ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಹಣಕಾಸು ವರ್ಷ ಪೂರೈಸುತ್ತ ಮತ್ತೂಂದು ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಆಶ್ರಯ ಮನೆಗಳಿಗೆ ಇನ್ನೂ ಹಣ ಬಿಡುಗಡೆಯಾಗದೇ ಫಲಾನುಭವಿಗಳು ಸಾಲ ಮಾಡಿ ಮನೆ ಕಟ್ಟಿಕೊಂಡು ಸಾಲಗಾರರ ಕಾಟದಿಂದ ಪರದಾಡುವಂತಾಗಿದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳಲ್ಲಿ 15 ಲಕ್ಷ ಮನೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಐದು ವರ್ಷಗಳಲ್ಲಿ ಸರ್ಕಾರ 13.26 ಲಕ್ಷ ಮನೆ ನಿರ್ಮಿಸಿರುವುದಾಗಿ ಹೇಳಿದೆ. ಆದರೆ, ಅಧಿಕಾರದ ಕೊನೆಯ ವರ್ಷ ಮನೆಗಳ ನಿರ್ಮಾಣಕ್ಕೆ ಆಯ್ಕೆಯಾದ ಫಲಾನುಭವಿಗಳಿಗೆ ಅನುಮತಿ ನೀಡಲಾಯಿತು. ಆದರೆ, ಫಲಾನುಭವಿಗಳ ಆಯ್ಕೆ ಮಾಡಿ ಮನೆ ನಿರ್ಮಾಣ ಕಾರ್ಯ ಆರಂಭವಾಗುವ ಹೊತ್ತಿಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಹೊಸ ಸರ್ಕಾರ ಬಂದ ಮೇಲೆ ವಸತಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಯು.ಟಿ. ಖಾದರ್, ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸಿಕೊಂಡಿಲ್ಲ ಎಂದು ನಿರ್ಮಾಣ ಕಾರ್ಯವನ್ನು ತಡೆಹಿಡಿದಿದ್ದರು. ನಂತರ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ತಂತ್ರಾಂಶದ ತೊಡಕು ಹಾಗೂ ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗದ ಕಾರಣ ಅರಿತು ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಮನೆ ನಿರ್ಮಿಸಿಕೊಳ್ಳಬೇಕೆಂದು ತಡೆಯನ್ನು ತೆರವುಗೊಳಿಸಿ ಮನೆ ನಿರ್ಮಿಸಲು ಅವಕಾಶ ನೀಡಿದರು. ಸರ್ಕಾರ ನಿಗದಿ ಪಡಿಸಿರುವ ದಿನದೊಳಗಾಗಿ ಮನೆ ನಿರ್ಮಿಸಿಕೊಳ್ಳಲು ಖಾಸಗಿ ಲೇವಾದೇವಿದಾರರಿಂದ ಬಡ್ಡಿ ಸಾಲ ಪಡೆದು ಮನೆ ನಿರ್ಮಿಸಿಕೊಂಡವರಿದ್ದಾರೆ. ಆದರೆ, ಮನೆ ನಿರ್ಮಿಸಿಕೊಳ್ಳಲು ಹಂತ ಹಂತವಾಗಿ ಸರ್ಕಾರ ನೀಡಬೇಕಾದ ಅನುದಾನ ಬಿಡುಗಡೆಯಾಗದೇ ಫಲಾನುಭವಿಗಳು ಪರಿತಪಿಸುವಂತೆ ಮಾಡಿದೆ.
4 ಹಂತದಲ್ಲಿ ಹಣ ಬಿಡುಗಡೆ: ಪ್ರತಿ ಮನೆ ನಿರ್ಮಾಣಕ್ಕೂ ನಾಲ್ಕು ಹಂತದಲ್ಲಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಪ್ಲಿಂತ್ (ತಳಪಾಯ), ಲಿಂಟಲ್ ಲೆವೆಲ್ (ಬಾಗಿಲು ಕೂಡಿಸುವವರೆಗೆ), ಸ್ಲಾಬ್ (ಮೇಲ್ಚಾವಣಿ ಹಾಕುವುದು) ಕೊನೆಯ ಬಿಲ್ ಪೂರ್ಣ ಮನೆ ನಿರ್ಮಾಣ ಮಾಡಿದ ನಂತರ ಬಿಡುಗಡೆ ಮಾಡಲಾಗುತ್ತದೆ. ಬಸವ ವಸತಿ ಯೋಜನೆ ಅಡಿಯಲ್ಲಿ ಒಬ್ಬ ಫಲಾನುಭವಿಗೆ ಸಾಮಾನ್ಯ ವರ್ಗಕ್ಕೆ 1.27 ಲಕ್ಷ ರೂ. ಹಾಗೂ ನರೇಗಾ ಯೋಜನೆ ಅಡಿಯಲ್ಲಿ 99 ಮಾನವ ದಿನಗಳ ಕೂಲಿ ನೀಡಲಾಗುತ್ತದೆ. ಅದು ಸುಮಾರು 22 ಸಾವಿರ ರೂ. ನೀಡಲಾಗುತ್ತದೆ. ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ 1.75 ಲಕ್ಷ ರೂ.ಸಹಾಯಧನ ನೀಡಲಾಗುತ್ತದೆ.
ಆದರೆ, ಫಲಾನುಭವಿಗಳು ಪ್ರತಿಯೊಂದು ಹಂತದ ಮನೆ ನಿರ್ಮಾಣದ ಜಿಪಿಎಸ್ ಮೂಲಕ ಫೋಟೊ ತೆಗೆದು ನಿಗಮಕ್ಕೆ ಕಳುಹಿಸಬೇಕು. ಅವರು ಫಲಾನುಭವಿಗಳು ಪಂಚಾಯಿತಿ ಮೂಲಕ ಕಳುಹಿಸಿದ ಮನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಎರಡನೇ ಹಂತದ ಹಣ ಬಿಡುಗಡೆ ಮಾಡುತ್ತದೆ.
ಆದರೆ, ನಿಗಮದಿಂದ ಫಲಾನುಭವಿಗಳಿಗೆ ನಿಗದಿತ ಅವಧಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಅಧಿಕಾರಿಗಳು ಪಂಚಾಯಿತಿಗಳಿಗೆ ನಿಗದಿತ ಅವಧಿಯ ಟಾರ್ಗೆಟ್ ನೀಡಿ ಮನೆಗಳನ್ನು ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದರ ಪರಿಣಾಮ ರಾಜ್ಯದಲ್ಲಿ ಸುಮಾರು 1.5 ಲಕ್ಷ ಫಲಾನುಭವಿಗಳು ಅಧಿಕಾರಿಗಳ ಮಾತಿನಂತೆ ಸಾಲ ಮಾಡಿ ಮನೆ ಕಟ್ಟಿಸಿಕೊಂಡು, ಸರ್ಕಾರದ ಹಣ ಬರದೇ ಸಾಲಗಾರರ ಕಾಟ ತಾಳಲಾರದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಗಮದ ಮೂಲಗಳ ಪ್ರಕಾರ ಸುಮಾರು 500 ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡಬೇಕಿದೆ.
ಸರ್ಕಾರದಿಂದ ಮನೆ ಬಂದಿದ್ದರಿಂದ ಸರ್ಕಾರ ನಿಗದಿ ಪಡಿಸಿದ ದಿನದೊಳಗೆ ಮುಕ್ತಾಯಗೊಳಿಸದಿದ್ದರೆ, ಮನೆ ವಾಪಸ್ ಹೋಗುತ್ತದೆ ಎನ್ನುವ ಕಾರಣಕ್ಕೆ ಬಡ್ಡಿ ಸಾಲ ಮಾಡಿ ಮನೆ ಕಟ್ಟಿಸಿಕೊಂಡಿದ್ದೇನೆ. ವರ್ಷ ಕಳೆಯುತ್ತ ಬಂದರೂ ಹಣ ಬಂದಿಲ್ಲ. ಪಂಚಾಯಿತಿಯವರನ್ನು ಕೇಳಿದರೆ, ಸರ್ಕಾರದಿಂದ ಬರಬೇಕು ಅಂತ ಹೇಳ್ತಾರೆ. ● ಹೆಸರು ಹೇಳಲಿಚ್ಛಿಸದ ಫಲಾನುಭವಿ ಮಹಿಳೆ ಬಾಕಿ ಹಣ ಬಿಡುಗಡೆಗೆ ಸರ್ಕಾರ ತೀರ್ಮಾನಿಸಿದೆ. ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆ ಫಲಾನುಭವಿಗಳ ಬಾಕಿ ಹಣವನ್ನು ಒಂದು ವಾರದಲ್ಲಿ ಅಕೌಂಟ್‌ಗಳಿಗೆ ಟಾನ್ಸ್‌ಫರ್ ಮಾಡಲಾಗುತ್ತದೆ. ● ಹೆಸರು ಹೇಳಲು ಇಚ್ಛಿಸದ ರಾಜೀವ್ ಗಾಂಧಿ ನಿಗಮದ ಅಧಿಕಾರಿ
ಶಂಕರ ಪಾಗೋಜಿ