತ್ಯಂತ ಶಕ್ತಿಶಾಲಿ ಲಂಕಾದ ರಾಜಕೀಯ ಕುಟುಂಬದಿಂದ ಬಂದವರಾಗಿದ್ದರೂ, ಕ್ರಿಕೆಟ್ ಆಡಳಿತದಲ್ಲಿ ಯಾವುದೇ ಗಂಭೀರವಾದ ಬದಲಾವಣೆಯನ್ನು ತಂದಿಲ್ಲ. ಅದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನೂ ಹೊಂದಿಲ್ಲ ಎನ್ನುತ್ತವೆ ಸ್ಥಳೀಯ ಮಾಧ್ಯಮಗಳು.

ಲಂಕಾ ಮಂಡಳಿ ಆರ್ಥಿಕವಾಗಿಯೂ ಸಬಲವಾಗಿಲ್ಲ. ಸತತ ಸರಣಿಗಳನ್ನು ಸೋಲುತ್ತಿರುವ ಕಾರಣ ಪ್ರಾಯೋಜಕತ್ವವೂ ಸಿಗುವುದು ಕಷ್ಟವಾಗಿದೆ. ಭಾರತ ವಿರುದ್ಧ ಸದ್ಯ ಏರ್ಪಡಿಸಿರುವ ಸರಣಿಯಿಂದ ಲಂಕಾ ಮಂಡಳಿಗೆ 89 ಕೋಟಿ ರೂ. ಲಾಭವಾಗಲಿದೆ. ಇದಕ್ಕಾಗಿ ಮೂರು ಪಂದ್ಯಗಳ ಸರಣಿಯನ್ನು ಲಂಕಾ ಮಂಡಳಿ ಬಿಸಿಸಿಐಗೆ ಮನವಿ ಮಾಡಿ ಆರು ಪಂದ್ಯಗಳ ಎರಡು ಸರಣಿಯನ್ನಾಗಿಸಿದ್ದು.

ಲಂಕಾ ತಂಡದಲ್ಲಿ ಗುತ್ತಿಗೆ ವಿಚಾರದ ಕಲಹವೂ ನಡೆಯುತ್ತಿದೆ. ಸೀನಿಯರ್ ಆಟಗಾರರಾದ ಚಂಡಿಮಾಲ್, ಆ್ಯಂಜಲೋ ಮ್ಯಾಥ್ಯೂಸ್, ಕರುಣರತ್ನೆ ಮುಂತಾದವರು ಸರಿಯಾದ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದರು. ಭಾರತ ವಿರುದ್ಧದ ಸರಣಿಯಿಂದಲೂ ಮ್ಯಾಥ್ಯೂಸ್ ‘ವೈಯಕ್ತಿಕ’ ಕಾರಣ ನೀಡಿ ಆಡದಿರಲು ನಿರ್ಧರಿಸಿದ್ದಾರೆ. ಒಟ್ಟಾರೆ ದ್ವೀಪ ರಾಷ್ಟ್ರದ ಕ್ರಿಕೆಟ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಂತೂ ನಿಜ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.