Advertisement

ಆನೆಗೆ ಇಲಿಯನ್ನು ಕಂಡರೆ ಭಯವೇ?

09:27 AM May 10, 2019 | Team Udayavani |

ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಹಾರುವ ಆನೆಯ ಚಿತ್ರವನ್ನು ನೋಡಿರಬಹುದು. ಡಿಸ್ನಿಯ ಈ ಹೊಸ ಚಿತ್ರದ ಹೆಸರು “ಡಂಬೋ’. ಅಗಲ ಕಿವಿಯ ಮುದ್ದು ಮುದ್ದಾದ ಆನೆ ಡಂಬೋ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನೂ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆ ಸಿನಿಮಾದಲ್ಲಿ ಡಂಬೋ ಆನೆ, ಇಲಿಯನ್ನು ನೋಡಿ ಹೆದರಿಕೊಳ್ಳುವ ದೃಶ್ಯವೊಂದು ಬರುತ್ತದೆ.

Advertisement

ಅದನ್ನು ಕಂಡವರು “ಎಷ್ಟೇ ಆದರೂ ಅದು ಸಿನಿಮಾ. ವಾಸ್ತವದಲ್ಲಿ ಆನೆಗೆ ಇಲಿಯ ಭಯವಿರಲು ಸಾಧ್ಯವೇ ಇಲ್ಲ’ ಅಂತ ಅಂದುಕೊಂಡಿದ್ದೇ ಹೆಚ್ಚು. ಅದೂ ಅಲ್ಲದೆ ಇಲಿ ಗಣಪತಿಯ ವಾಹನವಲ್ಲವೆ?! ಅಷ್ಟೊಂದು ಆಪ್ತ ಸಂಬಂಧ ಹೊಂದಿರುವ ಆನೆಗೆ ಇಲಿಯ ಭಯ ನಿಜಕ್ಕೂ ಇದೆಯೇ? ಇದೆ. ಆನೆಗೆ ಇಲಿಯನ್ನು ಕಂಡರೆ ಭಯ ಇದೆ. ಗಾತ್ರದಲ್ಲಿ, ಶಕ್ತಿಯಲ್ಲಿ ಇಲಿಗಿಂತ ಸಾವಿರಾರು ಪಟ್ಟು ಮುಂದಿರುವ ಆನೆಗೆ ಇಲಿಯ ಭಯ ಏಕಿದೆ ಅಂದಿರಾ? ವಾಸ್ತವದಲ್ಲಿ ಆನೆಗೆ ಇಲಿಯೊಂದೇ ಅಲ್ಲ, ಪುಟ್ಟ ಗಾತ್ರದ, ಚುರುಕಾಗಿ ಅತ್ತಿತ್ತ ಓಡುವ ಯಾವುದೇ ಪ್ರಾಣಿ ಕಂಡರೂ ಭಯವಾಗುತ್ತದೆ.

ಕೈಗೆ ಸಿಕ್ಕದ, ಚುರುಕಾಗಿ ತನ್ನ ಕಾಲುಗಳ ಸಂದುಗಳಲ್ಲೆಲ್ಲಾ ಓಡಿ ತಪ್ಪಿಸಿಕೊಳ್ಳುವುದರಿಂದಲೇ ಇಲಿಯನ್ನು ಕಂಡರೆ ಆನೆಗೆ ಭಯ. ಆನೆಯ ಈ ಭಯದ ಹಿಂದೆ ತಾನು ಇಲಿಗೆ ಏನೂ ಮಾಡಲಾಗದೇ ಇರುವ ಹತಾಶೆಯೂ ಇದೆ.

ಇದುವರೆಗೆ ಯಾರೂ ನೋಡಿರದ ಜೀವಿ


ಭೂಮಿ ಮೇಲಿನ ಜೀವಿಗಳಲ್ಲಿ ಬಹುತೇಕವನ್ನು ಮನುಷ್ಯ ದಾಖಲಿಸಿದ್ದಾನೆ. ಹಾಗೆ ನೋಡಿದರೆ, ಸಾಗರ ಮನುಷ್ಯನ ಪಾಲಿಗೆ ಇನ್ನೂ ಕುತೂಹಲದ ಕಣಜ. ಮೊಗೆದಷ್ಟೂ ಹೊಸ ಹೊಸ ಸಂಗತಿಗಳನ್ನು ತೆಗೆದುಕೊಡುತ್ತಲೇ ಇರುತ್ತದೆ. ಇತ್ತೀಚಿಗೆ ಸಂಶೋಧಕರ ತಂಡವೊಂದು ಹಿಂದೂ ಮಹಾಸಾಗರದ ಅತ್ಯಂತ ಆಳವಾದ ಭಾಗಕ್ಕೆ ತೆರಳಿತ್ತು.

ಇದುವರೆಗೂ ಆ ಭಾಗಕ್ಕೆ ಯಾರೂ ಹೋಗಿದ್ದೇ ಇಲ್ಲ. ಹೀಗಾಗಿ, ಇದುವರೆಗೂ ಯಾರೂ ದಾಖಲಿಸದ ಸಮುದ್ರ ಜೀವಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಆ ಜೀವಿಯ ದೇಹದಿಂದ ಸಪೂರವಾದ ಕೊಂಡಿಯೊಂದು ಉದ್ದಕ್ಕೆ ಬಿಡಿಸಿಕೊಳ್ಳುತ್ತಾ ಹೋಯಿತು. ಆ ಕೊಂಡಿಯ ತುದಿಯಲ್ಲಿ ಬಲೂನಿನ ಆಕಾರದ ರಚನೆ ಬಿಡಿಸಿಕೊಂಡಿತು. ಅದೆಲ್ಲವನ್ನೂ ಸಂಶೋಧಕರು ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಂಡರು.

Advertisement

ಅಪರಿಚಿತ ಜೀವಿಯೊಂದರ ಸನಿಹಕ್ಕೆ ಹೋಗುವುದೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ. ಏಕೆಂದರೆ ಗುರುತುಪರಿಚಯವಿಲ್ಲದ ಸ್ಥಳದಲ್ಲಿ, ಇದುವರೆಗೆ ಯಾರೂ ನೋಡದ ಜೀವಿಯನ್ನು ಮುಟ್ಟಿದರೆ ಅದೇನು ಮಾಡುತ್ತದೆ ಎನ್ನುವುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ.

ಅದಕ್ಕೆ ಪ್ರಕೃತಿ ಯಾವ ರೀತಿಯ ಆಯುಧವನ್ನು ದಯಪಾಲಿಸಿದೆಯೋ ಯಾರಿಗೆ ಗೊತ್ತು? ಹೀಗಾಗಿ ಸಂಶೋಧಕರು ಹಿಂದಿರುಗಿ ಬಂದಿದ್ದರು. “ಸಾಗರ ಎಂದಿಗೂ ಅಚ್ಚರಿ’ ಎಂಬ ಮಾತು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಇರುವುದು ಸುಳ್ಳಲ್ಲ!

— ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next